ADVERTISEMENT

ಒಡೆದ ತುಂಗಭದ್ರಾ ಕಾಲುವೆ: ಅಪಾರ ನೀರು ಪೋಲು

​ಪ್ರಜಾವಾಣಿ ವಾರ್ತೆ
Published 24 ಜುಲೈ 2022, 20:43 IST
Last Updated 24 ಜುಲೈ 2022, 20:43 IST

ಹೊಸಪೇಟೆ (ವಿಜಯನಗರ): ಇಲ್ಲಿನ ತುಂಗಭದ್ರಾ ಜಲಾಶಯದ ಮೇಲ್ಮಟ್ಟದ ಕಾಲುವೆ (ಎಚ್‌.ಎಲ್‌.ಸಿ.) ಒಡೆದು ಅಪಾರ ಪ್ರಮಾಣದ ನೀರು ಭಾನುವಾರ ರಾತ್ರಿ ಪೋಲಾಗಿದೆ.

ತಾಲ್ಲೂಕಿನ ನಲ್ಲಾಪುರ ಸಮೀಪ ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಎಚ್‌.ಎಲ್‌.ಸಿ.ಯ ಒಂದು ಭಾಗ ಒಡೆದು ಭಾರಿ ಪ್ರಮಾಣದ ನೀರು ಪಕ್ಕದ ಹಳ್ಳಕ್ಕೆ ನುಗ್ಗಿದೆ. ಅದಕ್ಕೆ ಹೊಂದಿಕೊಂಡಂತೆ ರೈತರ ಗದ್ದೆಗಳಿದ್ದು, ಅಲ್ಲಿಗೂ ನೀರು ನುಗ್ಗಲು ಆರಂಭಿಸಿದೆ. ತಡವಾಗಿ ವಿಷಯ ತಿಳಿದು ರೈತರು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿಯ ಅಧಿಕಾರಿಗಳ ಗಮನಕ್ಕೆ ತಂದ ನಂತರ ನೀರು ಹರಿಸುವುದು ನಿಲ್ಲಿಸಿದ್ದಾರೆ. ಆದರೆ, ಅಷ್ಟೊತ್ತಿಗೆ ಭಾರಿ ಪ್ರಮಾಣದ ನೀರು ವ್ಯರ್ಥವಾಗಿ ಹರಿದು ಹೋಗಿದೆ ಎಂದು ಸ್ಥಳೀಯ ರೈತರು ತಿಳಿಸಿದ್ದಾರೆ.

ಎಚ್‌.ಎಲ್‌.ಸಿ. ಮೂಲಕ 2,700 ಕ್ಯುಸೆಕ್‌ ನೀರು ಹರಿಸಲಾಗುತ್ತಿತ್ತು. ಕರ್ನಾಟಕ ಹಾಗೂ ಆಂಧ್ರ ಪ್ರದೇಶದ ಕೋಟಾ ಸೇರಿಸಿ ಜುಲೈ 12ರಿಂದ ನೀರು ಹರಿಸಲಾಗುತ್ತಿತ್ತು. ‘ಕಾಲುವೆ ಸಮೀಕ್ಷೆ ನಡೆಸಿದ್ದು, ಸುಸ್ಥಿತಿಯಲ್ಲಿದೆ ಎಂದು ಎಂಜಿನಿಯರ್‌ಗಳು ಮಾಹಿತಿ ನೀಡಿದ್ದು, ಅದನ್ನು ಆಧರಿಸಿ ನೀರು ಹರಿಸಲಾಗುತ್ತಿದೆ’ ಎಂದು ಮಂಡಳಿಯ ಕಾರ್ಯದರ್ಶಿ ಜಿ. ನಾಗಮೋಹನ್‌ ತಿಳಿಸಿದ್ದರು. ಕಾಲುವೆ ಒಡೆದಿರುವುದರ ಬಗ್ಗೆ ‘ಪ್ರಜಾವಾಣಿ’ ಆಡಳಿತ ಮಂಡಳಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ. ಇತ್ತೀಚೆಗೆ ಜಲಾಶಯದ ಕ್ರಸ್ಟ್‌ಗೇಟ್‌ ಸಂಖ್ಯೆ 21ರಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.