ADVERTISEMENT

ವಿಜಯನಗರ: 1,132 ಬಿಪಿಎಲ್‌ ಕಾರ್ಡ್ ಎಪಿಎಲ್‌ಗೆ ಪರಿವರ್ತನೆ

ನಿಜವಾದ ಬಡವರಿಗೆ ಅನ್ಯಾಯ ಆಗಿದ್ದರೆ ಮುಂದಿನ ತಿಂಗಳು ಅರ್ಜಿ ಸಲ್ಲಿಸಲು ಅವಕಾಶ

ಎಂ.ಜಿ.ಬಾಲಕೃಷ್ಣ
Published 20 ನವೆಂಬರ್ 2024, 4:30 IST
Last Updated 20 ನವೆಂಬರ್ 2024, 4:30 IST
<div class="paragraphs"><p>ಬಿಪಿಎಲ್ ಕಾರ್ಡ್‌</p></div>

ಬಿಪಿಎಲ್ ಕಾರ್ಡ್‌

   

ಹೊಸಪೇಟೆ (ವಿಜಯನಗರ): ರಾಜ್ಯದಾದ್ಯಂತ ಪಡಿತರ ಚೀಟಿ ವಿವಾದ ತಾರಕಕ್ಕೆ ಏರಿರುವಂತೆಯೇ ವಿಜಯನಗರ ಜಿಲ್ಲೆಯಲ್ಲೂ ಬಿಪಿಎಲ್‌ ಕಾರ್ಡ್‌ಗಳು ಎಪಿಎಲ್‌ಗೆ ಪರಿವರ್ತನೆಗೊಂಡ ನಿದರ್ಶನ ಕಂಡುಬಂದಿದ್ದು, ಒಟ್ಟು 1,132 ಕಾರ್ಡ್‌ಗಳು ಈ ರೀತಿ ಪರಿವರ್ತನೆ ಆಗಿರುವುದು ಗೊತ್ತಾಗಿದೆ. ಜತೆಗೆ 9,326 ಕಾರ್ಡ್‌ಗಳನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿ ಇಡಲಾಗಿದೆ.

‘ಸರ್ಕಾರಿ ನೌಕರರು ಪಡೆದಿದ್ದ 101 ಬಿಪಿಎಲ್‌ ಕಾರ್ಡ್‌ಗಳು ಎಪಿಎಲ್‌ಗೆ ಪರಿವರ್ತನೆಗೊಂಡಿವೆ, ಆದಾಯ ತೆರಿಗೆ ಪಾವತಿಸುತ್ತಿದ್ದ 1,031 ಮಂದಿ ಹೊಂದಿದ್ದ ಬಿಪಿಎಲ್ ಕಾರ್ಡ್‌ಗಳು ಸಹ ಎಪಿಎಲ್ ಕಾರ್ಡ್‌ಗಳಾಗಿ ಬದಲಾಗಿವೆ. ಸುಮಾರು ಮೂರು ತಿಂಗಳಿಂದ ಈ ಪ್ರಕ್ರಿಯೆ ನಡೆಯುತ್ತಿತ್ತು. ಮುಂದಿನ ದಿನಗಳಲ್ಲಿ ಸರ್ಕಾರದ ಸೂಚನೆಯಂತೆ ಇಲಾಖೆ ಕಾರ್ಯನಿರ್ವಹಿಸಲಿದೆ’ ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರಿಯಾಜ್‌ ‘ಪ್ರಜಾವಾಣಿ‘ಗೆ ತಿಳಿಸಿದರು.

