ADVERTISEMENT

ತುಂಗಭದ್ರಾ ಅಣೆಕಟ್ಟೆಯಲ್ಲಿ ಅವಘಡ: 19ನೇ ಗೇಟ್‌ ನೀರುಪಾಲು

ನಿರ್ವಹಣೆಯ ಕುರಿತು ಸಂಶಯ* 4–5 ದಿನಗಳಲ್ಲಿ ಗೇಟ್ ಅಳವಡಿಕೆಗೆ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2024, 2:59 IST
Last Updated 12 ಆಗಸ್ಟ್ 2024, 2:59 IST
ತುಂಗಭದ್ರಾ ಅಣೆಕಟ್ಟೆಯ ಕೊಚ್ಚಿ ಹೋದ 19ನೇ ಕ್ರಸ್ಟ್‌ಗೇಟ್‌ ಇದ್ದ ಸ್ಥಳವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾನುವಾರ ಪರಿಶೀಲಿಸಿದರು  –ಪ್ರಜಾವಾಣಿ ಚಿತ್ರ/ ಭರತ್‌ ಕಂದಕೂರ
ತುಂಗಭದ್ರಾ ಅಣೆಕಟ್ಟೆಯ ಕೊಚ್ಚಿ ಹೋದ 19ನೇ ಕ್ರಸ್ಟ್‌ಗೇಟ್‌ ಇದ್ದ ಸ್ಥಳವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾನುವಾರ ಪರಿಶೀಲಿಸಿದರು  –ಪ್ರಜಾವಾಣಿ ಚಿತ್ರ/ ಭರತ್‌ ಕಂದಕೂರ   

ಹೊಸಪೇಟೆ/ಕೊಪ್ಪಳ: ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್‌ಗೇಟ್‌ ಶನಿವಾರ ರಾತ್ರಿ ಕೊಚ್ಚಿ ಹೋಗಿದೆ. ಇದರಿಂದ ರೈತರ ಎರಡು ಬೆಳೆಯ ಕನಸು ನುಚ್ಚು ನೂರಾಗಿದೆ. ನಾಲ್ಕೈದು ದಿನಗಳೊಳಗೆ ಗೇಟ್‌ ಮತ್ತೆ ಅಳವಡಿಸಿ ಒಂದು ಬೆಳೆಗಾದರೂ ನೀರು ಒದಗಿಸುವ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ.

‘ಗೇಟ್‌ ಬಲಭಾಗದ ಕೊಂಡಿ ಮತ್ತು ಗೇಟ್‌ ನಡುವೆ ಇರುವ ಬೆಸುಗೆ ತುಂಡಾಗಿದ್ದರಿಂದ ಗೇಟ್‌ ಸಂಪೂರ್ಣವಾಗಿ ಒಮ್ಮುಖವಾಗಿ ಹೊರಳಿಕೊಂಡಿತ್ತು. ನೀರಿನ ರಭಸಕ್ಕೆ ಎಡಭಾಗದ ಕೊಂಡಿ ಸಹ ಕಳಚಿ ಇಡೀ ಗೇಟ್‌ ನೀರಲ್ಲಿ ಕೊಚ್ಚಿಕೊಂಡು ಹೋಗಿ ಈ ಅನಾಹುತ ಸಂಭವಿಸಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಗೇಟ್‌ಗಳ ನಿರ್ವಹಣೆ ಕುರಿತಂತೆ ಹಲವಾರು ಸಂದೇಹಗಳೂ ವ್ಯಕ್ತವಾಗಿವೆ.

70 ವರ್ಷಗಳ ಅಣೆಕಟ್ಟೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಗೇಟ್‌ ಸಂಪೂರ್ಣ ಕೊಚ್ಚಿ ಹೋಗಿದೆ. ನೀರಿನ ರಭಸಕ್ಕೆ 48 ಟನ್‌ ತೂಕದ ಗೇಟ್‌ ಸುಮಾರು 100 ಮೀಟರ್‌ನಷ್ಟು ದೂರಕ್ಕೆ  ಹೋಗಿದ್ದು, ಅದು ನಿಷ್ಪ್ರಯೋಜಕವಾಗಿದೆ. ‘ಎಲ್ಲಾ ಗೇಟ್‌ಗಳ ನಿರ್ವಹಣೆ ಸಮರ್ಪಕವಾಗಿಯೇ ನಡೆದಿದೆ. ಚೈನ್‌ ಲಿಂಕ್‌ನ ಬೆಸುಗೆ ಕಳಚಿಕೊಂಡಿದ್ದೇ ಈ ಅನಾಹುತಕ್ಕೆ ಕಾರಣ’ ಎಂದು ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತುಂಗಭದ್ರಾ ಜಲಾಶಯದ ಸಂಗ್ರಹ ಸಾಮರ್ಥ್ಯ 105.78 ಟಿಎಂಸಿ ಅಡಿ. ಶನಿವಾರವಷ್ಟೇ ಜಲಾಶಯ ಭರ್ತಿ ಆಗಿತ್ತು. ಇದೀಗ ಗೇಟ್ ಅಳವಡಿಸಲು ಜಲಾಶಯದ ನೀರನ್ನು 45 ಟಿಎಂಸಿ ಅಡಿಗೆ ಇಳಿಸಬೇಕಾಗಿದೆ. ಒಂದು ಲಕ್ಷಕ್ಕೂ ಅಧಿಕ ಕ್ಯುಸೆಕ್‌ ನೀರನ್ನು ನಿರಂತರ ನದಿಗೆ ಹರಿಯಬಿಡುವ ಮೂಲಕ ನಾಲ್ಕೈದು ದಿನದೊಳಗೆ ನೀರಿನ ಮಟ್ಟ ಇಳಿಸಿ ಕ್ರಸ್ಟ್‌ಗೇಟ್‌ ಅಳವಡಿಸಲು ಸಿದ್ಧತೆ ನಡೆದಿದೆ.

