ಹೊಸಪೇಟೆ (ವಿಜಯನಗರ): ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯಲ್ಲಿ ದಸರಾ, ಹೋಳಿ ಬಹಳ ವಿಜೃಂಭಣೆಯಿಂದ ನಡೆಯುತ್ತಿದ್ದ ಹಬ್ಬಗಳು. ಜತೆಗೆ ದೀಪಾವಳಿಗೂ ಇಲ್ಲಿ ಮಹತ್ವ ಇತ್ತು ಎಂಬುದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತ ಹೋಗುತ್ತಿವೆ. ಹೋಳಿ ಹಬ್ಬದಂದು ವಿದೇಶಿಯರು ಸಹ ಬಣ್ಣದ ಓಕುಳಿಯಲ್ಲಿ ಮಿಂದೇಳುವುದನ್ನು ಕಂಡು ಇಂದು ಬೆರಗಾಗುವ ನಮಗೆ ದಸರಾ ವೈಭವ, ದೀಪಾವಳಿಯ ಪ್ರಭೆ ಹೇಗಿತ್ತು ಎಂಬುದನ್ನು ಇತಿಹಾಸದತ್ತ ಇಣುಕು ನೋಟ ಬೀರಿಯೇ ತಿಳಿದುಕೊಳ್ಳಬೇಕಾಗುತ್ತದೆ.
ವಿಜಯನಗರ ವಿಶ್ವಖ್ಯಾತಿ ಗಳಿಸಿದ ಸಾಮ್ರಾಜ್ಯವಾಗಿತ್ತು. ಚಿನ್ನ, ಮುತ್ತು, ರತ್ನ, ವಜ್ರಗಳನ್ನು ಇಲ್ಲಿ ರಸ್ತೆ ಬದಿಯಲ್ಲೇ ಮಾರಾಟ ಮಾಡಲಾಗುತ್ತಿತ್ತು. ಸಹಜವಾಗಿಯೇ ಇಡೀ ಜಗತ್ತಿನ ದೃಷ್ಟಿ ಹಂಪಿಯತ್ತ ನೆಟ್ಟಿತ್ತು. ಅದಕ್ಕೆ ತಕ್ಕಂತೆ ಇಲ್ಲಿನ ಹಬ್ಬ, ಹರಿದಿನಗಳ ಆಚರಣೆಗಳೂ ವೈಭವದಿಂದ ಕೂಡಿದ್ದವು.
ದೀಪಾವಳಿ ಸಂದರ್ಭದಲ್ಲಿ ಹಂಪಿಯ ರಸ್ತೆಯ ಇಕ್ಕೆಲಗಳಲ್ಲಿ ತೋಪುಗಳನ್ನು ಸಿಡಿಸಿ ಸಂಭ್ರಮಿಸಲಾಗುತ್ತಿತ್ತು. ರಸ್ತೆಯ ಬದಿಗಳಲ್ಲಿ ದೀಪಗಳನ್ನು ಉರಿಸಿ ದೀಪಾವಳಿ ಆಚರಿಸಲಾಗುತ್ತಿತ್ತು. ದೀಪ ಉರಿಸಲು ಎಣ್ಣೆ ಬೇಕು ತಾನೇ, ಹಂಪಿಯಲ್ಲಿ ಪರಿಶುದ್ಧ ಶೇಂಗಾ, ಕುಸುಬೆ, ಅಗಸೆ ಎಣ್ಣೆ ತಯಾರಿಸಿಕೊಡುವ ಗಾಣಗಳೂ ಇದ್ದವು. ಈ ಗಾಣಗಳು ಅದೆಷ್ಟು ಮುಖ್ಯ ಸ್ಥಾನ ಪಡೆದಿದ್ದವು ಎಂದರೆ ವಿದೇಶಿ ವ್ಯಾಪಾರಿಗಳು ಸಹ ಇಲ್ಲಿಂದ ಎಣ್ಣೆ ಖರೀದಿಸಿ ಸಾಗಿಸುತ್ತಿದ್ದರು. ಹೀಗೆ ಗಾಣದ ಮಾಲೀಕರು ಸ್ಥಾಪಿಸಿದ ದೇವಸ್ಥಾನವೇ ಕಮಲಾಪುರ ಸಮೀಪ ಇರುವ ಗಾಣಗಿತ್ತಿ ಜೈನ ದೇವಾಲಯ ಎಂಬುದನ್ನು ಇತಿಹಾಸಕಾರರು ಉಲ್ಲೇಖಿಸುತ್ತಾರೆ. ಗಾಣದ ಎಣ್ಣೆ ತೆಗೆಯುವವರೇ ಇಂತಹ ಭವ್ಯ ದೇವಸ್ಥಾನ ನಿರ್ಮಿಸಿದ್ದರು ಎಂದರೆ ಅವರ ವ್ಯಾಪಾರ ಎಷ್ಟಿದ್ದಿರಬಹುದು ಎಂಬುದನ್ನು ಊಹಿಸಬಹುದಾಗಿದೆ.
