ADVERTISEMENT

ತುಂಗಭದ್ರಾ ಅಣೆಕಟ್ಟೆ: ಗೇಟ್‌ ಅಳವಡಿಕೆ ಯತ್ನಕ್ಕೆ ‘ಕೊಂಡಿ’ ವಿಘ್ನ

ಬದಲಿ ಗೇಟ್‌ ತರಿಸಿ ಮುಂದುವರಿದ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 0:00 IST
Last Updated 16 ಆಗಸ್ಟ್ 2024, 0:00 IST
ಹೊಸಪೇಟೆ ಸಮೀಪದ ತುಂಗಭದ್ರಾ ಅಣೆಕಟ್ಟೆಗೆ ಗುರುವಾರ ಬೆಳಿಗ್ಗೆ ಗೇಟ್ ಎಲಿಮೆಂಟ್‌ ತರಲಾಯಿತು
–ಪ್ರಜಾವಾಣಿ ಚಿತ್ರ/ ಲವ ಕೆ.
ಹೊಸಪೇಟೆ ಸಮೀಪದ ತುಂಗಭದ್ರಾ ಅಣೆಕಟ್ಟೆಗೆ ಗುರುವಾರ ಬೆಳಿಗ್ಗೆ ಗೇಟ್ ಎಲಿಮೆಂಟ್‌ ತರಲಾಯಿತು –ಪ್ರಜಾವಾಣಿ ಚಿತ್ರ/ ಲವ ಕೆ.   

ಹೊಸಪೇಟೆ/ಕೊಪ್ಪಳ: ತುಂಗಭದ್ರಾ ಅಣೆಕಟ್ಟೆಯ 19ನೇ ತೂಬಿನಲ್ಲಿ ತಾತ್ಕಾಲಿಕವಾಗಿ ಜಿಂದಾಲ್‌ ಗೇಟ್ ಅಳವಡಿಸುವ ಪ್ರಯತ್ನ ಗುರುವಾರ ಇಡೀ ದಿನ ನಡೆದರೂ ಅದು ಸಫಲವಾಗಲಿಲ್ಲ. ಆದರೆ ಹೊಸಳ್ಳಿಯಲ್ಲಿ ಸಿದ್ಧವಾದ ಬದಲಿ ಗೇಟ್‌ ಅಳವಡಿಸುವ ಕಾರ್ಯಾಚರಣೆ ಮುಂದುವರಿದಿದೆ ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.

