ಹೊಸಪೇಟೆ (ವಿಜಯನಗರ): ಇಂದು ಎಲ್ಲರ ಕೈಯಲ್ಲೂ ಡಿಜಿಟಲ್ ಮೊಬೈಲ್ ಕ್ಯಾಮೆರಾ ಇದ್ದೇ ಇದೆ. ಎಲ್ಲರೂ ಈಗ ಛಾಯಾಗ್ರಾಹಕರೇ. ಪ್ರವಾಸಿ ತಾಣ ಹಂಪಿಗೆ ಹೋದರಂತೂ ಲೆಕ್ಕವಿಲ್ಲದಷ್ಟು ಕಡೆ ಅತ್ಯಂತ ಸುಂದರ ಫೋಟೊ ತೆಗೆಸಿಕೊಳ್ಳಲು ಸಾಧ್ಯವುಂಟು. ಹೀಗಿದ್ದರೂ ಮನಸ್ಸಲ್ಲಿ ಅಚ್ಚಳಿಯದೆ ಉಳಿಯುವುದು ಮಾತ್ರ ಕೆಲವೇ ಕೆಲವು ಫೋಟೊಗಳು. ಕೆಲವೇ ಕೆಲವು ಫೋಟೊಗ್ರಾಫರ್‌ಗಳು.
ವಿಶ್ವ ಛಾಯಾಗ್ರಾಹಕರ ದಿನ (ಫೋಟೊಗ್ರಾಫರ್ಸ್ ಡೇ) ಹಿನ್ನೆಲೆಯಲ್ಲಿ ಜಗತ್ತಿನ ಶ್ರೇಷ್ಠ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಹಂಪಿಯ ಬಂಡೆಗಲ್ಲುಗಳಿಂದ ಪಿಸುಗುಟ್ಟುವ ಧ್ವನಿ ಒಂದೇ, ‘ಲೆನ್ಸ್ ಹಿಂದಿನ ಕಲಾವಿದನೇ, ನನಗಾದರೋ ಸಾವಿದ್ದೀತು, ನೀನು ತೆಗೆದ ಫೋಟೊಕ್ಕಂತೂ ಸಾವಿಲ್ಲ....’
ಒಂದು ವಿಷಯವನ್ನು ಗಮನವಿಟ್ಟು ಬರೆಯುವುದು ಬರಹಗಾರನ ನೈಪುಣ್ಯತೆ. ಬೆಳಕನ್ನು ಬಳಸಿ ದೃಶ್ಯವನ್ನು ಸೆರೆ ಹಿಡಿಯುವುದೇ ಛಾಯಾಗ್ರಾಹಕನ ಕಸುಬುದಾರಿಕೆ. ಒಂದು ವಿಷಯದ ಹಿನ್ನೆಲೆಯನ್ನು ಅರ್ಥಮಾಡಿಕೊಂಡವನಿಗೆ ಮಾತ್ರ ಉತ್ತಮ ಛಾಯಾಗ್ರಾಹಕನಾಗಲು ಸಾಧ್ಯ ಎಂಬುದು ಬಲ್ಲವರ ಅಭಿಪ್ರಾಯ.
‘ಫೋಟೊ ನೋಡಿದ ತಕ್ಷಣ ಇಡೀ ಸನ್ನಿವೇಶದ ಚಿತ್ರಣ ಕಟ್ಟಿಕೊಡಬೇಕು. ಸಾವಿರ ಪದಗಳಲ್ಲಿ ಹೇಳಲಾರದ್ದನ್ನು ಒಂದು ಚಿತ್ರದಲ್ಲಿ ಹೇಳಿಬಿಡಬಹುದು ಎಂಬ ಮಾತು ನಿಜವಾಗಬೇಕಿದ್ದರೆ ಕ್ಯಾಮೆರಾ ಹಿಂದಿನ ಕಲಾವಿದ ಮೈಯೆಲ್ಲ ಎಚ್ಚರವಾಗಿರಬೇಕು. ಫೋಟೊವೊಂದನ್ನು ಕ್ಲಿಕ್ಕಿಸಿದ ಬಳಿಕ ಅಡಿ ಬರಹ ಅಥವಾ ಕ್ಯಾಪ್ಷನ್ ಇಲ್ಲದೆಯೇ ಫೋಟೊವನ್ನು ನೋಡುಗ ಅರ್ಥಮಾಡಿಕೊಳ್ಳುವಂತಿದ್ದರೆ ಅದುವೇ ನಿಜವಾದ ಛಾಯಾಗ್ರಹಣ‘ ಎನ್ನುತ್ತಾರೆ ವನ್ಯಜೀವಿ ಛಾಯಾಗ್ರಾಹಕ ಹರ್ಷವರ್ಧನ ಶೀಲವಂತ.