ADVERTISEMENT

‘ಇಂತಹ ಕಾರ್ಡ್‌ ಪರಿವರ್ತನೆ ವೇಳೆ ನಿಜವಾದ ಬಡವರಿಗೂ ಅನ್ಯಾಯ ಆಗಿರುವ ನಿದರ್ಶನಗಳು ರಾಜ್ಯದ ಕೆಲವು ಕಡೆಗಳಲ್ಲಿ ಆಗಿವೆ, ಜಿಲ್ಲೆಯಲ್ಲೂ ಅಂತಹ ಪ್ರಸಂಗಗಳು ನಡೆದಿವೆಯೇ’ ಎಂದು ಕೇಳಿದಾಗ, ‘ಸದ್ಯ ಅಂತಹ ಪ್ರಸಂಗ ನಡೆದಿಲ್ಲ, ಆದರೆ ತಾಂತ್ರಿಕ ದೋಷದಿಂದ ಕೆಲವರಿಗೆ ಹೀಗೆ ಅನ್ಯಾಯ ಆಗಿದ್ದರೆ ಚಿಂತೆ ಬೇಡ, ಮುಂದಿನ ತಿಂಗಳು ಅದಕ್ಕಾಗಿಯೇ ಅರ್ಜಿ ಕರೆಯುವ ನಿರೀಕ್ಷೆ ಇದೆ, ಆಗ ಮತ್ತೊಮ್ಮೆ ಅರ್ಜಿ ಸಲ್ಲಿಸಿ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಬಹುದು’ ಎಂದು ಅವರು ಭರವಸೆ ನೀಡಿದರು.

ತಾಲ್ಲೂಕು ಕಚೇರಿಗೆ ಹೋಗಿ: ‘ಜಿಲ್ಲೆಯಲ್ಲೂ ನಿಜವಾದ ಬಡವರಿಗೆ ಬಿಪಿಎಲ್ ಕಾರ್ಡ್‌ ವಿಚಾರದಲ್ಲಿ ಅನ್ಯಾಯ ಆಗುತ್ತಿರುವ ಬಗ್ಗೆ ನಮಗೆ ಮಾಹಿತಿ ಬರುತ್ತಿದೆ. ಅವರು ನ್ಯಾಯಬೆಲೆ ಅಂಗಡಿಗೆ ಬಂದು ಹೆಬ್ಬೆಟ್ಟು ಒತ್ತಿದಾಗಲಷ್ಟೇ ಅವರ ಕಾರ್ಡ್‌ ಬಿಪಿಎಲ್‌ನಿಂದ ಎಪಿಎಲ್‌ಗೆ ಬದಲಾಗಿರುವುದು ಗೊತ್ತಾಗುತ್ತಿದೆ. ತಕ್ಷಣ ತಾಲ್ಲೂಕು ಕಚೇರಿಗೆ ಹೋಗಿ ಪರಿಶೀಲಿಸಿ ಎಂದು ನಾವು ಹೇಳುತ್ತಿದ್ದೇವೆ. ನಮಗೆ ಅದರ ಹೊರತು ಬೇರೆ ಏನೂ ಮಾಡಲು ಸಾಧ್ಯವಿಲ್ಲ’ ಎಂದು ನ್ಯಾಯಬೆಲೆ ಅಂಗಡಿಯೊಂದರ ಉಸ್ತುವಾರಿಯೊಬ್ಬರು ತಿಳಿಸಿದರು.

‘ಅರ್ಹ ಬಡವರಿಗೆ ಮಾತ್ರ ಬಿಪಿಎಲ್ ಕಾರ್ಡ್‌ ಸಿಗಬೇಕು, ಆದರೆ ಈ ಹಿಂದೆ ಹಲವು ಲೋಪಗಳನ್ನು ಬಳಸಿಕೊಂಡು ಅದೆಷ್ಟೋ ಮಂದಿ ಬಿಪಿಎಲ್‌ ಕಾರ್ಡ್ ಪಡೆದುಕೊಂಡಿದ್ದಾರೆ.  ಅನರ್ಹರ ಬಿಪಿಎಲ್ ಕಾರ್ಡ್ ರದ್ದಾಗಬೇಕಿರುವುದು ಮಾತ್ರ ತುರ್ತಾಗಿ ಆಗಬೇಕಿದೆ’ ಎಂದು ಇನ್ನೊಬ್ಬ ನ್ಯಾಯಬೆಲೆ ಅಂಗಡಿಯ ಉಸ್ತುವಾರಿ ಹೇಳಿದರು.