ದೀಪ ಹಚ್ಚಲು ಪ್ರತ್ಯೇಕ ಜನ: ವಿಜಯನಗರ ಕಾಲದಲ್ಲಿ ದೀಪ ಬೆಳಗಲೆಂದೇ ಪ್ರತ್ಯೇಕ ಜನರಿದ್ದರು. ದೀಪಾವಳಿ ಸಂದರ್ಭದಲ್ಲಿ ಅವರಿಗೆ ವಿಶೇಷ ಮಹತ್ವ ಇರುತ್ತಿತ್ತು. ಹೊಸಪೇಟೆಯ ವಡಕರಾಯ ದೇವಸ್ಥಾನದ ಅರ್ಚಕರಾಗಿರುವ ಪೂಜಾರಿ ಕೃಷ್ಣಪ್ಪ ಅವರ ವಂಶಜರು ದೀಪ ಬೆಳಗಿಸುವವರಾಗಿದ್ದರು. ಅವರ ಮನೆಯಲ್ಲಿ ಈಗಲೂ ಇರುವ ತಾಮ್ರ ಶಾಸನ ಇದನ್ನು ಸಾರಿ ಹೇಳುತ್ತದೆ.
‘ದೀಪಾವಳಿ ಸಮಯದಲ್ಲಿ ಹಾಗೂ ಇತರ ಪ್ರಮುಖ ಉತ್ಸವಗಳ ಸಮಯದಲ್ಲಿ ದೀಪ ಬೆಳಗಿಸುವ ಸಲುವಾಗಿ ಗಾಣಗಳಿಂದ ಎಣ್ಣೆ ಸಂಗ್ರಹಿಸಿ ಜಂಬುನಾಥ ದೇವಸ್ಥಾನದಲ್ಲಿ ಮೊದಲು ದೀಪ ಹಚ್ಚಿಸಿ, ಊರಿನ ದೀಪದ ಕಂಬಗಳಿಗೆ ದೀಪ ಹಚ್ಚಿಸಬೇಕು’ ಎಂದು ವಿಕ್ಟೋರಿಯಾ ರಾಣಿ ತನ್ನ ಮೊಹರಿನೊಂದಿಗೆ ಫರ್ಮಾನು ಹೊರಡಿಸಿದ ವಿಚಾರ ಈ ತಾಮ್ರ ಶಾಸನದಲ್ಲಿದೆ. ಅಂದರೆ ವಿಜಯನಗರ ಕಾಲದಲ್ಲಿ ಇದ್ದ ಆಚರಣೆ ಬಳಿಕ ಬ್ರಿಟಿಷ್ ಕಾಲದಲ್ಲೂ ಮುಂದುವರಿದಿತ್ತು. ಈ ಭವ್ಯ ಆಚರಣೆ ಕಂಡು ಅದನ್ನು ಮುಂದುವರಿಸಲು ಬ್ರಿಟಿಷರು ಶಾಸನದ ಮೂಲಕವೇ ಆದೇಶ ಹೊರಡಿಸಿದ್ದರು ಎಂಬುದು ಈ ಶಾಸನದಿಂದ ತಿಳಿಯುತ್ತದೆ.
