ADVERTISEMENT

ತುಂಗಭದ್ರಾ ಜಲಾಶಯ: ಆರು ದಿನದಲ್ಲಿ 12 ಟಿಎಂಸಿ ಅಡಿ ನೀರು ಸಂಗ್ರಹ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 8:15 IST
Last Updated 23 ಆಗಸ್ಟ್ 2024, 8:15 IST
<div class="paragraphs"><p>ತುಂಗಭದ್ರಾ ಜಲಾಶಯ</p></div>

ತುಂಗಭದ್ರಾ ಜಲಾಶಯ

   

– ಪ್ರಜಾವಾಣಿ ಚಿತ್ರ

ADVERTISEMENT

ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯಲ್ಲಿ ಕೊಚ್ಚಿಹೋದ 19ನೇ ಗೇಟ್‌ ಇದ್ದ ಸ್ಥಳದಲ್ಲಿ ತಾತ್ಕಾಲಿಕ ಗೇಟ್ ಅಳವಡಿಸಿ ಆರು ದಿನ ಕಳೆದಿದ್ದು, ನೀರಿನ ಮಟ್ಟ ನಾಲ್ಕು ಅಡಿಯಷ್ಟು ಏರಿಕೆಯಾಗಿದೆ ಹಾಗೂ ಜಲಾಶಯದ ನೀರಿನ ಸಂಗ್ರಹ 12 ಟಿಎಂಸಿ ಅಡಿಯಷ್ಟು ಹೆಚ್ಚಳವಾಗಿದೆ.

ಅಣೆಕಟ್ಟೆಯ ನೀರಿನ ಮಟ್ಟ ಸದ್ಯ 1,627.01 ಅಡಿ (ಗರಿಷ್ಠ 1,633 ಅಡಿ) ಇದ್ದು, ಗರಿಷ್ಠ 105.78 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 83.24 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

ಆ.17ರಂದು ತಾತ್ಕಾಲಿಕ ಗೇಟ್‌ ಅಳವಡಿಕೆ ಯಶಸ್ವಿಯಾಗಿ ಕೊನೆಗೊಂಡಿತ್ತು. ಅಲ್ಲಿಂದೀಚೆಗೆ ಎಲ್ಲಾ ಗೇಟ್‌ಗಳನ್ನು ಬಂದ್‌ ಮಾಡಿ ನೀರು ಸಂಗ್ರಹಿಸುವುದಕ್ಕೆ ಆದ್ಯತೆ ನೀಡಲಾಗಿದೆ. ಕಾಲುವೆಗಳಲ್ಲಿ ಸರಾಸರಿ 9 ಸಾವಿರ ಕ್ಯುಸೆಕ್ ನಷ್ಟು ನೀರು ಹರಿಯುತ್ತಿದೆ.

ಜಲಾಶಯದ ಒಳಹರಿವಿನ ಪ್ರಮಾಣ ಎರಡು ವಾರದಿಂದಲೂ ಉತ್ತಮವಾಗಿಯೇ ಇದ್ದು, ಸದ್ಯ ಸರಾಸರಿ 37,489 ಕ್ಯುಸೆಕ್‌ನಷ್ಟು ಇದೆ. ದಿನಕ್ಕೆ ಸರಾಸರಿ 2 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗುತ್ತಿರುವ ಕಾರಣ ಇನ್ನು ನಾಲ್ಕು ದಿನಗಳಲ್ಲಿ 90 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಲಿದೆ. ಹೀಗಾದರೆ ಮೊದಲ ಬೆಳೆಗೆ ನೀರು ಪೂರ್ಣ ಪ್ರಮಾಣದಲ್ಲಿ ಸಿಗಲಿದೆ. ಕುಡಿಯುವ ನೀರು, ಉದ್ಯಮಗಳಿಗೆ ಸಹ ನೀರು ಖಾತರಿಯಾಗಲಿದೆ.

ಹಿಂಗಾರು ಮಳೆ ಕಳೆದ ಬಾರಿ ಕೈಕೊಟ್ಟಿತ್ತು. ಈ ಬಾರಿ ಹಿಂಗಾರು ಮಳೆ ಉತ್ತಮವಾಗಿ ಸುರಿದರೆ ಮತ್ತೆ 40ರಿಂದ 50 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿ ಎರಡನೇ ಬೆಳೆಗೂ ನೀರು ಲಭಿಸುವ ನಿರೀಕ್ಷೆ ಇದೆ.

ಕಳೆದ ವರ್ಷ ಮುಂಗಾರು ದುರ್ಬಲವಾಗಿತ್ತು ಹಾಗೂ ಹಿಂಗಾರಿನಲ್ಲಿ ಮಳೆಯೇ ಇರಲಿಲ್ಲ, ಹೀಗಾಗಿ ಒಂದು ಬೆಳೆಗೆ ಮಾತ್ರ ನೀರು ಒದಗಿಸಲಾಗಿತ್ತು. ಆಗಸ್ಟ್ 10ರಂದು ಕ್ರಸ್ಟ್ ಗೇಟ್ ಕೊಚ್ಚಿ ಹೋದ ಕಾರಣ ಕಳೆದ ವರ್ಷದ ಗತಿಯೇ ಈ ವರ್ಷವೂ ಆಗಲಿದೆಯೇ ಎಂದು ರೈತರು ಆತಂಕಪಟ್ಟಿದ್ದರು. ಆದರೆ ಕ್ರಸ್ಟ್‌ ಗೇಟ್ ತಜ್ಞ ಕನ್ಬಯ್ಯ ನಾಯ್ಡು ನೇತೃತ್ವದ ತಂಡ ತ್ವರಿತವಾಗಿ ತಾತ್ಕಾಲಿಕ ಗೇಟ್ ಅಳವಡಿಸಿ ಸುಮಾರು 30 ಟಿಎಂಸಿ ಅಡಿ ನೀರು ಪೋಲಾಗುವುದನ್ನು ಉಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.