‘ಜಿಂದಾಲ್ ಕಂಪನಿಯಲ್ಲಿ ತಯಾರಿಸಲಾದ ಗೇಟ್‌ ಎಲಿಮೆಂಟ್‌ನ ಕೊಂಡಿಗಳು 19ನೇ ತೂಬಿನ ಕಲ್ಲಿನ ಪಿಲ್ಲರ್‌ನ ಕೊಂಡಿಗಳಿಗೆ ಸರಿಯಾಗಿ ಹೊಂದಾಣಿಕೆ ಆಗದ ಕಾರಣ ಆ ಗೇಟ್ ಅನ್ನು ಸದ್ಯ ಪಕ್ಕಕ್ಕೆ ಇರಿಸಿ, ಹೊಸಳ್ಳಿಯಲ್ಲಿ ಸಿದ್ಧವಾದ ಗೇಟ್ ಎಲಿಮೆಂಟ್‌ ಅನ್ನು ತಂದು ಇರಿಸಲು ನಿರ್ಧರಿಸಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗುರುವಾರ ಬೆಳಿಗ್ಗೆಯೇ ಅಣೆಕಟ್ಟೆಯ ಬಲದಂಡೆಗೆ ಜಿಂದಾಲ್‌ನಿಂದ 60 ಅಡಿ ಅಗಲ, 4 ಅಡಿ ಎತ್ತರದ ಗೇಟ್‌ ಎಲಿಮೆಂಟ್ 18 ಗಾಲಿಗಳ ಬೃಹತ್ ಟ್ರಕ್‌ನಲ್ಲಿ ಬಂದಿತ್ತು. ಮಧ್ಯಾಹ್ನದ ವೇಳೆಗೆ ಅದನ್ನು 19ನೇ ಗೇಟ್‌ ಸಮೀಪಕ್ಕೆ ಸಾಗಿಸಲಾಗಿತ್ತು. ಎರಡು ಕ್ರೇನ್‌ಗಳಿಂದ ಗೇಟ್ ಎತ್ತಿ ಇರಿಸುವ ಪ್ರಯೋಗ ಹಲವು ಬಾರಿ ನಡೆಯಿತು. ಆದರೆ ಕೊಂಡಿ ಸರಿಯಾಗಿ ಹೊಂದಾಣಿಕೆ ಆಗುತ್ತಿಲ್ಲ ಎಂಬುದು ಆಗ ಖಚಿತವಾಗಿತ್ತು. ಆರಂಭದಲ್ಲಿ ಇರಿಸುವ ಗೇಟ್ ಬಹಳಷ್ಟು ಬಲಿಷ್ಠವಾಗಿರಬೇಕು ಎಂಬ ಕಾರಣಕ್ಕೆ ಮೂಲ ವಿನ್ಯಾಸದ ಬದಲಿಗೆ ತುಸು ಬದಲಾವಣೆ ಮಾಡಿ ವಿನ್ಯಾಸ ಮಾಡಿದ್ದರಿಂದ ಈ ಕೊಂಡಿ ಹೊಂದಾಣಿಕೆ ಸಮಸ್ಯೆ ಎದುರಾಯಿತು ಎಂದು ಮುಖ್ಯ ಸಲಹೆಗಾರ ಕನ್ನಯ್ಯ ನಾಯ್ಡು ಮಾಹಿತಿ ನೀಡಿದರು.

ADVERTISEMENT

ಸಂಜೆ 5.30ರವರೆಗೂ ಜಿಂದಾಲ್‌ ಗೇಟ್‌ ಅಳಡಿಸುವ ಪ್ರಯತ್ನ ನಡೆಯಿತು. ಆದರೆ ಈ ಗೇಟ್‌ನ ವಿನ್ಯಾಸಕ್ಕೆ ಸರಿ ಹೊಂದುವಂತೆ ಅಣೆಕಟ್ಟೆಯ ಪಿಲ್ಲರ್‌ನಲ್ಲಿ ಬದಲಾವಣೆ ಮಾಡುವುದು ಬೇಡ ಎಂದು ನಿರ್ಧರಿಸಿದ ಅಧಿಕಾರಿಗಳು, ಈ ಗೇಟ್‌ ಬದಿಗಿರಿಸಿ ಮೂಲ ವಿನ್ಯಾಸದಂತೆಯೇ ಸಿದ್ಧವಾಗಿರುವ ಗೇಟ್‌ ಅನ್ನು ಇರಿಸಲು ತೀರ್ಮಾನಿಸಿದರು ಎಂದು ಕಾರ್ಯಾಚರಣೆಯ ಸ್ಥಳದಲ್ಲಿದ್ದ ಇನ್ನೊಬ್ಬ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜಲಾಶಯದ ನೀರನ್ನು ಗರಿಷ್ಠ ಪ್ರಮಾಣದಲ್ಲಿ ಉಳಿಸಲು ಅಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದು, ವಿಳಂಬ ಮಾಡದೆ ಗೇಟನ್ನು ರಾತ್ರಿಯೇ ತರಿಸಲು ಮುಂದಾಗಿದ್ದಾರೆ. ಹೀಗಿದ್ದರೂ ಜಲಾಶಯದಿಂದ 1.10 ಲಕ್ಷ ಕ್ಯುಸೆಕ್‌ನಷ್ಟು ನೀರು ಹೊರಕ್ಕೆ ಹೋಗುತ್ತಿದ್ದು, ನೀರಿನ ಮಟ್ಟ 1,625.22 ಅಡಿಗೆ ಕುಸಿದಿದೆ (ಗರಿಷ್ಠ ಮಟ್ಟ 1,633 ಅಡಿ) ಹಾಗೂ ಜಲಾಶಯದ ನೀರಿನ ಪ್ರಮಾಣ 77.21 ಟಿಎಂಸಿ ಅಡಿಗೆ ಇಳಿಕೆಯಾಗಿದೆ. ಆ.10ರಂದು ಗೇಟ್ ದುರಂತ ಸಂಭವಿಸಿದಾಗ ಜಲಾಶಯ ಭರ್ತಿಯಾಗಿ 105.78 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಸದ್ಯ 35,437 ಕ್ಯುಸೆಕ್‌ನಷ್ಟು ಒಳಹರಿವು ಇದೆ.

