ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 19ನೇ ತೂಬಿಗೆ ತಾತ್ಕಾಲಿಕ ಗೇಟ್ ಅಳವಡಿಸಲು ಗುರುವಾರ ನಡೆದ ಪ್ರಯತ್ನ ವಿಫಲವಾಗಿದ್ದು, ವಿನ್ಯಾಸದಲ್ಲಿ ಬದಲಾವಣೆ ಮಾಡಿದ್ದರಿಂದ ಕೊಂಡಿ ಸಮಸ್ಯೆ ಆಗಿ ಒಂದು ಇಡೀ ದಿನ ವ್ಯರ್ಥವಾಗುವಂತಾಯಿತು ಎಂದು ಹೇಳಲಾಗುತ್ತಿದೆ.
ಗುರುವಾರ ಬೆಳಿಗ್ಗೆ ಗೇಟ್ ಎಲಿಮೆಂಟ್ ಜಿಂದಾಲ್ ಕಂಪನಿಯಿಂದ ಅಣೆಕಟ್ಟೆಯತ್ತ ಬಂದಾಗ ಸಾವಿರಾರು ಜನರು ಕುತೂಹಲದಿಂದ ಕಣ್ಣರಳಿಸಿದ್ದರು. ರೈತರಿಗೆ ಖುಷಿ ಸುದ್ದಿ ಸಿಗುತ್ತದೆ ಎಂದು ಭಾವಿಸಿದ್ದರು. ಆದರೆ ಗುರುವಾರ ಸಂಜೆಯ ವೇಳೆಗೆ ಈ ನಿರೀಕ್ಷೆ ಹುಸಿಯಾಯಿತು. ‘ಕೊಂಡಿ ಸಮಸ್ಯೆಯಿಂದ ಗೇಟ್ ಅಳವಡಿಕೆ ಸಾಧ್ಯವಾಗಲಿಲ್ಲ’ ಎಂದು ಮೂಲಗಳು ಹೇಳಿದ್ದರೂ, ಅಧಿಕಾರಿಗಳು ಇದನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಅವರು ಮಾತ್ರ ಈ ಬಗ್ಗೆ ಅಧಿಕೃತವಾಗಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.
‘ತಾತ್ಕಾಲಿಕ ಗೇಟ್ ಅಳವಡಿಕೆ ವೇಳೆ ತಳಭಾಗದ ಗೇಟ್ ಅತ್ಯಂತ ಬಲಿಷ್ಠವಾಗಿರಲಿ ಎಂಬ ಕಾರಣಕ್ಕೆ ಜಿಂದಾಲ್ ಕಂಪನಿ ವಿನ್ಯಾಸದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿತ್ತು. ಆದರೆ ಅದು ಕೊಂಡಿಯಲ್ಲಿ ಸರಿಯಾಗಿ ಕುಳಿತುಕೊಳ್ಳದೆ ಇರುವುದು ಪ್ರಾಯೋಗಿಕ ಪರೀಕ್ಷೆ ವೇಳೆ ಗೊತ್ತಾಯಿತು’ ಎಂದು ಮೂಲಗಳು ತಿಳಿಸಿವೆ. ಆದರೆ ಹೀಗೆ ವಿನ್ಯಾಸ ಬದಲಾಯಿಸಲು ಹೇಳಿದ್ದು ಯಾರು? ಅವರೇಕೆ ಈಗ ಸೋಲಿನ ಹೊಣೆ ಹೊರುತ್ತಿಲ್ಲ ಎಂಬ ಜನರು ಆಡಿಕೊಳ್ಳುತ್ತಿದ್ದಾರೆ.
ಒಂದು ವೇಳೆ ಗುರುವಾರವೇ ಗೇಟ್ ವಿನ್ಯಾಸ ಸರಿ ಇದ್ದು, ಧುಮ್ಮಿಕ್ಕುತ್ತಿರುವ ನೀರಿನಲ್ಲೇ ಗೇಟ್ ಎಲಿಮೆಂಟ್ ಭದ್ರವಾಗಿ ಕೂರುತ್ತಿದ್ದರೆ ಅದೊಂದು ದೇಶದ ಮಟ್ಟಿಗೆ ದಾಖಲೆ ಆಗಿರುತ್ತಿತ್ತು ಎಂದು ಹೇಳಲಾಗುತ್ತಿದೆ.