ಕಾರ್ತಿಕ ಸಂಭ್ರಮದ ಆರಂಭ: ದೀಪಾವಳಿಯ ಮೂರು ದಿನಗಳ ಮಹತ್ವ ಎಲ್ಲರಿಗೂ ಗೊತ್ತಿರುವ ವಿಚಾರ. ನರಕಾಸುರನನ್ನು ಕೃಷ್ಣ ಸಂಹಾರ ಮಾಡಿದ ಸಂಭ್ರಮವನ್ನು ಎಣ್ಣೆ ಹಚ್ಚಿ ಸ್ನಾನ ಮಾಡಿ ಆಚರಿಸಲಾಗುತ್ತದೆ. ಅಮಾವಾಸ್ಯೆಯ ದಿನ ಲಕ್ಷ್ಮೀ ಪೂಜೆ. ವಿಜಯನಗರ ಕಾಲದಲ್ಲಿ ಲಕ್ಷ್ಮಿ ಇಲ್ಲಿ ಕಿಲಕಿಲನೆ ನಗುತ್ತಿದ್ದಳು. ಸಹಜವಾಗಿಯೇ ಸಂಪತ್ತಿನ ದೇವತೆಯ ಪೂಜೆಗೆ ಕಡಿಮೆ ಇರಲು ಸಾಧ್ಯವೇ ಇರಲಿಲ್ಲ. ಬಲಿಯು ವಿಷ್ಣುವನ್ನು ಒಲಿಸಿಕೊಂಡು ತನಗೂ ಭೂಮಿಯ ಮೇಲೆ ಒಂದು ದಿನ ಆರಾಧನೆಗೆ ಅವಕಾಶ ಕಲ್ಪಿಸಿಕೊಂಡ ಸನ್ನಿವೇಶವೂ ಹೃದಯಂಗಮ.
ದೀಪಾವಳಿ ಸಂದರ್ಭದಲ್ಲಿ ಹಂಪಿಯ ವಿರೂಪಾಕ್ಷ, ಪಂಪಾಂಬಿಕೆ ದೇವಸ್ಥಾನ, ಆನೆಗುಂದಿಯ ಲಕ್ಷ್ಮಿ ದೇವಸ್ಥಾನ, ಸಾಸಿವೆಕಾಳು ಗಣೇಶ ಗುಡಿಯ ಹಿಂಭಾಗದಲ್ಲಿರುವ ಲಕ್ಷ್ಮೀ ಸತ್ಯನಾರಾಯಣ ದೇವಸ್ಥಾನಗಳಲ್ಲಿ ಬಹಳ ಭಕ್ತಿಭಾವದಿಂದ, ಸಡಗರದಿಂದ ಆಚರಣೆ ನಡೆಯುತ್ತಿತ್ತು ಎಂಬುದಕ್ಕೆ ಕುರುಹುಗಳು ಸಿಗುತ್ತಿವೆ.
ವಿಜಯನಗರ ಕಾಲದಲ್ಲಿ ದೀಪಾವಳಿಯ ಮಾರನೇ ದಿನ ಪಗಡೆ ಪಂದ್ಯಾಟ, ಕುಸ್ತಿ, ಸೀಮೋಲ್ಲಂಘನ, ಬೇಟೆ ಇತ್ಯಾದಿಗಳು ನಡೆಯುತ್ತಿದ್ದವು.
ದೀಪಾವಳಿಯ ಸಂಭ್ರಮವೇ ಕಾರ್ತಿಕ ಮಾಸದ ಆಚರಣೆಯ ಆರಂಭ. ಕಾರ್ತಿಕ ಮಾಸದಲ್ಲಿ ಹಲವು ದೇವಸ್ಥಾನಗಳಲ್ಲಿ ದೀಪೋತ್ಸವಗಳು ನಡೆಯುತ್ತವೆ. 108, 1008, ಲಕ್ಷ ದೀಪಗಳನ್ನು ಉರಿಸಿ ದೀಪೋತ್ಸವ ಅಲ್ಲಲ್ಲಿ ನಡೆಯುತ್ತದೆ.
