ಹೊಸಪೇಟೆ (ವಿಜಯನಗರ): ವಕ್ಫ್ ಮಂಡಳಿಯಿಂದ ರೈತರಿಗೆ ನೋಟಿಸ್ ನೀಡಿದ್ದರೆ ಅದನ್ನು ತಕ್ಷಣ ಹಿಂದಕ್ಕೆ ಪಡೆಯಲಾಗುವುದು, ರೈತರ ಜಮೀನನ್ನು ವಶಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ವಕ್ಫ್ ಮತ್ತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಇಲ್ಲಿ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ವಿಜಯಪುರದಲ್ಲಿ 1,200 ಎಕರೆ ಜಮೀನು ವಕ್ಫ್ ಪಾಲಾಗುತ್ತದೆ ಎಂದು ಗುಲ್ಲೆಬ್ಬಿಸಿದರು, ಅಲ್ಲಿ ವಕ್ಫ್‌ಗೆ ಸೇರಿದ 11 ಎಕರೆ ಜಮೀನಷ್ಟೇ ಇದೆ ಎಂದರು.
‘ಹಾವೇರಿ ಜಿಲ್ಲೆಯ ಕಡಕೋಳದಲ್ಲಿ ಕಲ್ಲು ತೂರಾಟ ಘಟನೆ ಆಗಬಾರದಿತ್ತು, ಪೆಟ್ಟು ತಿಂದವರೇ ದೂರು ನೀಡಲು ಸಿದ್ಧರಿಲ್ಲ, ನಾವೆಲ್ಲ ಜತೆಗೆ ಇರುವವರು ಎಂದು ಅವರೇ ಹೇಳುತ್ತಿದ್ದಾರೆ. ಆದರೆ ಬಿಜೆಪಿ ಇಲ್ಲಿ ರಾಜಕೀಯ ಮಾಡುತ್ತಿದೆ’ ಎಂದು ಹೇಳಿದರು.
ದಾನಿಗಳ ಜಾಗ: ‘ವಕ್ಫ್ ಬಳಿ 1.12 ಲಕ್ಷ ಎಕರೆ ಜಮೀನಿದೆ. ಅದೆಲ್ಲವೂ ದಾನಿಗಳು ಕೊಟ್ಟಂತಹ ಜಮೀನು ಹೊರತು ಸರ್ಕಾರ ಕೊಟ್ಟಿದ್ದಲ್ಲ. ರೈತರಿಗೆ ಯಾವ ಕಾರಣಕ್ಕೂ ತೊಂದರೆ ಕೊಡುವ ಉದ್ದೇಶ ಸರ್ಕಾರಕ್ಕಿಲ್ಲ. ರೈತರ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿದ್ದರೆ ಚಿಂತೆಯೇ ಬೇಡ, ಆ ಜಮೀನನ್ನು ಸ್ವಾಧೀನಕ್ಕೆ ಪಡೆಯುವುದಿಲ್ಲ. ನೋಟಿಸ್ ನೀಡಿದ್ದರೆ ಅದನ್ನು ಹಿಂದಕ್ಕೆ ಪಡೆಯಲಾಗುವುದು’ ಎಂದು ಸಚಿವರು ಪುನುರುಚ್ಚರಿಸಿದರು.
‘ರೈತರ ಜಮೀನನ್ನು ವಕ್ಫ್ ಆಸ್ತಿ ಎಂದು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಸಚಿವರು ಹೇಳಿದರು ಎಂದು ಅಧಿಕಾರಿಗಳು ಸಹ ಅದನ್ನು ಮಾಡಲು ಸಾಧ್ಯವಿಲ್ಲ’ ಎಂದು ಅವರು ತಿಳಿಸಿದರು.
‘ವಕ್ಫ್ ಆಸ್ತಿ ಸಂಬಂಧ ನೋಟಿಸ್ ಕೊಡುವುದು ಈಗ ನಡೆದಿರುವ ಬೆಳವಣಿಗೆ ಅಲ್ಲ, ಬಿಜೆಪಿ ಅಧಿಕಾರ ಅವಧಿಯಲ್ಲಿ ಸಾವಿರಾರು ನೋಟಿಸ್‌ಗಳನ್ನು ನೀಡಲಾಗಿತ್ತು. ಅದನ್ನು ಮರೆಮಾಚಿ, ಈಗ ರಾಜಕೀಯ ಕಾರಣಕ್ಕಾಗಿ ವಿಷಯ ಎತ್ತಿದ್ದಾರೆ’ ಎಂದು ಜಮೀರ್ ಆರೋಪಿಸಿದರು.
ಸಂಡೂರು–ಕಾಂಗ್ರೆಸ್ ಗೆಲುವು ನಿಶ್ಚಿತ: ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅನ್ನಪೂರ್ಣಾ ತುಕಾರಾಂ ಅವರು 30 ಸಾವಿರದಿಂದ 40 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸುವುದು ನಿಶ್ಚಿತ. ಕ್ಷೇತ್ರಕ್ಕೆ ಕಾಂಗ್ರೆಸ್ ಸರ್ಕಾರ ವಿವಿಧ ಕಾಮಗಾರಿಗಳಿಗೆ ₹1,618 ಕೋಟಿ ಅನುದಾನ ಮಂಜೂರು ಮಾಡಿದೆ. ತುಕಾರಾಂ ಅವರ ಕೆಲಸವೇ ಅವರನ್ನು ಕೈ ಹಿಡಿಯಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
‘ಗ್ಯಾರಂಟಿ ಯೋಜನೆಗಳನ್ನು ಯಾವ ಕಾರಣಕ್ಕೂ ರದ್ದು ಮಾಡುವುದಿಲ್ಲ, ಸ್ವತಃ ಮುಖ್ಯಮಂತ್ರಿ ಅವರೇ ಇದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.