ADVERTISEMENT

ಹೊಸಪೇಟೆ: ಗೋಧೂಳಿಯಲ್ಲಿ ರಂಜಿಸಿತು ವಸಂತ ವೈಭವ

ಸಿ.ಶಿವಾನಂದ
Published 2 ಫೆಬ್ರುವರಿ 2024, 5:18 IST
Last Updated 2 ಫೆಬ್ರುವರಿ 2024, 5:18 IST
ಹಂಪಿ ಉತ್ಸವದ ಪ್ರಯುಕ್ತ ಹೊಸಪೇಟೆಯಲ್ಲಿ ಗುರುವಾರ ನಡೆದ ವಸಂತ ವೈಭವ ಜಾನಪದ ತಂಡಗಳ ಶೋಭಾಯಾತ್ರೆಯ ಸೊಬಗು –ಪ್ರಜಾವಾಣಿ ಚಿತ್ರ
ಹಂಪಿ ಉತ್ಸವದ ಪ್ರಯುಕ್ತ ಹೊಸಪೇಟೆಯಲ್ಲಿ ಗುರುವಾರ ನಡೆದ ವಸಂತ ವೈಭವ ಜಾನಪದ ತಂಡಗಳ ಶೋಭಾಯಾತ್ರೆಯ ಸೊಬಗು –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ನಗರದಲ್ಲಿ ಹಂಪಿ ಉತ್ಸವದ ಅಂಗವಾಗಿ ಗುರುವಾರ ನಡೆದ ವಸಂತ ವೈಭವದಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಕಲಾವಿದರು ತಮ್ಮ ಕಲಾ ನೈಪುಣ್ಯತೆಯನ್ನು ಪ್ರದರ್ಶಿಸಿದರು.

ವಡಕರಾಯ ದೇವಸ್ಥಾನದಿಂದ ಆರಂಭಗೊಂಡ ಉತ್ಸವ ಮುಖ್ಯರಸ್ತೆಯಲ್ಲಿ ಸಾಗಿದಾಗ ಕಲಾವಿದರ ಕಲಾವಂತಿಕೆಯ ಮೆರಗಿಗೆ ಸೂರ್ಯ ಮುಳುಗುವ ವೇಗ ಕಡಿಮೆ ಮಾಡಿ ವಸಂತ ವೈಭವ ಕಣ್ತುಂಬಿಕೊಂಡಂತೆ ಭಾಸವಾಗತೊಡಗಿತ್ತು.

ಜಿಲ್ಲಾ ಕ್ರೀಡಾಂಗಣದ ವರೆಗೂ ಸಾಗಿದ ವೈಭವವನ್ನು ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ ಜನರು ವೀಕ್ಷಿಸಿದರು.

ADVERTISEMENT

ಜಾಂಜ್ ಮೇಳದ ಕಲಾವಿದರು ಕಿವಿಗವಡುಗಚ್ಚುವಂತೆ ಡ್ರಮ್ ಚಳಕ ತೋರಿಸಿದರೆ, ಜಗ್ಗಲಿಗಿಯ ನಾದಕ್ಕೆ ನೆರದಿದ್ದವರೂ ಹೆಜ್ಜೆ ಹಾಕಲು ಮುಂದಾದರು. ಮಹಿಳಾ ಡೊಳ್ಳುಕುಣಿತ ಮತ್ತು ನಗಾರಿ, ಚಂಡೆವಾದನ, ಮಹಿಳೆಯರ ಲಂಬಾಣಿ ನೃತ್ಯ, ಮರಗಾಗಲು ಕುಣಿತ, ಗೊಂಬೆ ಕುಣಿತ, ವೀರಪುರವಂತರ ಕುಣಿತ, ಕಹಳೆ ವಾದನ, ಪೂಜಾ ಕುಣಿತ, ಸೋಮನ ಕುಣಿತ, ಹಗಲು ವೇಷಗಾರರು, ಗೊರವರ ಕುಣಿತ, ಕಂಸಾಳೆ, ಮರಗಾಲು ನೃತ್ಯ, ಹುಲಿಕುಣಿತ, ಹಕ್ಕಿಪಿಕ್ಕಿ ಕುಣಿತ, ಸೊನ್ನದ ಹಲಗೆ ವಾದನ, ಸಮಾಳ, ನಂದಿಕೋಲು, ಕೋಲಾಟ, ವೀರಗಾಸೆ, ತಾಷಾರಂಡೋಲ್‌, ಕುದುರೆ ಕುಣಿತ, ನಾದಸ್ವರ, ಖಡ್ಗವರಸೆ, ನವಿಲು ಕುಣಿತ, ಝಾಂಜ್‌ ಮೇಳ, ಮೋಜಿನ ಗೊಂಬೆ,  ಗಮನ ಸೆಳೆದವು.

