ಕೂಡ್ಲಿಗಿ (ವಿಜಯನಗರ ಜಿಲ್ಲೆ): ಪಟ್ಟಣದಿಂದ ಕೊಟ್ಟೂರಿಗೆ ಹೋಗುವ ಮಾರ್ಗ ಮಧ್ಯೆ ಸಾಸಲವಾಡ ಕ್ರಾಸ್ ಬಳಿ ನಿಂತಿದ್ದ ಮಿನಿ ಲಾರಿಗೆ ಲಾರಿಯೊಂದು ಡಿಕ್ಕಿ ಹೊಡೆದುದರಿಂದ ಮೂವರು ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ.
ಮೃತರನ್ನು ಕೊಟ್ಟೂರು ತಾಲ್ಲೂಕಿನ ಗಜಾಪುರದ ಮಿನಿ ಲಾರಿ ಚಾಲಕ ಗುರುವಣ್ಣ (40), ಭತ್ತನಹಳ್ಳಿಯ ತಿಪ್ಪಣ್ಣ (55) ಹಾಗೂ ಬಸವರಾಜ (25) ಎಂದು ಗುರುತಿಸಲಾಗಿದೆ.
ಕೊಟ್ಟೂರು ತಾಲ್ಲೂಕಿನ ಬತ್ತನಹಳ್ಳಿಯ ತಿಪ್ಪಣ್ಣ ಹಾಗೂ ಅವರ ಸಂಬಂಧಿಕರು ಸೇರಿ ಕೊಪ್ಪಳ ತಾಲ್ಲೂಕಿನ ಹುಲಿಗೆಮ್ಮ ದೇವಸ್ಥಾನಕ್ಕೆ ಹೊರಟಿದ್ದರು. ಊರಿನಿಂದ ಮಿನಿ ಲಾರಿಯಲ್ಲಿ ಒಟ್ಟು 10 ಜನರು ಹೊರಟು ಕೂಡ್ಲಿಗಿ ಕಡೆ ಬರುವಾಗ ತಮ್ಮ ಸಂಬಂಧಿಕರಿಗಾಗಿ ಕಾಯುತ್ತಾ ಸಾಸಲವಾಡ ಕ್ರಾಸ್ ಬಳಿ ಚಾಲಕ ಗುರುವಣ್ಣ, ತಿಪ್ಪಣ್ಣ, ಬಸವರಾಜ ಮಿನಿ ಲಾರಿಯ ಹಿಂಬದಿಯಲ್ಲಿ ನಿಂತಿದ್ದರು. ಈ ವೇಳೆ ಕೊಟ್ಟೂರು ಕಡೆಯಿಂದ ಬಂದ ಲಾರಿಯ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಿಂತಿದ್ದ ಮೂವರಿಗೆ ಡಿಕ್ಕಿ ಹೊಡೆಸಿ ನಂತರ ಮಿನಿ ಲಾರಿಗೆ ಡಿಕ್ಕಿ ಮಾಡಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡ ಗುರುವಣ್ಣ ಹಾಗೂ ತಿಪ್ಪಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸವರಾಜ ಕೂಡ್ಲಿಗಿ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಮಿನಿ ಲಾರಿಯಲ್ಲಿದ್ದ ಕೆ. ನಾಗಪ್ಪ, ರಾಧಮ್ಮ, ರತ್ನಮ್ಮ, ಶ್ರವಣ ಕುಮಾರ, ಸ್ಯಾವಮ್ಮ, ಮಮತಾ, ಆರು ಹಾಗೂ ಭಗತ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಕೂಡ್ಲಿಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತಕ್ಜೆ ಕಾರಣನಾದ ಚಾಲಕ ಲಾರಿಯೊಂದಿಗೆ ಪರಾರಿಯಾಗಿದ್ದ. ಆದರೆ ಶೋಧ ನಡೆಸಿದ ಪೊಲೀಸರು ಬಳ್ಳಾರಿಯಲ್ಲಿದ್ದ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರಿ ಹರಿಬಾಬು ಬಿ. ಎಲ್. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.