ವಿಜಯನಗರ ಕಾಲದಲ್ಲಿ ನಡೆಯುತ್ತಿದ್ದ ದಸರಾ ಸಹಿತ ಹಲವು ಆಚರಣೆಗಳು ಇಂದು ಮೂಲೆಗುಂಪಾಗಿವೆ. ಇಲ್ಲಿಯ ದಸರೆ ಮೈಸೂರಿಗೆ ಸ್ಥಳಾಂತರಗೊಂಡಿತು. ದೀಪಾವಳಿಯ ಸಂಭ್ರಮ ಸಹ ಇಂದು ಅಷ್ಟಾಗಿ ಕಾಣಿಸುತ್ತಿಲ್ಲವಾದರೂ ಇತಿಹಾಸದ ಪುಟಗಳಲ್ಲಿ ಇಂದಿಗೂ ಅದರ ಪ್ರಭೆ ಇದ್ದೇ ಇದೆ. ಎಣ್ಣೆ ದೀಪದ ಜಾಗದಲ್ಲಿ ವಿದ್ಯುತ್ ದೀಪಗಳು, ಆಕಾಶ ಬುಟ್ಟಿಗಳು ಝಗಮಗಿಸುತ್ತಿವೆ. ತೋಪುಗಳಿಂದ ಸಿಡಿಮದ್ದು ಸಿಡಿಸುತ್ತಿದ್ದ ಜಾಗದಲ್ಲಿ ಪಟಾಕಿಗಳು ಬಂದಿವೆ. ಆಧುನಿಕ ಭರಾಟೆಯಲ್ಲಿ ದೀಪಾವಳಿಯೂ ಆಧುನಿಕವಾಗಿದ್ದರೂ, ನಮ್ಮ ದೇವಸ್ಥಾನಗಳಲ್ಲಿ ಇಂದಿಗೂ ದೀಪಗಳು ಬೆಳಗುತ್ತಲೇ ಇದ್ದು, ಇದು ನಮ್ಮ ಪ್ರಾಚೀನ ಪರಂಪರೆ, ಸಂಪ್ರದಾಯ ಮುಂದುವರಿಯಲು ಇರುವ ದಾರಿದೀಪ ಎಂದೇ ಭಾವಿಸಲಾಗಿದೆ.
ದೀಪಾವಳಿ ಎಂದ ತಕ್ಷಣ ಹಂಪಿಯ ಶ್ರೀಮಂತಿಕೆ ಚಿನ್ನ ಮುತ್ತು ರತ್ನಗಳ ಮಾರಾಟ ಕಣ್ಣಿಗೆ ಕಾಣುವುದು ಸಹಜ. ಅದರ ಕುರುಹು ಈಗಲೂ ಒಂದಿಲ್ಲೊಂದು ರೀತಿಯಲ್ಲಿ ಕಾಣಿಸುತ್ತಿದೆ. ಗಾಣಗಟ್ಟಿ ಜೈನ ದೇವಸ್ಥಾನ ಇಲ್ಲಿನ ದೀಪದ ಎಣ್ಣೆಯ ಮಹತ್ವವನ್ನು ಸಾರುತ್ತಿದ್ದರೆ ದೀಪ ಹಚ್ಚಲೆಂದೇ ಜನರನ್ನು ನೇಮಿಸಿಕೊಂಡಿದ್ದರು ಎಂಬ ವಿಷಯವೂ ಶಾಸನಗಳಲ್ಲಿ ದಾಖಲಾಗಿದೆ
ದೀಪ ಹಚ್ಚಲು ಪ್ರತ್ಯೇಕ ಜನ
ವಿಜಯನಗರ ಸಾಮ್ರಾಜ್ಯದಲ್ಲಿ ದೀಪ ಬೆಳಗಲೆಂದೇ ಪ್ರತ್ಯೇಕ ಜನರಿದ್ದರು. ದೀಪಾವಳಿ ಸಂದರ್ಭದಲ್ಲಿ ಅವರಿಗೆ ವಿಶೇಷ ಮಹತ್ವ ಇರುತ್ತಿತ್ತು. ಹೊಸಪೇಟೆಯ ವಡಕರಾಯ ದೇವಸ್ಥಾನದ ಅರ್ಚಕರಾಗಿರುವ ಪೂಜಾರಿ ಕೃಷ್ಣಪ್ಪ ಅವರ ವಂಶಜರು ದೀಪ ಬೆಳಗಿಸುವವರಾಗಿದ್ದರು. ಅವರ ಮನೆಯಲ್ಲಿ ಈಗಲೂ ಇರುವ ತಾಮ್ರ ಶಾಸನ ಇದನ್ನು ಸಾರಿ ಹೇಳುತ್ತದೆ.