ಹಸು ಗಾತ್ರದ ಕೋಳಿ-ಹುಂಜಗಳ, ದೇವಿ ಕುಣಿತ ನೋಡುಗರ ಕಣ್ಮನ ಸೆಳೆದವು. ರಸ್ತೆಯ ಎರಡೂ ಬದಿಯಲ್ಲಿ ನೂರಾರು ಜನ ವೈಭವವನ್ನು ಕಣ್ತುಂಬಿಕೊಂಡರು. ಈ ಬಾರಿ ಹೆಚ್ಚು ಸ್ಥಳೀಯ ಕಲಾವಿದರ ತಂಡಗಳು ವೈಭವದಲ್ಲಿ ಕಲೆಯ ಸಂಸ್ಕೃತಿ ವೈಭವವನ್ನು ಸಾರಿದ್ದು ವಿಶೇಷವಾಗಿತ್ತು. ಸಿಂಧೋಳಿ ಜನಾಂಗದ ಕುಣಿತದಲ್ಲಿ, ಉರಮಿಯ ನಾದಕ್ಕೆ ಮೈಗೆ ಛಾಟಿಯಿಂದ ಹೊಡೆದುಕೊಳ್ಳುತ್ತಿದ್ದ ದೃಶ್ಯ ಮೈನವಿರೇಳಿಸುವಂತಿತ್ತು.

ಭುವನೇಶ್ವರಿಯ ಮುಂದೆ ಗಾಂಭೀರ್ಯ ನಡಿಗೆಯಲ್ಲಿ ಬಂದ ಗಜರಾಜ ರಕ್ಷಣೆ ನೀಡಿದಂತಿತ್ತು, 50ಕ್ಕೂ ಹೆಚ್ಚು ಕಲಾತಂಡಗಳು ವೈಭವಕ್ಕೆ ಮತ್ತಷ್ಟು ಮೆರಗು ನೀಡಿದವು.

ಪಾದಗಟ್ಟೆ ಆಂಜನೇಯ ದೇವಸ್ಥಾನದ ಬಳಿ ವೀಕ್ಷಿಸಲು ನಿಂತಿದ್ದ ಶಾಸಕ ಎಚ್.ಆರ್.ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಸದಾಶಿವ ಪ್ರಭು, ಉಪವಿಭಾಗಾಧಿಕಾರಿ ನೋಗ್ಡಾಯ್ ಮೊಹಮ್ಮದ್ ಅಲಿ ಅಕ್ರಂ ಷಾ, ತಹಶಿಲ್ದಾರ್ ವಿಶ್ವಜೀತ್‌ ಮೆಹ್ತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣವರ್ ಇತರರು ಎಲ್ಲ ಕಲಾವಿದರ ಕಲಾವಂತಿಕೆಯನ್ನು ಕಣ್ತುಂಬಿಕೊಂಡರು, ಚಪ್ಪಾಳೆ ತಟ್ಟುತ್ತಾ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದರು.

ಕೊನೆಯಲ್ಲಿ ಬಂದ ಗಜರಾಜ ಎಲ್ಲರಿಗೂ ಹೂ ಮಾಲೆ ಹಾಕಿದಾಗ ಶಾಸಕ ಎಚ್.ಆರ್. ಗವಿಯಪ್ಪ ಅವರು ಕೆಲಕಾಲ ಧ್ಯಾನಸ್ಥರಾದಂತೆ ಕಂಡುಬಂದರು, ಗಜರಾಜನಿಗೆ ನಮಿಸಿ ಮಾವುತನಿಗೆ ನಗದು ನೀಡಿದರು.

ಪಟ ಕುಣಿತದ ಕಲಾವಿದ ಬಾಯಲ್ಲಿ ಕಚ್ಚಿ ಗರಗರನೆ ತಿರುಗಿಸಿದ ಪರಿ 

ಹೊಸಪೇಟೆಯಲ್ಲಿ ಗುರುವಾರ ನಡೆದ ವಸಂತ ವೈಭವ ಶೋಭಾಯಾತ್ರೆಯ ಸೊಬಗು

ಪಟ ಕುಣಿತದಲ್ಲೂ ಎಂತಹ ಭಂಗಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.