ಅಧಿಕಾರಿಗಳ ಕಾರ್ಯಾಚರಣೆಯ ವೇಳಾಪಟ್ಟಿಯಂತೆ ಶುಕ್ರವಾರ ನೀರಿನ ಮಟ್ಟ 1,621.72 ಅಡಿಗೆ ಕುಸಿಯುತ್ತದೆ ಹಾಗೂ ನೀರಿನ ಸಂಗ್ರಹ 66.30 ಟಿಎಂಸಿ ಅಡಿಗೆ ಇಳಿದಿರುತ್ತದೆ. ಹೀಗಿದ್ದರೂ 19ನೇ ಗೇಟ್‌ನಲ್ಲಿ ನೀರು ಧುಮ್ಮಿಕ್ಕಿ ಹರಿಯುತ್ತಲೇ ಇರುತ್ತದೆ. ಇಂತಹ ಸನ್ನಿವೇಶದಲ್ಲೂ ಯಶಸ್ವಿಯಾಗಿ ಮೊದಲ ಗೇಟ್ ಅಳವಡಿಸಿದ್ದೇ ಆದರೆ ಅದು ದೇಶದ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಲಿದೆ ಎಂದು ಕನ್ನಯ್ಯ ನಾಯ್ಡು ಈಗಾಗಲೇ ತಿಳಿಸಿದ್ದಾರೆ.

ಈ ಮಧ್ಯೆ, ಕ್ರಸ್ಟ್‌ಗೇಟ್ ಕೊಚ್ಚಿಕೊಂಡು ಹೋಗಲು ಕಾರಣವಾದ ತುಂಡಾದ ಚೈನ್‌ಲಿಂಕ್‌ ಅನ್ನು ಗುರುವಾರ ಯಶಸ್ವಿಯಾಗಿ ಕ್ರೇನ್‌ ಮೂಲಕ ತೆಗೆಯಲಾಗಿದೆ.

ಎಸ್‌ಡಿಆರ್‌ಎಫ್‌ ತಂಡ ನಿಯೋಜನೆ: ಕಾರ್ಯಾಚರಣೆಯಲ್ಲಿ 80ಕ್ಕೂ ಹೆಚ್ಚು ಅಧಿಕಾರಿಗಳು, ಸಿಬ್ಬಂದಿ ತೊಡಗಿಕೊಂಡಿದ್ದಾರೆ. ಈ ವೇಳೆ ಸಂಭವಿಸಬಹುದಾದ ಯಾವುದೇ ಅನಾಹುತ ತಪ್ಪಿಸುವ ಸಲುವಾಗಿ ಎಸ್‌ಡಿಆರ್‌ಎಫ್‌ನ ಸುಮಾರು 15 ಮಂದಿ ಸಿಬ್ಬಂದಿಯನ್ನು ಅಣೆಕಟ್ಟೆಯ ಮೇಲ್ಭಾಗದಲ್ಲಿ ಮತ್ತು ಕೆಳಭಾಗದ ನಡುಗಡ್ಡೆಯಲ್ಲಿ ನಿಯೋಜಿಸಲಾಗಿದೆ. ರಬ್ಬರ್‌ ಬೋಟ್‌ ಅನ್ನು ಸಹ ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ.

