ADVERTISEMENT

ಹೊಸಪೇಟೆ: ಕೆರೆಗಳಿಗೆ ನೀರು, ಕೊನೆಗೂ ನನಸಾಯ್ತು ಕನಸು

ಹೊಸಪೇಟೆ ತಾಲ್ಲೂಕಿನ 12 ಕೆರೆಗಳಲ್ಲಿ ಜಲರಾಶಿ–ಇನ್ನೂ 2 ಕೆರೆಗಳಿಗೆ ನೀರು ಪೂರೈಕೆ

ಎಂ.ಜಿ.ಬಾಲಕೃಷ್ಣ
Published 21 ಅಕ್ಟೋಬರ್ 2024, 6:10 IST
Last Updated 21 ಅಕ್ಟೋಬರ್ 2024, 6:10 IST
ಹೊಸಪೇಟೆ ತಾಲ್ಲೂಕಿನ ಪಿ.ಕೆ.ಹಳ್ಳಿಯಲ್ಲಿನ ವಿತರಣಾ ಕೇಂದ್ರದಿಂದ ಎರಡು ಕೆರೆಗಳಿಗೆ ನೀರೆತ್ತುವ ಪಂಪ್‌ಗಳಿಗೆ ಶಾಸಕ ಎಚ್.ಆರ್‌.ಗವಿಯಪ್ಪ ಶನಿವಾರ ಚಾಲನೆ ನೀಡಿದರು
ಹೊಸಪೇಟೆ ತಾಲ್ಲೂಕಿನ ಪಿ.ಕೆ.ಹಳ್ಳಿಯಲ್ಲಿನ ವಿತರಣಾ ಕೇಂದ್ರದಿಂದ ಎರಡು ಕೆರೆಗಳಿಗೆ ನೀರೆತ್ತುವ ಪಂಪ್‌ಗಳಿಗೆ ಶಾಸಕ ಎಚ್.ಆರ್‌.ಗವಿಯಪ್ಪ ಶನಿವಾರ ಚಾಲನೆ ನೀಡಿದರು   

ಹೊಸಪೇಟೆ (ವಿಜಯನಗರ): ಹೊಸಪೇಟೆ ತಾಲ್ಲೂಕಿನ 22 ಕೆರೆಗಳಿಗೆ ನೀರು ತುಂಬಿಸುವ ಪಾಪಿನಾಯಕನಹಳ್ಳಿ ಏತ ನೀರಾವರಿ ಯೋಜನೆಯ ಭಾಗವಾಗಿ ಇದೇ ಮೊದಲ ಬಾರಿಗೆ 12 ಕೆರೆಗಳು ಭರ್ತಿಯಾಗಿದ್ದು, ಹಲವು ವರ್ಷಗಳ ಕನಸು ನನಸಾಗಿದೆ.

ಶಾಸಕ ಎಚ್‌.ಆರ್.ಗವಿಯಪ್ಪ ಅವರು ಶನಿವಾರ ಸಂಜೆ ಪಾಪಿನಾಯಕನಹಳ್ಳಿಯ ಅಂಕಲಮ್ಮ ದೇವಸ್ಥಾನ ಬಳಿಯ ಪಂಪ್‌ಹೌಸ್‌ನಲ್ಲಿ ಪಂಪ್‌ಗೆ ಚಾಲನೆ ನೀಡುವ ಮೂಲಕ ಬೆಟ್ಟದ ಮೇಲಿನ ಎರಡು ಕೆರೆಗಳಾದ ಜೋಗಯ್ಯನ ಕೆರೆ, ಶೆಟ್ಟಿ ಕೆರೆಗಳಿಗೆ ನೀರು ಹಾಯಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಈ ಮೂಲಕ ಈ ಭಾಗದ ಜನರ ಬಹುಕಾಲದ ಕನಸನ್ನು ನನಸು ಮಾಡಿದ ಕೃತಜ್ಞತಾ ಭಾವ ಜನರಲ್ಲಿ ಕಾಣಿಸಿತು. 

