ADVERTISEMENT

ಹಿಗ್ಗಿದ ಹಿಂಗಾರು: ತುಂಗಭದ್ರಾ ಜಲಾಶಯದಿಂದ ಮೂರನೇ ಬಾರಿಗೆ ನೀರು ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2024, 15:30 IST
Last Updated 12 ಅಕ್ಟೋಬರ್ 2024, 15:30 IST
<div class="paragraphs"><p>ತುಂಗಭದ್ರಾ ಅಣೆಕಟ್ಟೆಯಿಂದ 49 ಸಾವಿರ ಕ್ಯುಸೆಕ್‌ನಷ್ಟು ನೀರು ಹೊರ ಬಿಡುತ್ತಿರುವುದರಿಂದ ಹಂಪಿಯ ಪುರಂದರ ಮಂಟಪ ಬಹುತೇಕ ಮುಳುಗಿರುವುದು.</p></div>

ತುಂಗಭದ್ರಾ ಅಣೆಕಟ್ಟೆಯಿಂದ 49 ಸಾವಿರ ಕ್ಯುಸೆಕ್‌ನಷ್ಟು ನೀರು ಹೊರ ಬಿಡುತ್ತಿರುವುದರಿಂದ ಹಂಪಿಯ ಪುರಂದರ ಮಂಟಪ ಬಹುತೇಕ ಮುಳುಗಿರುವುದು.

   

ಹೊಸಪೇಟೆ (ವಿಜಯನಗರ): ಮಲೆನಾಡು ಭಾಗದಲ್ಲಿ ಹಿಂಗಾರು ಮಳೆ ಉತ್ತಮವಾಗಿ ಸುರಿಯುತ್ತಿರುವುದರಿಂದ ತುಂಗಭದ್ರಾ ನದಿಯ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಈಗಾಗಲೇ ಭರ್ತಿಯಾಗಿಯೇ ಇದ್ದ ಅಣೆಕಟ್ಟೆಯಿಂದ 18 ಕ್ರಸ್ಟ್‌ಗೇಟ್‌ ತೆರೆದು ನೀರನ್ನು ಹೊರಬಿಡಲಾಗಿದೆ.

ಈ ವರ್ಷ ಇದೀಗ ಮೂರನೇ ಬಾರಿಗೆ ನೀರನ್ನು ಕ್ರಸ್ಟ್‌ಗೇಟ್ ತೆರೆದು ಸತತವಾಗಿ ಹೊರಬಿಡುವ ಕೆಲಸ ನಡೆದಿದೆ. ಜುಲೈ 22ರಿಂದ ಆಗಸ್ಟ್ 10ರವರೆಗೆ, ಸೆಪ್ಟೆಂಬರ್‌ 4ರಿಂದ 17ರವರೆಗೆ ಹೆಚ್ಚುವರಿ ನೀರನ್ನು ಅಣೆಕಟ್ಟೆಯಿಂದ ನದಿಗೆ ಬಿಡಲಾಗಿತ್ತು. ಈ ನಡುವೆ ಆಗಸ್ಟ್‌ 10ರಂದು 19ನೇ ಸಂಖ್ಯೆಯ ಕ್ರಸ್ಟ್‌ಗೇಟ್‌ ನೀರಲ್ಲಿ ಕೊಚ್ಚಿ ಹೋಗಿತ್ತು. ಒಂದೇ ವಾರದಲ್ಲಿ ತಾತ್ಕಾಲಿಕ ಗೇಟ್ ಅಳವಡಿಸಿ ನೀರು ಪೋಲಾಗುವುದನ್ನು ತಡೆದು ಮತ್ತೆ ಜಲಾಶಯ ಭರ್ತಿಯಾಗುವಂತೆ ಮಾಡಲಾಗಿತ್ತು. ಈ ವರ್ಷ 200 ಟಿಎಂಸಿ ಅಡಿಗೂ ಹೆಚ್ಚು ನೀರು ನದಿಗೆ ಹರಿದು ಹೋಗಿದೆ. 2022ರಲ್ಲಿ 400 ಟಿಎಂಸಿ ಅಡಿಯಷ್ಟು ನೀರು ನದಿಗೆ ಹರಿದು ಹೋಗಿತ್ತು.

ADVERTISEMENT

ಸದ್ಯ ಜಲಾಶಯಕ್ಕೆ 50,146 ಕ್ಯುಸೆಕ್‌ನಷ್ಟು ಒಳಹರಿವು ಇದ್ದು, 49,966 ಕ್ಯುಸೆಕ್‌ನಷ್ಟು ಹೊರಹರಿವು ಇದೆ. ಉತ್ತಮ ಮಳೆಯ ಕಾರಣ ಈ ಬಾರಿ ತುಂಗಭದ್ರಾ ಕಾಲುವೆಗಳ ವ್ಯಾಪ್ತಿಯ ಸುಮಾರು 15 ಲಕ್ಷ ಎಕರೆ ಪ್ರದೇಶದಲ್ಲಿ ಎರಡನೇ ಬೆಳೆಗೂ ನೀರು ಸಿಗುವುದು ಈಗಾಗಲೇ ದೃಢಪಟ್ಟಿದೆ.

ಮುನ್ಸೂಚನೆ ನೀಡಿಲ್ಲ:

ತುಂಗಭದ್ರಾ ಮಂಡಳಿ ಯಾವುದೇ ಮುನ್ಸೂಚನೆ ನೀಡದೆ ಅಣೆಕಟ್ಟೆಯಿಂದ ನೀರು ಹರಿಸಿರುವುದಕ್ಕೆ ನದಿಯ ಕೆಳಭಾಗದಲ್ಲಿ ರೈತರು ಹಾಗೂ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು. ಹಂಪಿಯ ಪುರಂದರ ಮಂಟಪ ಬಹುತೇಕ ನೀರಿನಿಂದ ಆವೃತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.