ಬಿಪಿಎಲ್ ಕಾರ್ಡ್ ದುರ್ಬಳಕೆ ಆಗುವುದು ಸರಿಯಲ್ಲ ಆದರೆ ಅದೇ ವೇಳೆ ನಿಜವಾದ ಬಡವರಿಗೆ ಅನ್ಯಾಯ ಅಗಲೂಬಾರದು. ಸೂಕ್ತ ರೀತಿಯಿಂದ ಪರಿಶೀಲಿಸಿ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸುತ್ತೇನೆ
ಎಚ್‌.ಆರ್.ಗವಿಯಪ್ಪ ಶಾಸಕ

‘ಕಾರು ದೂರದಲ್ಲೇ ಇಟ್ಟು ಬರುತ್ತಾರೆ‘

‘ಬೋಗಸ್‌ ಬಿಪಿಎಲ್‌ ಕಾರ್ಡ್ ಪತ್ತೆಹಚ್ಚುವ ಕೆಲಸ ಯಾವತ್ತೋ ಆಗಬೇಕಿತ್ತು ಈಗ ಶುರುವಾಗಿದೆ. ನಮ್ಮಲ್ಲಿಗೆ ಕಾರು ಇದ್ದವರು ಬುಲೆಟ್ ಬೈಕ್‌ ಇಟ್ಟುಕೊಂಡವರು ಸಹ ರೇಷನ್‌ಗೆ ಬರುತ್ತಾರೆ. ಕಾರನ್ನು ದೂರದಲ್ಲಿ ಇಟ್ಟು ಅಂಗಡಿಯ ಸಮೀಪಕ್ಕೆ ನಡೆದುಕೊಂಡು ಬಂದು ಮತ್ತೆ ತಮ್ಮ ಕಾರಲ್ಲಿ ಹೋಗುವವರನ್ನೂ ನಾವು ಗಮನಸಿದ್ದೇವೆ. ಇಂತಹವರ ಕಾರ್ಡ್ ರದ್ದಾಗಲಿ ನೈಜ ಬಡವರ ಹೊಟ್ಟೆಗೆ ಮಾತ್ರ ಹೊಡೆಯಬೇಡಿ’ ಎಂದು ಹೆಸರು ಹೇಳಲು ಬಯಸದ ನಗರದ ರೇಷನ್‌ ಅಂಗಡಿಯ ಉಸ್ತುವಾರಿಯೊಬ್ಬರು ಹೇಳಿದರು.

‘ಆದಾಯ ಹೆಚ್ಚಿರುವ ಸಂಶಯಕ್ಕೆ ಅಮಾನತು’

‘ನಿಯಮದ ಪ್ರಕಾರ ವಾರ್ಷಿಕ ಆದಾಯ ₹1.20 ಲಕ್ಷಕ್ಕಿಂತ ಹೆಚ್ಚಿದ್ದರೆ ಬಿಪಿಎಲ್ ಕಾರ್ಡ್‌ ಕೊಡುವಂತಿಲ್ಲ. ಈ ಮಿತಿಗಿಂತ ಅಧಿಕ ಆದಾಯ ಇದೆ ಎಂಬ ಸಂಶಯದ ಕಾರಣ ಜಿಲ್ಲೆಯಲ್ಲಿ ಇದುವರೆಗೆ 9326 ಬಿಪಿಎಲ್‌ ಕಾರ್ಡ್‌ಗಳನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿ ಇಡಲಾಗಿದೆ. ಪರಿಶೀಲನೆಯ ಬಳಿಕ ಮಿತಿಯೊಳಗೆಯೇ  ಆದಾಯ ಇದೆ ಎಂಬುದು ದೃಢಪಟ್ಟಾಗ ಮತ್ತೆ ಬಿಪಿಎಲ್‌ ಕಾರ್ಡ್‌ಗಳಾಗಿಯೇ ಉಳಿಯಲಿವೆ. ಇಲಾಖೆಯ  ಆಯುಕ್ತರಿಂದ ಅನುಮತಿ ದೊರೆತ ತಕ್ಷಣ ಮತ್ತೆ ಕಾರ್ಡ್‌ ಪುನಶ್ಚೇತನಗೊಳ್ಳುತ್ತದೆ’ ಎಂದು ಉಪನಿರ್ದೆಶಕ ರಿಯಾಜ್‌ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.