ADVERTISEMENT

ನೋಟಿಸ್ ನೀಡಿದ್ದನ್ನು ಹೇಳದಂತೆ ಬೆದರಿಕೆ–ಆರೋಪ

ವಕ್ಫ್‌ ಸಚಿವ ಜಮೀರ್ ವಜಾಕ್ಕೆ ಆಗ್ರಹ– ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 16:09 IST
Last Updated 5 ನವೆಂಬರ್ 2024, 16:09 IST
ಹೊಸಪೇಟೆಯಲ್ಲಿ ಮಂಗಳವಾರ ರೈತರಿಗೆ ವಕ್ಫ್ ನೋಟಿಸ್‌ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು  –ಪ್ರಜಾವಾಣಿ ಚಿತ್ರ
ಹೊಸಪೇಟೆಯಲ್ಲಿ ಮಂಗಳವಾರ ರೈತರಿಗೆ ವಕ್ಫ್ ನೋಟಿಸ್‌ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು  –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ರಾಜ್ಯದಲ್ಲಿ ರೈತರ ಜಮೀನುಗಳ ಪಹಣಿ ಹಕ್ಕುಗಳ ಕಾಲಂ-9 ಮತ್ತು 11ರಲ್ಲಿ ವಕ್ಫ್ ಆಸ್ತಿ ಬಗ್ಗೆ ವಿಚಾರಣೆ ಹಂತದಲ್ಲಿರುವುದೆಂದು ತಿಳಿಸಿದ್ದನ್ನು ಹಾಗೂ ವಕ್ಫ್ ಆಸ್ತಿ ಎಂದು ನಮೂದಾಗಿದ್ದನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ವತಿಯಿಂದ ಮಂಗಳವಾರ ಇಲ್ಲಿ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು, ಬಳಿಕ ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಕಳುಹಿಸಿಕೊಟ್ಟರು.

ಜಿಲ್ಲೆಯ ಕೊಟ್ಟೂರು ಭಾಗದಲ್ಲಿ ಕೆಲ ರೈತರಿಗೆ ಯಾವುದೇ ಮುನ್ಸೂಚನೆ ನೀಡದೆ ನೋಟಿಸ್‍ಗಳನ್ನು ನೀಡಲಾಗಿದೆ, ಹೊಸಪೇಟೆಯಲ್ಲಿ ಸಹ ಕೆಲವು ರೈತರಿಗೆ ನೋಟಿಸ್‌ ನೀಡಲಾಗಿದೆ. ಹೀಗೆ ನೋಟಿಸ್‌ ನೀಡಿದ್ದರ ಬಗ್ಗೆ ಯಾರಿಗೂ ಹೇಳದಂತೆ ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ. ಇದರಿಂದಾಗಿಯೇ ನೋಟಿಸ್ ಬಗ್ಗೆ ಯಾವ ರೈತರೂ ಬಹಿರಂಗವಾಗಿ ಮಾತನಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ಷೇಪಿಸಿದರು.

ADVERTISEMENT

ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ  ಟಿ.ನಾಗರಾಜ್ ಮಾತನಾಡಿ, 2021ರಲ್ಲಿ ಬಿ.ಎಸ್.ಯಡಿಯೂರಪ್ಪ ಇವರು ಕೃಷಿಕಾಯ್ದೆಯನ್ನು ರಾಜ್ಯದಲ್ಲಿ ತಂದಾಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ನಮ್ಮ ಸರ್ಕಾರ ಬಂದು 24 ತಾಸಿನೊಳಗೆ ನಾನು ಕೃಷಿಕಾಯ್ದೆಯನ್ನು ಹಿಂಪಡೆಯುತ್ತೇನೆ ಎಂದು ಮಾತುಕೊಟ್ಟಿದ್ದರು. ಅದರಂತೆ ನಡೆದುಕೊಂಡಿಲ್ಲ, ಇದೀಗ ರೈತರಿಗೆ ಮೋಸ ಮಾಡುವ ದೃಷ್ಟಿಯಿಂದ ಪಹಣಿ ಕಾಲಂ-9 ಮತ್ತು 11ರಲ್ಲಿ ವಕ್ಪ್ ಆಸ್ತಿ ಎಂದು ನಮೂದು ಮಾಡಿ ರೈತರ ಗಾಯದ ಮೇಲೆ ಬರೆ ಎಳೆದಿದ್ದಾರೆ ಎಂದರು.

ತಾಲ್ಲೂಕು ಘಟಕದ ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ತಕ್ಷಣ ವಕ್ಫ್‌ ಸಚಿವ ಜಮೀರ್ ಅಹಮ್ಮದ್ ಖಾನ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು. ಇಲ್ಲವಾದಲ್ಲಿ ವಿಜಯನಗರ ಜಿಲ್ಲೆಗೆ  ಬಂದರೆ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ವತಿಯಿಂದ ಅವರಿಗೆ ಕಪ್ಪು ಭಾವುಟ ಪ್ರದರ್ಶನ ಮಾಡಲಾಗುತ್ತದೆ ಎಂದರು.

ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಮೆಟ್ರಿ ಜಡೆಪ್ಪ ಮಾತನಾಡಿ, ಸರ್ಕಾರ ಯಾವುದೇ ಮುನ್ಸೂಚನೆ ನೀಡದೇ ರೈತರಿಗೆ ವಕ್ಪ್ ಕಡೆಯಿಂದ ನೇರವಾಗಿ ನೋಟಿಸ್ ನೀಡಿದ್ದು ಅಕ್ಷಮ್ಯ ಅಪರಾಧ ಎಂದರು.

ಪದಾಧಿಕಾರಗಳಾದ ಆರ್.ಆರ್.ತಾಯಪ್ಪ, ವಿ.ಗಾಳೆಪ್ಪ, ರಾಮಾಂಜಿನಿ, ಸತೀಶ, ನಾಗೇಶ, ಜೆ.ಜಿ.ವಿರೂಪಾಕ್ಷಿ, ಎಲ್.ನಾಗೇಶ್ ಇತರರು ಇದ್ದರು.

ವಕ್ಫ್ ಹೆಸರು ನಮೂದು ರದ್ದುಪಡಿಸಲು ಆಗ್ರಹ

ಕಂಪ್ಲಿ: ಜಿಲ್ಲೆಯ ರೈತರ ಪಹಣಿ ಹಕ್ಕುಗಳ ಕಾಲಂ ಸಂಖ್ಯೆ 11ರಲ್ಲಿ ವಕ್ಫ್ ಆಸ್ತಿ ಬಗ್ಗೆ ವಿಚಾರಣೆ ಹಂತದಲ್ಲಿದೆ ಎಂದು ನಮೂದಾಗಿದ್ದು ಆ ಪದ ರದ್ದುಪಡಿಸುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದರು. ಈ ಕುರಿತು ಸಮಿತಿ ಜಿಲ್ಲಾ ಅಧ್ಯಕ್ಷ ಬಿ.ವಿ.ಗೌಡ ಮಾತನಾಡಿ ರೈತರು ಅನಾದಿ ಕಾಲದಿಂದ ಜಮೀನುಗಳಲ್ಲಿ ಉಳುಮೆ ಮಾಡಿಕೊಂಡು ಬಂದಿದ್ದಾರೆ. ಕೆಲ ರೈತರು ಜಮೀನು ಖರೀದಿ ಮಾಡಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಅಂಥ ಕೆಲ ರೈತರ ಜಮೀನಿನ ಪಹಣಿಗಳ ಕಾಲಂ ಸಂಖ್ಯೆ 11ರಲ್ಲಿ ವಕ್ಫ್ ಆಸ್ತಿ ಬಗ್ಗೆ ವಿಚಾರಣೆ ಹಂತದಲ್ಲಿದೆ. ಇನ್ನು ಕೆಲ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಇದನ್ನು ರದ್ದುಪಡಿಸಿ ಕೂಡಲೇ ಸರಿಪಡಿಸಬೇಕು. ಒಂದು ವೇಳೆ ಕಡೆಗಣಿಸಿದಲ್ಲಿ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು. ಈ ಕುರಿತು ಮನವಿ ಪತ್ರವನ್ನು ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಅವರಿಗೆ ಸೋಮವಾರ ಸಲ್ಲಿಸಿದ್ದು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದರು. ಪಹಣಿಗಳಲ್ಲಿ ವಕ್ಫ್ ಆಸ್ತಿ ವಕ್ಫ್ ಆಸ್ತಿ ವಿಚಾರಣೆ ಹಂತದಲ್ಲಿರುವ ಪದ ನಮೂದಾಗಿದ್ದಲ್ಲಿ ಕೂಡಲೇ ರೈತರು ತಹಶೀಲ್ದಾರ್ ಅವರಿಗೆ ದಾಖಲೆಗಳನ್ನು ಸಲ್ಲಿಸಿದಲ್ಲಿ ಪರಿಶೀಲಿಸಿದ್ದಾರೆ. ಈ ನಿಟ್ಟಿನಲ್ಲಿ ರೈತರು ತಮ್ಮ ಪಹಣಿಗಳನ್ನು ಪರಿಶೀಲಿಸಿಕೊಳ್ಳುವಂತೆ ಮನವಿ ಮಾಡಿದರು. ಜಿಲ್ಲಾ ಉಪಾಧ್ಯಕ್ಷ ಭರಮರೆಡ್ಡಿ ತಾಲ್ಲೂಕು ಅಧ್ಯಕ್ಷ ವೀರೇಶ ಪ್ರಮುಖರಾದ ಆದೋನಿ ರಂಗಪ್ಪ ಕೋದಂಡರಾಮ ಗಂಗಾಧರ ಜಿಲಾನ್ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.