ಹೊಸಪೇಟೆ (ವಿಜಯನಗರ): ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲಾ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರದಿಂದ ಅನಿರ್ದಿಷ್ಟಾವಧಿಗೆ ಮುಷ್ಕರ ಆರಂಭವಾಗಿರುವದರಿಂದ ಜಿಲ್ಲೆಯಲ್ಲಿ ಗ್ರಾಮೀಣ ಸೇವೆಗಳು ಸಂಪೂರ್ಣ ಸ್ಥಗಿತಗೊಂಡಿವೆ.
‘ಶುಕ್ರವಾರ ಆನ್‌ಲೈನ್ ಸೇವೆಗಳು ಸಂಪೂರ್ಣ ಸ್ಥಗಿತಗೊಂಡಿದ್ದವು. ಹೆಚ್ಚಿನ ಪಿಡಿಒಗಳು ಬೆಂಗಳೂರಿಗೆ ತೆರಳಿದ್ದರು. ಬೆಂಗಳೂರಿಗೆ ಹೋಗದವರು ಕಚೇರಿಗೆ ಬಂದಿಲ್ಲ. ಇಂದಿನ ಮಟ್ಟಿಗೆ ಸಾರ್ವಜನಿಕರಿಗೆ ಅಂತಹ ತೊಂದರೆ ಉಂಟಾದ ಮಾಹಿತಿ ಇಲ್ಲ. ಶನಿವಾರದಿಂದ ಮುಷ್ಕರದ ಬಿಸಿ ಮುಟ್ಟುವುದು ನಿಶ್ಚಿತ’ ಎಂದು ತಾಲ್ಲೂಕಿನ ಪಿಡಿಒ ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಜಿಲ್ಲೆಯಲ್ಲಿ 137 ಗ್ರಾಮ ಪಂಚಾಯಿತಿಗಳಿದ್ದು, ಎಲ್ಲಾ ಪಂಚಾಯಿತಿಗಳಲ್ಲೂ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಿದ ಬಗ್ಗೆ ಮಾಹಿತಿ ಇದೆ. ಸ್ಥಳೀಯವಾಗಿ ಸಮಸ್ಯೆ ಆಗಿರುವ ಕುರಿತು ಮಾಹಿತಿ ಬಂದಿಲ್ಲ’ ಎಂದು ಜಿಲ್ಲಾ ಪಂಚಾಯಿತಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಒಗ್ಗಟ್ಟು ಪ್ರದರ್ಶನ: ‘ಈ ಹಿಂದೆ ಒಡೆದು ಆಳುವಂತಹ ಪರಿಸ್ಥಿತಿ ಇತ್ತು, ಆದರೆ ಈ ಬಾರಿ ಒಗ್ಗಟ್ಟಿನಿಂದ ಮುಷ್ಕರ ನಡೆಯುತ್ತಿದೆ. ಇದರ ಬಿಸಿ ಸರ್ಕಾರಕ್ಕೆ ಬೇಗ ಮುಟ್ಟುವುದು ನಿಶ್ಚಿತ. ಸರ್ಕಾರ ತಕ್ಷಣ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು, ಇಲ್ಲವಾದರೆ ಗ್ರಾಮ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಬೀಳುವ ಅಪಾಯ ಇದೆ’ ಎಂದು ಇನ್ನೊಬ್ಬ ಪಿಡಿಒ ಹೇಳಿದರು.
ತೊಂದರೆ ಆಗಿಲ್ಲ: ‘ಶುಕ್ರವಾರ ಒಂದು ದಿನದ ಮಟ್ಟಿಗೆ ಪಿಡಿಒಗಳು, ಕಾರ್ಯದರ್ಶಿಗಳು, ಎಸ್‌ಡಿಎಗಳು ಅನುಮತಿ ಪಡೆದು ಬೆಂಗಳೂರಿಗೆ ತೆರಳಿದ್ದಾರೆ. ಶನಿವಾರ ಅವರು ಕರ್ತವ್ಯಕ್ಕೆ ಹಾಜರಾಗುವ ನಿರೀಕ್ಷೆ ಇದೆ. ಕಸ ಗುಡಿಸುವವರು, ನೀರಘಂಟಿಗಳ ಸಹಿತ ಕೆಲವು ಅಗತ್ಯ ಸೇವೆ ಸಲ್ಲಿಸುವವರು ಕರ್ತವ್ಯ ನಿರ್ವಹಿಸಿದ್ದರು. ಹೀಗಾಗಿ ಎಲ್ಲೂ ಸಮಸ್ಯೆ ಕಂಡುಬಂದಿಲ್ಲ’ ಎಂದು ಹೊಸಪೇಟೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿಕಾಂತ್ ಹೇಳಿದರು.
ಒಗ್ಗಟ್ಟು ಪ್ರದರ್ಶನ
ಈ ಬಾರಿ ಒಗ್ಗಟ್ಟಿನಿಂದ ಬೇಡಿಕೆ ಮುಂದಿಟ್ಟು ಹೋರಾಟ ನಡೆಸಲಾಗಿದೆ. ಹೀಗಾಗಿ ಅನಿರ್ದಿಷ್ಟ ಮುಷ್ಕರದ ಬಿಸಿ ಬೇಗನೆ ತಟ್ಟುವಂತಾಗಿದೆ ಎಂದು ಹೇಳಲಾಗುತ್ತಿದೆ. ಪಿಡಿಒಗಳ ಬೇಡಿಕೆ ಒಂದೆಡೆಯಾದರೆ ಕಾರ್ಯದರ್ಶಿಗಳು ದ್ವಿತೀಯ ದರ್ಜೆ ಸಹಾಯಕರು ಕ್ಲರ್ಕ್ ಕಂ ಡಾ ಎಂಟ್ರಿ ಆಪರೇಟರ್ ಕರವಸೂಲಿಗಾರರು ನೀರಘಂಟಿ ಜವಾನರು ಸ್ವಚ್ಛತೆಗಾರರು ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ಆರ್‌ಡಿಪಿಆರ್ ಇಲಾಖೆಯ ಪತ್ರಾಂಕಿತ ಅಧಿಕಾರಿಗಳ ಸಂಘದವರು ಸಹ ವಿವಿಧ ಬೇಡಿಕೆ ಮುಂದಿಟ್ಟಿದ್ದಾರೆ. ಹೀಗಾಗಿ ಅಪರೂಪಕ್ಕೆ ಒಗ್ಗಟ್ಟಿನ ಹೋರಾಟ ಕಾಣಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.