ಹೊಸಪೇಟೆ ಸಮೀಪದ ತುಂಗಭದ್ರಾ ಅಣೆಕಟ್ಟೆಯ19ನೇ ಕ್ರಸ್ಟ್‌ಗೇಟ್‌ ಇದ್ದ ತೂಬಿನಲ್ಲಿ ತಾತ್ಕಾಲಿಕ ಗೇಟ್ ಅಳವಡಿಸುವ ಪ್ರಯತ್ನ ಗುರುವಾರ ನಡೆಯಿತು  –ಪ್ರಜಾವಾಣಿ ಚಿತ್ರ/ ಲವ ಕೆ.
19ನೇ ಗೇಟ್‌ನ ಪಿಲ್ಲರ್‌ನಲ್ಲಿನ ಕೊಂಡಿಯನ್ನು ಪರೀಕ್ಷೆ ಮಾಡಲು ಧುಮ್ಮಿಕ್ಕುತ್ತಿರುವ ನೀರಿನ ಸಮೀಪಕ್ಕೆ ಕ್ರೇನ್‌ ಮೂಲಕ ಬಂದ ಸಿಬ್ಬಂದಿ –ಪ್ರಜಾವಾಣಿ ಚಿತ್ರ/ ಲವ ಕೆ.
ಹೊಸಳ್ಳಿಯಲ್ಲಿ ತಯಾರಿಸಲಾದ ಎಲಿಮೆಂಟ್‌ ಅನ್ನು ಜಲಾಶಯದ 19ನೇ ಗೇಟ್‌ನಲ್ಲಿ ಇಳಿಸಲು ಪ್ರಯತ್ನ ಮಾಡಲಾಗುತ್ತಿದೆ ಅದು ಸಫಲವಾಗುವ ವಿಶ್ವಾಸ ಇದೆ
ರಾಜಶೇಖರ ಹಿಟ್ನಾಳ ಕೊಪ್ಪಳ ಸಂಸದ
ವಿಡಿಯೋಗ್ರಫಿ ನಿಷೇಧ:
ಅಚ್ಚರಿ ಮೂಡಿಸಿದ ಡ್ರೋನ್‌ ಗೇಟ್ ಅಳವಡಿಸುವ ಕಾರ್ಯಾಚರಣೆಯ ವಿಡಿಯೊವನ್ನು ಯಾರೂ ಮಾಡಕೂಡದು. ವಿಜಯನಗರ ಮತ್ತು ಕೊಪ್ಪಳ ಜಿಲ್ಲಾಡಳಿತ ಸಹ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂಬ ಸೂಚನೆಯನ್ನು ಕನ್ನಯ್ಯ ನಾಯ್ಡು ಅವರು ತುಂಗಭದ್ರಾ ಮಂಡಳಿಯ ಮೂಲಕ ತಿಳಿಸಿದ್ದಾರೆ. ಹೀಗಾಗಿ ಗೇಟ್ ಸಮೀಪಕ್ಕೆ ಮಾಧ್ಯಮದವರಿಗೆ ಪ್ರವೇಶ ನೀಡಿಲ್ಲ. ಅಣೆಕಟ್ಟೆ ಕೆಳಭಾಗದ ನದಿಯ ನಡುಗಡ್ಡೆಯಲ್ಲಿ ನಿಂತು ಮಾಧ್ಯಮ ಪ್ರತಿನಿಧಿಗಳು ದೂರದಿಂದ ಕಾರ್ಯಾಚರಣೆಯ ವಿಡಿಯೊ ಚಿತ್ರೀಕರಿಸುತ್ತಿದ್ದಾರೆ. ಹೀಗಿದ್ದರೂ ಗುರುವಾರ ಸಂಜೆ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳದಿಂದ ಡ್ರೋನ್‌ ಒಂದು ವೇಗವಾಗಿ ಹಾರಿ ಬಂದಿದ್ದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.