ಮುಂಗಾರಿನ ಆರಂಭದಲ್ಲೇ ಉತ್ತಮ ಮಳೆ ಆಗಿದ್ದ ಕಾರಣ ಜುಲೈ 19ರ ವೇಳೆಗಾಗಲೇ ತುಂಗಭದ್ರಾ ಅಣೆಕಟ್ಟೆ ಬಹುತೇಕ ಭರ್ತಿಯಾಗಿತ್ತು ಮತ್ತು ಜುಲೈ 22ರಿಂದ ಕ್ರಸ್ಟ್‌ಗೇಟ್‌ಗಳನ್ನು ತೆರೆದು ಹೆಚ್ಚುವರಿ ನೀರನ್ನು ನದಿಗೆ ಹರಿಸಲು ಆರಂಭಿಸಲಾಗಿತ್ತು. ಈ ಅವಕಾಶಕ್ಕಾಗಿಯೇ ಕಾಯುತ್ತಿದ್ದ ಶಾಸಕ ಗವಿಯಪ್ಪ ಅವರು ತಮ್ಮ ಅನುಪಸ್ಥಿತಿಯಲ್ಲಿ ತಮ್ಮ ಪುತ್ರ ವಿರೂಪಾಕ್ಷ ಅವರಿಂದಲೇ ಜುಲೈ 24ರಂದು ನೀರೆತ್ತುವ ಪಂಪ್‌ಗಳಿಗೆ ಚಾಲನೆ ಕೊಡಿಸಿದ್ದರು.

ADVERTISEMENT

ಕಳೆದ ಮೂರು ತಿಂಗಳಲ್ಲಿ ಬಹುತೇಕ 0.30 ಟಿಎಂಸಿ ಅಡಿಯಷ್ಟು ನೀರು 12 ಕೆರೆಗಳಿಗೆ ಹರಿದಿದೆ. ಜತೆಗೆ ಉತ್ತಮ ಮಳೆಯೂ ಆಗಿದೆ. ಹೀಗಾಗಿ ಈ ಎಲ್ಲ ಕೆರೆಗಳೂ ಇದೀಗ ಭರ್ತಿಯಾಗಿವೆ.

‘ನೀರು ಪಂಪ್‌ ಮಾಡಿದ್ದರಿಂದಲೇ 12 ಕೆರೆಗಳಲ್ಲಿ ಶೇ 30ರಿಂದ 40ರಷ್ಟು ನೀರು ಭರ್ತಿಯಾಗಿತ್ತು. ಮಳೆ ನೀರಿನಿಂದ ಉಳಿದ ಶೇ 60ರಷ್ಟು ನೀರು ಭರ್ತಿಯಾಯಿತು. ಆದರೆ ಗುಡ್ಡದ ಮೇಲಿನ ಎರಡು ಕೆರೆಗಳಿಗೆ ತಳವಾರಘಟ್ಟ ಪಂಪ್‌ನಿಂದ ನೀರು ಹಾಯಿಸುವುದು ಸಾಧ್ಯವಿರಲಿಲ್ಲ, ಏಕೆಂದರೆ ಪಂಪ್‌ನ ಹೆಡ್‌ ಇದಕ್ಕೆ ಸಹಕಾರಿ ಆಗಿರಲಿಲ್ಲ. ಹೀಗಾಗಿ ಪಿ.ಕೆ.ಹಳ್ಳಿ ವಿತರಣಾ ಕೇಂದ್ರದಿಂದ ಪಂಪ್‌ ಮಾಡಿ ಈ ಎರಡು ಕೆರೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ’ ಎಂದು ನೀರಾವರಿ ಇಲಾಖೆಯ ಎಂಜಿನಿಯರ್‌ ಎಲ್.ಧರ್ಮರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಈಗಾಗಲೇ ತುಂಬಿರುವ 12 ಕೆರೆಗಳ ಜತೆಗೆ ಈ ಎರಡು ಕೆರೆಗಳೂ ಕೆಲವೇ ದಿನಗಳಲ್ಲಿ ತುಂಬಲಿವೆ. ಇತರ ಮೂರು ಕೆರೆಗಳು ದುರಸ್ತಿಯಲ್ಲಿದ್ದು, ಮತ್ತೆ ಮೂರು ಕೆರೆಗಳಿಗೆ ಕೆಲವೊಂದು ಅಡೆತಡೆಗಳು ಇವೆ. ಸದ್ಯ 14 ಕೆರೆಗಳಿಗೆ ನೀರು ಹರಿದ ತೃಪ್ತಿಯಂತೂ ಇದ್ದೇ ಇದೆ, ಎಲ್ಲಾ 22 ಕೆರೆಗಳಿಗೂ ನೀರು ಹರಿಸುವ ಗುರಿ ಸಾಧಿಸುವತ್ತ ಪ್ರಯತ್ನ ಸಾಗಿದೆ ಎಂದು ಅವರು ಹೇಳಿದರು.

