ADVERTISEMENT

28 ಗೈಡ್‌ಗಳ ಮನವಿಗೆ ಜಾಣ ಕಿವುಡು!

ಸಚಿವ ಎಚ್‌.ಕೆ.ಪಾಟೀಲರ ತವರು ಗದಗದಲ್ಲಿ ಪ್ರವಾಸಿ ಮಾರ್ಗದರ್ಶಿಗಳಿಗೆ ತರಬೇತಿ

ಎಂ.ಜಿ.ಬಾಲಕೃಷ್ಣ
Published 10 ಜುಲೈ 2024, 6:01 IST
Last Updated 10 ಜುಲೈ 2024, 6:01 IST
ಗದಗದಲ್ಲಿ ಪ್ರವಾಸಿ ಮಾರ್ಗದರ್ಶಕರ ತರಬೇತಿ ಕಾರ್ಯಾಗಾರ ನಡೆಯಿತು
ಗದಗದಲ್ಲಿ ಪ್ರವಾಸಿ ಮಾರ್ಗದರ್ಶಕರ ತರಬೇತಿ ಕಾರ್ಯಾಗಾರ ನಡೆಯಿತು   

ಹೊಸಪೇಟೆ (ವಿಜಯನಗರ): ಪ್ರವಾಸಿ ಮಾರ್ಗದರ್ಶಿಗಳಿಗೆ ಪುನರ್‌ಮನನ, ತರಬೇತಿ ನಿರಂತರವಾಗಿ ನಡೆಯುವ ಅಗತ್ಯ ಇದ್ದು, ಗದಗದ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಆವರಣದಲ್ಲಿ ಈ ಬಾರಿ ಅದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಪ್ರವಾಸಿಗರಿಗೆ ಭರಪೂರ ಮಾಹಿತಿ ನೀಡುವ ಹಂಪಿಯ 28  ಮಂದಿಯನ್ನು ಈ ತರಬೇತಿಯಿಂದ ಕೈಬಿಡಲಾಗಿದೆ.

ಜುಲೈ 4ರಿಂದ ತರಬೇತಿ ಆರಂಭವಾಗಿದ್ದು, ಬುಧವಾರಕ್ಕೆ ಒಂದು ಬ್ಯಾಚ್‌ನ ತರಬೇತಿ ಕೊನೆಗೊಳ್ಳಲಿದೆ. ಪ್ರತಿ ಬ್ಯಾಚ್‌ನಲ್ಲಿ ಹಂಪಿಯ 50, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಗೈಡ್‌ಗಳು ಒಳಗೊಂಡು 65 ಮಂದಿ ಇದ್ದಾರೆ. ಮೈಸೂರಿನ ಫುಡ್‌ಕ್ರಾಫ್ಟ್‌ ಸಂಸ್ಥೆಯವರು ತರಬೇತಿ ನೀಡುತ್ತಿದ್ದಾರೆ.

ಹಂಪಿಯಲ್ಲಿರುವ ಉಳಿದ 28 ಮಂದಿ ಸರ್ಕಾರ ನಿಗದಿಪಡಿಸಿದ ಎಲ್ಲಾ ತರಬೇತಿಗಳನ್ನು ಮೂರು ವರ್ಷಗಳ ಹಿಂದೆಯೇ ಪೂರೈಸಿ ಪ್ರವಾಸಿ ಮಾರ್ಗದರ್ಶಿಗಳಾದವರು. ಹಂಪಿಯ ಇಂಚಿಂಚು ಮಾಹಿತಿಯೂ ಅವರ ನಾಲಿಗೆಯಲ್ಲೇ ಇದೆ. ಆದರೆ, ರಾಜ್ಯ ಸರ್ಕಾರ ಮಾತ್ರ ಅವರಿಗೆ ಇನ್ನೂ ಮಾನ್ಯತೆ ನೀಡಿಲ್ಲ. ಹಲವು ಬಾರಿ ಮನವಿ ಮಾಡಿದರೂ ಸರ್ಕಾರ ‘ಜಾಣ ಕಿವುಡು’ ಪ್ರದರ್ಶನ ಮಾಡುತ್ತಿದೆ ಎಂದು ಹಲವು ಮಂದಿ ಅಳಲು ತೋಡಿಕೊಂಡಿದ್ದಾರೆ.

ADVERTISEMENT

ಮಾನ್ಯತೆ ನೀಡಿದ್ದೇ ಆದರೆ ಅವರಿಗೆ ಮಾಸಿಕ ₹5 ಸಾವಿರ ಗೌರವಧನ ನೀಡಬೇಕಾಗುತ್ತದೆ. ‘ಗ್ಯಾರಂಟಿ’ ಯೋಜನೆಗಳ ಭಾರದಲ್ಲಿ ಸಿಲುಕಿರುವ ರಾಜ್ಯ ಸರ್ಕಾರ ಸಾಧ್ಯವಾದಷ್ಟು ಮಟ್ಟಿಗೆ ಇಂತಹ ನಿರ್ಧಾರಗಳನ್ನು ಮುಂದಕ್ಕೆ ಕೊಂಡೊಯ್ಯಲು ಯತ್ನಿಸುತ್ತಿದೆ. ಇದರಿಂದಾಗಿಯೇ ನಮ್ಮ ಸಮಸ್ಯೆ ಕೇಳುವವರಿಲ್ಲದಾಗಿದೆ ಎಂದು ಹೆಸರು ಹೇಳಲು ಬಯಸದ ಮಾರ್ಗದರ್ಶಿಗಳು ಹೇಳಿಕೊಂಡರು.