ಜಲಸಂಪನ್ಮೂಲ ಸಚಿವರ ಭೇಟಿ:

ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾನುವಾರ ಮಧ್ಯಾಹ್ನ ಅಣೆಕಟ್ಟೆಗೆ ಭೇಟಿ ನೀಡಿ ಗೇಟ್‌ ಕೊಚ್ಚಿಹೋದ ಸ್ಥಳ ಪರಿಶೀಲಿಸಿದರು. ಎಲ್ಲ ಸಂಪನ್ಮೂಲ ಬಳಸಿಕೊಂಡು ತಕ್ಷಣ ಗೇಟ್ ಅಳವಡಿಕೆಗೆ ಸಜ್ಜಾಗುವಂತೆ ಅಧಿಕಾರಿಗಳಿಗೆ ಸೂಚಿಸಿದರು.

‘ಜಲಾಶಯ ರಾಜ್ಯದ ಸಂಪತ್ತು. ಇದನ್ನು ಉಳಿಸಬೇಕಿದೆ. ಇದು ತಾಂತ್ರಿಕ ವಿಷಯ‌ವಾಗಿದ್ದು, ಮೊದಲು ಗೇಟ್ ಸರಿಪಡಿಸಲಾಗುವುದು. ದುರಂತಕ್ಕೆ ಕಾರಣ ಯಾರು ಎಂದು ಈಗ ಹುಡುಕುತ್ತ ಕುಳಿತುಕೊಳ್ಳದೆ ತಕ್ಷಣ ಗೇಟ್ ಅಳವಡಿಸಿ ರೈತರ ಕಷ್ಟ ಪರಿಹರಿಸುವುದೇ ಸರ್ಕಾರದ ಆದ್ಯತೆ’ ಎಂದು ಅವರು ಸ್ಪಷ್ಟಪಡಿಸಿದರು.

‘ರಾಜ್ಯದ ವಿಜಯನಗರ, ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳು, ಆಂಧ್ರ ಪ್ರದೇಶ ಹಾಗೂ ತೆಲಂಗಾಣಕ್ಕೆ ಸದ್ಯ ಮೊದಲ ಬೆಳೆಗೆ 25 ಟಿಎಂಸಿ ಅಡಿ ನೀರು ಪೂರೈಕೆಯಾಗಿದೆ. ಇನ್ನೂ 90 ಟಿಎಂಸಿ ಅಡಿ ನೀರು ಒದಗಿಸಬೇಕಾಗಿದೆ. ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಮಳೆ ಸುರಿದು ಜಲಾಶಯಕ್ಕೆ ನೀರು ಹರಿದು ಬರುವ ನಿರೀಕ್ಷೆ ಹೊಂದಲಾಗಿದೆ’ ಎಂದು ಅವರು ತಿಳಿಸಿದರು.

ಭಾನುವಾರ 98 ಸಾವಿರ ಕ್ಯುಸೆಕ್‌ ನೀರು ನದಿಗೆ ಹರಿಸಲಾಗಿದ್ದು, ಇದರಲ್ಲಿ 35 ಸಾವಿರ ಕ್ಯುಸೆಕ್‌ ನೀರು 19ನೇ ಗೇಟ್‌ನಿಂದಲೇ ಹರಿದು ಹೋಗುತ್ತಿದೆ. ಒಳಹರಿವಿನ ಪ್ರಮಾಣ 28 ಸಾವಿರ ಕ್ಯುಸೆಕ್‌ನಷ್ಟಿದೆ.

ನೀರಾವರಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ, ಸಣ್ಣ ನೀರಾವರಿ ಸಚಿವ ಎನ್‌.ಎಸ್‌.ಬೋಸರಾಜು ಅವರು ಶಿವಕುಮಾರ್‌ ಅವರ ಜತೆಗಿದ್ದರು.

ಹೊಣೆ ನಿಭಾಯಿಸಿಲ್ಲ:

‘ಎಂಟು ತಿಂಗಳುಗಳಿಂದ ಅಣೆಕಟ್ಟೆಯ ಮುಖ್ಯ ಎಂಜಿನಿಯರ್ ಹುದ್ದೆ ಖಾಲಿ ಇತ್ತು, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸಮರ್ಪಕವಾಗಿ ತಮ್ಮ ಹೊಣೆ ನಿಭಾಯಿಸದೆ ಇದ್ದ ಕಾರಣ ಈ ದುರಂತ ಸಂಭವಿಸಿದೆ’ ಎಂದು ಸಂಸದ ಇ.ತುಕಾರಾಂ ಆರೋಪಿಸಿದ್ದಾರೆ.

‘ರಾಜ್ಯದ ಜಲಾಶಯಗಳ ರಕ್ಷಣೆ ಬಗ್ಗೆ, ರೈತರ ಬೆವರಿನ ಹನಿಯ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕಾಳಜಿ ಇಲ್ಲ. ಸರ್ಕಾರದ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ’ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್‌ ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ತುಂಗಭದ್ರಾ ಅಣೆಕಟ್ಟೆಗೆ ಮಂಗಳವಾರ ಭೇಟಿ ನೀಡಲಿದ್ದಾರೆ. ಅಂದೇ ಜಲಾಶಯಕ್ಕೆ ಬಾಗಿನ ಅರ್ಪಿಸುವ ಕಾರ್ಯ ಈ ಮೊದಲು ನಿಗದಿ ಆಗಿತ್ತು. ಆದರೆ ಆ ಕಾರ್ಯಕ್ರಮ ನಡೆಯುವ ಬಗ್ಗೆ ಜಿಲ್ಲಾಡಳಿತ ಅನುಮಾನ ವ್ಯಕ್ತಪಡಿಸಿದೆ.

ತುಂಗಭದ್ರಾ ಅಣೆಕಟ್ಟೆಯ ಸುಸ್ಥಿತಿಯಲ್ಲಿರುವ ಮತ್ತು ಕಳಚಿ ಹೋದ ಕ್ರಸ್ಟ್‌ಗೇಟ್‌ ಸ್ಥಳದ ನೋಟ  –ಪ್ರಜಾವಾಣಿ ಚಿತ್ರ/ ಲವ ಕೆ.
ತುಂಗಭದ್ರಾ ಅಣೆಕಟ್ಟೆಯ ಚೈನ್‌ಲಿಂಕ್‌ ಬೆಸುಗೆ ತುಂಡಾದ ಸ್ಥಳ  –ಪ್ರಜಾವಾಣಿ ಚಿತ್ರ/ ಭರತ್ ಕಂದಕೂರ
ಕ್ರಸ್ಟ್‌ಗೇಟ್ ಇಲ್ಲದೆ (19ನೇ ಕ್ರಸ್ಟ್‌ಗೇಟ್‌ ಇದ್ದ ಸ್ಥಳ) ಜಲಾಶಯದಿಂದ ನದಿಗೆ ರಭಸವಾಗಿ ಯಾವುದೇ ಅಡೆತಡೆ ಇಲ್ಲದೆ ಹರಿಯುತ್ತಿರುವ ನೀರು  –ಪ್ರಜಾವಾಣಿ ಚಿತ್ರ/ ಲವ ಕೆ.
ಕೊಚ್ಚಿಹೋದ 19ನೇ ಕ್ರಸ್ಟ್‌ಗೇಟ್ ಸಮೀಪದ 18ನೇ ಕ್ರಸ್ಟ್‌ಗೇಟ್‌ನ ನೋಟ  –ಪ್ರಜಾವಾಣಿ ಚಿತ್ರ/ ಲವ ಕೆ.
ರೈತರಿಗೆ ಒಂದು ಬೆಳೆಗಾದರೂ ನೀರು ಒದಗಿಸಲು ಸರ್ಕಾರ ಸರ್ವ ಪ್ರಯತ್ನ ಮಾಡಲಿದೆ
ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ/ಜಲಸಂಪನ್ಮೂಲ ಸಚಿವ