‘ದೀಪಾವಳಿ ಸಮಯದಲ್ಲಿ ಹಾಗೂ ಇತರ ಪ್ರಮುಖ ಉತ್ಸವಗಳ ಸಮಯದಲ್ಲಿ ದೀಪ ಬೆಳಗಿಸುವ ಸಲುವಾಗಿ ಗಾಣಗಳಿಂದ ಎಣ್ಣೆ ಸಂಗ್ರಹಿಸಿ ಜಂಬುನಾಥ ದೇವಸ್ಥಾನದಲ್ಲಿ ಮೊದಲು ದೀಪ ಬೆಳಗಿಸಿ, ನಂತರ ಊರಿನ ದೀಪದ ಕಂಬಗಳಿಗೆ ದೀಪ ಹಚ್ಚಿಸಬೇಕು’ ಎಂದು ವಿಕ್ಟೋರಿಯಾ ರಾಣಿ ತನ್ನ ಮೊಹರಿನೊಂದಿಗೆ ಫರ್ಮಾನು ಹೊರಡಿಸಿದ ವಿಚಾರ ಈ ತಾಮ್ರ ಶಾಸನದಲ್ಲಿದೆ.
ಅಂದರೆ, ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿದ್ದ ಆಚರಣೆಯು ಬ್ರಿಟಿಷ್ ಕಾಲದಲ್ಲೂ ಮುಂದುವರಿದಿತ್ತು. ಈ ಭವ್ಯ ಆಚರಣೆ ಕಂಡು ಅದನ್ನು ಮುಂದುವರಿಸಲು ಬ್ರಿಟಿಷರು ಶಾಸನದ ಮೂಲಕವೇ ಆದೇಶ ಹೊರಡಿಸಿದ್ದರು ಎಂಬುದು ಇದರಿಂದ ತಿಳಿದುಬರುತ್ತದೆ.
ಆಧುನಿಕಗೊಂಡ ಆಚರಣೆ
ವಿಜಯನಗರ ಕಾಲದಲ್ಲಿ ನಡೆಯುತ್ತಿದ್ದ ದಸರಾ ಸಹಿತ ಹಲವು ಆಚರಣೆಗಳು ಇಂದು ಮೂಲೆಗುಂಪಾಗಿವೆ. ಇಲ್ಲಿನ ದಸರಾ ಆಚರಣೆ ಮೈಸೂರಿಗೆ ಸ್ಥಳಾಂತರಗೊಂಡಿತು. ದೀಪಾವಳಿ ಸಂಭ್ರಮ ಸಹ ಅಷ್ಟಾಗಿ ಕಾಣಿಸುತ್ತಿಲ್ಲವಾದರೂ ಇತಿಹಾಸದ ಪುಟಗಳಲ್ಲಿ ಇಂದಿಗೂ ಅದರ ಪ್ರಭೆ ಇದ್ದೇ ಇದೆ.
ಎಣ್ಣೆ ದೀಪದ ಜಾಗದಲ್ಲಿ ವಿದ್ಯುತ್ ದೀಪಗಳು, ಆಕಾಶ ಬುಟ್ಟಿಗಳು ಝಗಮಗಿಸುತ್ತಿವೆ. ತೋಪುಗಳಿಂದ ಸಿಡಿಮದ್ದು ಸಿಡಿಸುತ್ತಿದ್ದ ಜಾಗದಲ್ಲಿ ಪಟಾಕಿಗಳು ಬಂದಿವೆ. ಆಧುನಿಕ ಭರಾಟೆಯಲ್ಲಿ ದೀಪಾವಳಿ ಆಧುನಿಕವಾಗಿದ್ದರೂ, ನಮ್ಮ ದೇವಸ್ಥಾನಗಳಲ್ಲಿ ಇಂದಿಗೂ ದೀಪಗಳು ಬೆಳಗುತ್ತಲೇ ಇವೆ. ಇದು ನಮ್ಮ ಪ್ರಾಚೀನ ಪರಂಪರೆ, ಸಂಪ್ರದಾಯ ಮುಂದುವರಿಯಲು ಇರುವ ದಾರಿದೀಪ ಎಂದೇ ಭಾವಿಸಲಾಗಿದೆ.
Quote -
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.