‘ಹಂಪಿಯಲ್ಲಿ ಮಾನ್ಯತೆ ಪಡೆದ ಮತ್ತು ಮಾಸಿಕ ₹5 ಸಾವಿರ ಗೌರವಧನ ಪಡೆಯುವ 149 ಮಂದಿ ಗೈಡ್‌ಗಳಿದ್ದಾರೆ. ಅವರನ್ನಷ್ಟೇ ತರಬೇತಿ ಶಿಬಿರಕ್ಕೆ ಕಳುಹಿಸಲು ಸೂಚನೆ ಬಂದಿತ್ತು. ಹೀಗಾಗಿ, ಮೂರು ಬ್ಯಾಚ್‌ಗಳಲ್ಲಿ ಅವರನ್ನು ಕಳುಹಿಸಲಾಗುತ್ತಿದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೆಶಕ ಪ್ರಭುಲಿಂಗ ತಳಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ 28 ಮಂದಿಯೂ ಎಲ್ಲಾ ಅರ್ಹತೆ ಪಡೆದವರು, ಅವರಿಗೆ ಮಾನ್ಯತೆ ನೀಡಬೇಕು ಎಂಬ ಶಿಫಾರಸನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರ ಶೀಘ್ರ ಸ್ಪಂದಿಸುವ ವಿಶ್ವಾಸ ಇದೆ’ ಎಂದು ಪ್ರತಿಕ್ರಿಯಿಸಿದರು.

‘ಆಧುನಿಕ ಅಗತ್ಯಕ್ಕೆ ತಕ್ಕಂತೆ ತರಬೇತಿ’

‘ಪ್ರವಾಸೋದ್ಯಮ ಇಲಾಖೆಯ ಸೂಚನೆ ಮೇರೆಗೆ ಚಿತ್ರದುರ್ಗ ಮೈಸೂರು ಬಾದಾಮಿ ಬೇಲೂರು ಸಹಿತ ಒಟ್ಟು ಆರು ಕಡೆ ಈಗಾಗಲೇ ತರಬೇತಿಗಳನ್ನು ನೀಡಿದ್ದೇವೆ. ಗದಗದಲ್ಲಿ ವಿಜಯನಗರ ಬಳ್ಳಾರಿ ಕೊಪ್ಪಳ ಜಿಲ್ಲೆಗಳ ಗೈಡ್‌ಗಳಿಗೆ ಪುನರ್‌ಮನನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದು ಮೈಸೂರಿನ ಫುಡ್‌ಕ್ರಾಫ್ಟ್ ಇನ್‌ಸ್ಟಿಟ್ಯೂಟ್‌ನ ಯದೀಶ್ ಬಾಬು ತಿಳಿಸಿದರು.

‘ಪ್ರವಾಸಿಗರು ಬಯಸುವ ಇತ್ತೀಚಿನ ಅಗತ್ಯಗಳೆನಿಸಿದ ಫೇಸ್‌ಬುಕ್‌ ವಿಡಿಯೊ ಶೇರಿಂಗ್ ಹೋಟೆಲ್ ಬುಕ್ಕಿಂಗ್ ಆನ್‌ಲೈನ್‌ ಬುಕ್ಕಿಂಗ್‌ ಸ್ಥಳದಲ್ಲೇ ಬಿಕ್ಕಟ್ಟು ಬಗೆಹರಿಸುವುದು ಸೇರಿದಂತೆ ಹಲವಾರು ಬಗೆಯ ತರಬೇತಿ ನೀಡಲಾಗುತ್ತದೆ. ಇತರ ತರಬೇತಿಗಳೂ ಇರುತ್ತವೆ ತರಬೇತಿಗಾಗಿಯೇ ಒಂದು ಪಠ್ಯ ಸಿದ್ಧವಾಗಿದ್ದು ವಾರದ ತರಬೇತಿಯಲ್ಲಿ ಅದನ್ನು ಪೂರ್ಣಗೊಳಿಸಲಾಗುತ್ತದೆ’ ಎಂದರು.

ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ನಮ್ಮ ಕೊಡುಗೆಯೂ ಇದೆ. ಎಲ್ಲ ಅರ್ಹತೆ ಹೊಂದಿರುವ 28 ಮಂದಿಗೂ ಶೀಘ್ರ ಗೌರವಧನ ಕೊಡಬೇಕು.
ಎಂ.ರಾಘವೇಂದ್ರ, ಪ್ರವಾಸಿ ಮಾರ್ಗದರ್ಶಿ, ಕಮಲಾಪುರ
ಗೌರವಧನಕ್ಕಾಗಿ ನಾವು ಕಾಯುತ್ತಲೇ ಇದ್ದೇವೆ. ಸರ್ಕಾರದ ವಿಳಂಬ ಧೋರಣೆ ವಿರೋಧಿಸಿ ಸತ್ಯಾಗ್ರಹ ಮಾಡುವುದಷ್ಟೇ ನಮಗೆ ಉಳಿದಿರುವ ದಾರಿ.
ಸುನಿತಾ, ಪ್ರವಾಸಿ ಮಾರ್ಗದರ್ಶಿ, ಕಮಲಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.