12 ಲಕ್ಷ ಎಕರೆಗೆ ನೀರಿನ ಸೆಲೆ ಲಕ್ಷಾಂತರ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯ ರಾಜ್ಯದ ವಿಜಯನಗರ ಕೊಪ್ಪಳ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ 12 ಲಕ್ಷ ಎಕರೆ ಹಾಗೂ ಆಂಧ್ರ ಪ್ರದೇಶ ತೆಲಂಗಾಣದ ಸುಮಾರು 5 ಲಕ್ಷ ಎಕರೆಗೆ ನೀರುಣಿಸುತ್ತದೆ. ಈ ಬಾರಿ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯ ಭರ್ತಿಯಾಗಿತ್ತು. ಹೀಗಾಗಿ ಎರಡು ಬೆಳೆಗೆ ನೀರು ಸಿಗುವ ಆಶಾಭಾವನೆಯಲ್ಲಿ ರೈತರಿದ್ದರು. ಆದರೆ 19ನೇ ಗೇಟ್ ಕೊಚ್ಚಿ ಹೋಗಿರುವುದರಿಂದ ರೈತರು ಕಂಗಾಲಾಗಿದ್ದು ಸದ್ಯ ಒಂದು ಬೆಳೆಗೆ ಮಾತ್ರ ನೀರಿನ ಭರವಸೆ ಸಿಕ್ಕಿದೆ.

ಪ್ರವಾಹದ ಆತಂಕ ಇಲ್ಲ ತುಂಗಭದ್ರಾ ಅಣೆಕಟ್ಟೆಯಿಂದ ಹತ್ತು ದಿನಗಳ ಹಿಂದೆ 1.80 ಲಕ್ಷ ಕ್ಯುಸೆಕ್‌ನಷ್ಟು ನೀರನ್ನು ಹೊರಬಿಡಲಾಗಿತ್ತು. ಆಗಲೂ ಯಾವುದೇ ರೀತಿಯ ಪ್ರವಾಹ ಉಂಟಾಗಿರಲಿಲ್ಲ. ಈಗಲೂ ಅಷ್ಟೇ ನದಿಗೆ ನೀರು ಹರಿಸುವುದರಿಂದ ಪ್ರವಾಹದ ಅಪಾಯ ಇಲ್ಲ ಎಂದು ತುಂಗಭದ್ರಾ ಮಂಡಳಿ ಸ್ಪಷ್ಟಪಡಿಸಿದೆ. ಪ್ರವಾಸಿಗರಿಗೆ ನಿರ್ಬಂಧ: ಸುರಕ್ಷತೆಯ ದೃಷ್ಟಿಯಿಂದ ತುಂಗಭದ್ರಾ ಅಣೆಕಟ್ಟೆಯ ಎರಡು ಕಿ.ಮೀ ಸುತ್ತಮುತ್ತ ಜನರ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಗೇಟ್ ಅಳವಡಿಕೆ ಕಾರ್ಯ ಕೊನೆಗೊಳ್ಳುವವರೆಗೆ ಅಣೆಕಟ್ಟೆಯತ್ತ ಬಾರದಂತೆ ಪ್ರವಾಸಿಗರಿಗೆ ಸೂಚಿಸಲಾಗಿದೆ.

ಹೊಸಪೇಟೆಯಲ್ಲೇ ಗೇಟ್ ತಯಾರಿ ಕ್ರಸ್ಟ್ ಗೇಟ್‌ ಸಿದ್ಧಪಡಿಸುವ ಕೆಲಸವನ್ನು ಹೊಸಪೇಟೆಯ ನಾರಾಯಣ ಎಂಜಿನಿಯರಿಂಗ್ ಹಾಗೂ ಹಿಂದುಸ್ಥಾನ ಕಂಪನಿಗೆ ವಹಿಸಲಾಗಿದ್ದು ಈಗಾಗಲೇ ವಿನ್ಯಾಸ ನೀಡಲಾಗಿದೆ. ಇವೇ ಕಂಪನಿಗಳು ಈ ಹಿಂದೆಯೂ ಇಲ್ಲಿ ಗೇಟ್ ಅಳವಡಿಸಿದ್ದವು. ‘ಅಣೆಕಟ್ಟೆಯ 1ರಿಂದ 16ನೇ ಗೇಟುಗಳನ್ನು ಕೇಂದ್ರೀಯ ಜಲ ಆಯೋಗ (ಸಿಡಬ್ಲ್ಯುಸಿ) ನಿರ್ವಹಣೆ ಮಾಡುತ್ತದೆ. 17ರಿಂದ 33ರವರೆಗಿನ ಜವಾಬ್ದಾರಿ ಕರ್ನಾಟಕ ಸರ್ಕಾರದ್ದಾಗಿದೆ. ಕೇಂದ್ರ ಜಲ ಆಯೋಗದವರು ಕೂಡ ತಂತ್ರಜ್ಞರನ್ನು ಕಳುಹಿಸಿದ್ದಾರೆ. ನಾವು ಕೂಡ ನುರಿತ ತಂತ್ರಜ್ಞರನ್ನು ಕಳುಹಿಸಿದ್ದೇವೆ’ ಎಂದು ಶಿವಕುಮಾರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.