ADVERTISEMENT

ವಿಜಯನಗರ | ಹೊಸಪೇಟೆಯಲ್ಲಿ ಮುಖ್ಯಮಂತ್ರಿಯಿಂದ ಕೆಡಿಪಿ ಸಭೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 7:33 IST
Last Updated 21 ಜೂನ್ 2024, 7:33 IST
   

ಹೊಸಪೇಟೆ (ವಿಜಯನಗರ): ನೂತನ ವಿಜಯನಗರ ಜಿಲ್ಲೆ ರಚನೆಯಾಗಿ ಮೂರು ವರ್ಷ ತುಂಬುತ್ತಿದ್ದು, ಜಿಲ್ಲೆಯ ಪ್ರಗತಿಗೆ ವೇಗ ನೀಡುವ ಉದ್ದೇಶದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರಂಭವಾಗಿದೆ.

ಬಳ್ಳಾರಿ ಜಿಲ್ಲೆ ತೋರಣಗಲ್ ನ ಜಿಂದಾಲ್ ಕಂಪನಿಯ ಆವರಣದಲ್ಲಿ ಬೆಳಿಗ್ಗೆ ರಾಜ್ಯ ಮಟ್ಟದ 10ನೇ ಅಂತರರಾಷ್ಟ್ರೀಯ ಯೋಗ ಶಿಬಿರದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಅವರು ನಗರಕ್ಕೆ ಬಂದು, ಅನಂತಶಯನಗುಡಿಯಲ್ಲಿರುವ ತಮ್ಮ ಸಂಬಂಧಿ ಬಸವರಾಜ ದೇವರಮನಿ ಅವರ ಮನೆಗೆ ತೆರಳಿ ಉಪಾಹಾರ ಸೇವಿಸಿದರು.

ಬಳಿಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದ ಸಿಎಂ ಅವರು ಸಾರ್ವಜನಿಕರ ಅಹವಾಲು ಆಲಿಸಿದರು. ರೈತ ಸಂಘಟನೆಗಳು, ಸಿಪಿಎಂ, ಅಂಗನವಾಡಿ ಸಂಘಟನೆಗಳು, ಸರ್ಕಾರಿ ನೌಕರರ ಸಂಘಟನೆಗಳ ಸಹಿತ ಸುಮಾರು 30 ಸಂಘಟನೆಗಳ ಪ್ರತಿನಿಧಿಗಳು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ADVERTISEMENT

ಬಳಿಕ ಕೆಡಿಪಿ ಸಭೆಯತ್ತ ತೆರಳಿದ ಸಿದ್ದರಾಮಯ್ಯ ಅವರು ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು. ಕೆಡಿಪಿ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುವುದಾಗಿ ಅವರು ಈ ಮೊದಲೇ ಪ್ರಕಟಿಸಿದ್ದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಸಿಎಂ ಅವರ ರಾಜಕೀಯ ಕಾರ್ಯದರ್ಶಿಗಳಾದ ಬಸವರಾಜ ರಾಯರೆಡ್ಡಿ, ಗೋವಿಂದರಾಜ್, ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ, ಹಲವು ಶಾಸಕರು, ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಪಾಲ್ಗೊಂಡಿದ್ದು, ಬಳ್ಳಾರಿ ಸಂಸದ ಇ.ತುಕಾರಾಂ ಗೈರಾಗಿದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.