ಮಾಧ್ಯಮಗಳಿಗೆ ಕಟ್ಟುನಿಟ್ಟಿನ ನಿರ್ಬಂಧ: ಅಣೆಕಟ್ಟೆಯ ಭದ್ರತೆಯ ದೃಷ್ಟಿಯಿಂದ ಹಾಗೂ ಕಾಮಗಾರಿಗಳಿಗೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಅಣೆಕಟ್ಟೆಯ ಮಧ್ಯಭಾಗಕ್ಕೆ ತೆರಳಲು ಯಾರಿಗೂ ಅವಕಾಶ ನೀಡುತ್ತಿಲ್ಲ. ಆದರೆ ಮಾಧ್ಯಮಗಳಿಗೆ ಬಲದಂಡೆಯಲ್ಲಿ ಅಣೆಕಟ್ಟೆಯ ಗೇಟ್ ತನಕ ತೆರಳಲು ಅವಕಾಶ ಇತ್ತು. ಗುರುವಾರ ಮಧ್ಯಾಹ್ನದಿಂದ ಅದಕ್ಕೂ ತಡೆ ಬಿದ್ದಿದೆ. ಇದೀಗ ಮಾಧ್ಯಮಗಳು ಏನಿದ್ದರೂ ಮುನಿರಾಬಾದ್‌ನ ಹೆದ್ದಾರಿ ಸೇತುವೆಗಳ ಬಳಿ ಇರುವ, ನದಿ ಕವಲಾಗಿ ಹೋಗುವ ಸ್ಮಶಾನ ಬಳಿಯ ನಡುಗಡ್ಡೆಯಲ್ಲೇ ಮಳೆ, ಬಿಸಿಲಲ್ಲಿ ನಿಂತು ವರದಿ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ.
ಸಚಿವರಿಂದ ನಗದು ಭರವಸೆ: ಹೋದಲ್ಲಿ ಬಂದಲ್ಲಿ ಲಕ್ಷಗಟ್ಟಲೆ ‘ಸ್ವಂತ’ ಹಣ ಕೊಟ್ಟು ಸೈ ಎನಿಸಿಕೊಳ್ಳುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಗುರುವಾರ ಅಣೆಕಟ್ಟೆಗೆ ಬಂದು ಸಿಬ್ಬಂದಿಗೆ ತಲಾ ₹50 ಸಾವಿರ ನಗದು ನೀಡುವ ಭರವಸೆ ನೀಡಿದ್ದಾರೆ.
‘ಮಾಹಿತಿ ಕೊಡ್ತೇವೆ ಎಂದವರೇ ಮೌನ’
‘ಟಿ.ಬಿ.ಡ್ಯಾಂ ಗೇಟ್ ಅಳವಡಿಕೆ ವಿಷಯದ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ಪತ್ರಕರ್ತರಿಗೆ ಮಾಹಿತಿ ನೀಡಲಾಗುವುದು’ ಎಂದು ವಾರ್ತಾ ಇಲಾಖೆಯ ಮೂಲಕ ತುಂಗಭದ್ರಾ ಮಂಡಳಿ ಮತ್ತು ಜಿಲ್ಲಾಡಳಿತ ಸಂದೇಶ ರವಾನಿಸಿತ್ತು. ಆದರೆ ಗೇಟ್ ಅಳವಡಿಕೆಗೆ ಅಡ್ಡಿ ಆಗಿದ್ದುದು ಏನು ಎಂಬ ಮಾಹಿತಿ ಮಾತ್ರ ಸಿಗಲಿಲ್ಲ.
‘ಗೇಟ್ ವ್ಯರ್ಥವಾಗಲ್ಲ’
ಜಿಂದಾಲ್ ನಿರ್ಮಿಸಿದ ಗೇಟ್ ಎಲಿಮೆಂಟ್ ವ್ಯರ್ಥವಾಗಲ್ಲ ವಿನ್ಯಾಸಕ್ಕೆ ತಕ್ಕಂತೆ ಅದನ್ನು ಬದಲಿಸಿಕೊಳ್ಳುವುದು ಕಷ್ಟವಲ್ಲ. ಆದರೆ ಹಾಗೆ ಮಾಡುವುದಕ್ಕೆ ಸಮಯ ಬೇಕು ಇಡೀ ಗೇಟ್ ಅನ್ನು ವಿಭಜಿಸಿ ಮತ್ತೆ ಮರುಜೋಡಿಸಬೇಕು. ಹೀಗಾಗಿ ಈ ಗೇಟ್ ಅನ್ನು ಸದ್ಯ ಬಳಸದೆ ಮೀಸಲು ಗೇಟ್ ರೀತಿಯಲ್ಲಿ ಇಡಲಾಗುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.