ಹಬ್ಬದ ಸಂಭ್ರಮ: ಪಿ.ಕೆ.ಹಳ್ಳಿಯಲ್ಲಿ ಶನಿವಾರ ಸಂಜೆ ಒಂದು ರೀತಿಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮಾಜಿ ಸಚಿವ ಆನಂದ್ ಸಿಂಗ್ ಅವರಿಂದ ಯೋಜನೆ ಕಾರ್ಯಗತಗೊಂಡರೂ, ನೀರು ಹರಿದಾಗಲಷ್ಟೇ ಯೋಜನೆಗೆ ಫಲ ದೊರೆತಂತೆ. ಹಾಲಿ ಶಾಸಕ ಗವಿಯಪ್ಪ ಅವರ ಅವಧಿಯಲ್ಲಿ ನೀರು ಹರಿದಿರುವುದನ್ನು ಜನರು ಖಚಿತಪಡಿಸಿಕೊಂಡು ಸಂಭ್ರಮಿಸಿದರು. ಪಟಾಕಿ ಸಿಡಿಸಿದರು, ಸಿಹಿ ಹಂಚಿದರು.

ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ತಹಶೀಲ್ದಾರ್ ಶ್ರುತಿ ಎಂ.ಎಂ., ನೀರಾವರಿ ಇಲಾಖೆಯ ಎಂಜಿನಿಯರ್‌  ಎಲ್.ಧರ್ಮರಾಜ್‌, ಗುತ್ತಿಗೆದಾರ ಕೆ.ಜನಾರ್ಧನ್ ರೆಡ್ಡಿ, ಊರಿನ ಹಿರಿಯರಾದ ಉದ್ವಾಳ್ ಪಂಪಾಪತಿ, ಮೇಟಿ ವಿಜಯಕುಮಾರ್, ಎನ್.ಈಶ್ವರಪ್ಪ ಇದ್ದರು.

ಹೊಸಪೇಟೆ ತಾಲ್ಲೂಕಿನ ಬೈಲವದ್ದಿಗೇರಿ ಕೆರೆ ತುಂಬಿರುವುದು
₹243 ಕೋಟಿಯ ಯೋಜನೆ
ಹಂಪಿ ಸಮೀಪದ ವೆಂಕಟಾಪುರದಿಂದ ತುಂಗಭದ್ರಾ ನದಿಯ ನೀರನ್ನು ಎತ್ತಿ 22 ಕೆರೆಗಳನ್ನು ತುಂಬಿಸಿ ಕೃಷಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದೇ ಪಿ.ಕೆ.ಹಳ್ಳಿ ಏತ ನೀರಾವರಿ ಯೋಜನೆಯ ಗುರಿ. ಇದರ ಯೋಜನಾ ವೆಚ್ಚ ₹243 ಕೋಟಿ. ಮಳೆಯಾಶ್ರಿತ 13ಕ್ಕೂ ಅಧಿಕ ಗ್ರಾಮಗಳಿಗೆ ಈ ಯೋಜನೆಯಿಂದ ಪ್ರಯೋಜನವಾಗಲಿದೆ.
ಮೈ ಕೊಡವಿ ಎದ್ದರೇ ಶಾಸಕರು?
ಶಾಸಕ ಎಚ್‌.ಆರ್.ಗವಿಯಪ್ಪ ಅವರು ಕಳೆದ ಒಂದೂವರೆ ವರ್ಷದಿಂದ ಜನರ ನಡುವೆ ಅಷ್ಟಾಗಿ ಕಾಣಿಸಿದ್ದು ಇಲ್ಲ. ಆದರೆ ಈಚಿನ ದಿನಗಳಲ್ಲಿ ಕ್ಷೇತ್ರದಲ್ಲಿ ಚುರುಕಿನಿಂದ ಓಡಾಡುತ್ತಿದ್ದು ಶನಿವಾರ ಬಹಳ ಲವಲವಿಕೆಯಿಂದ ಕಾಣಿಸಿದರು. ‘ಪಿ.ಕೆ.ಹಳ್ಳಿ ಗ್ರಾಮದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಕೆಲವೇ ದಿನಗಳಲ್ಲಿ ಚಾಲನೆ ನೀಡುತ್ತೇನೆ ಈ ಭಾಗದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಡಾಲ್ಮಿಯ ಕಾರ್ಮಿಕರಿಗೆ ಮತ್ತು ಗಣಿ ಕಾರ್ಮಿಕರಿಗೆ ಆದಷ್ಟು ಬೇಗ ಮನೆಗಳು ಕಟ್ಟಿಸಿಕೊಡುವ ಯೋಜನೆ ಜಾರಿಗೆ ತರಲಾಗುವುದು’ ಎಂದು ಅವರು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.