ಸಾವಿರಾರು ಪದಗಳನ್ನು ಒಂದು ಫೋಟೊ ಉಳಿಸುತ್ತದೆ, ಆದರೆ ಒಂದು ಫೋಟೊದ ಕತೆಯನ್ನು ಸಾವಿರಾರು ಶಬ್ದಗಳಲ್ಲಿ ಹೇಳಿದರೂ ಅದು ಕಡಿಮೆಯೇ ಆಗಿಬಿಟ್ಟಿರುತ್ತದೆ. ಅಂತಹ ಶಕ್ತಿ ಇರುವ ಛಾಯಾಗ್ರಾಹಕರಿಗೆ ಈಗ ಹಂತ ಹಂತದಲ್ಲಿ ಕಷ್ಟಗಳೂ ತಪ್ಪಿದ್ದಲ್ಲ. ಡಿಜಿಟಲ್ ಬಂದ ಬಳಿಕ ಪ್ರಿಂಟ್ ಹಾಕಿಸುವವರು ಕಡಿಮೆ. ಲ್ಯಾಬ್‌ಗಳಿಗೂ ಹೊಡೆತ. ಎಲ್ಲರ ಕೈಯಲ್ಲೂ ಮೊಬೈಲ್ ಇದೆ, ಛಾಯಾಗ್ರಾಹಕರು ಈಗ ಅನಿವಾರ್ಯ ಏನಲ್ಲ. ಛಾಯಾಗ್ರಾಹರಿಗೆ ನಿಜಕ್ಕೂ ಕಷ್ಟ ಇದೆ.
ಆದರೆ ಚಿಂತೆಯಲ್ಲೂ ಒಂದಿಷ್ಟು ಖುಷಿಯ ವಿಷಯ ಗೊತ್ತೇ? ಹಂಪಿಯತ್ತ ಒಮ್ಮೆ ಹೆಜ್ಜೆ ಇಡಿ, ಪರಿಣಿತ, ಅಂತರದೃಷ್ಟಿ ಇರುವ ಛಾಯಾಗ್ರಾಹಕ ತೆಗೆದ ಚಿತ್ರ ಮತ್ತೆ ಮತ್ತೆ ಅದೇ ಕಲ್ಲಿನದ್ದೇ ಆಗಿರುತ್ತದೆ, ಮತ್ತೆ ಮತ್ತೆ ಪತ್ರಿಕೆಗಳಲ್ಲಿ ಮುದ್ರಣಗೊಳ್ಳುತ್ತಲೇ ಇರುತ್ತದೆ. ಅದು ಒಂದಷ್ಟೂ ಬೇಸರ ಹುಟ್ಟಿಸುವುದಿಲ್ಲ. ಕಣ್ಣು ಸೆಳೆಯದೆ ಬಿಡುವುದಿಲ್ಲ.
ಯಾಕಾಗಿ ಛಾಯಾಗ್ರಾಹಕರ ದಿನ?
ಜಗತ್ತಿನ ಅತ್ಯಂತ ಹಳೆಯ ಫೋಟೊ ಸಂಸ್ಕರಣಾ ಪದ್ಧತಿ ‘ಡ್ಯಾಗರಿಯೊಟೈಪ್’ ಅಸ್ತಿತ್ವಕ್ಕೆ ಬಂದುದು 1837ರ ಆಗಸ್ಟ್ 19ರಂದು. ಅದಕ್ಕಾಗಿಯೇ ಅದೇ ದಿನವನ್ನು ವಿಶ್ವ ಛಾಯಾಗ್ರಾಹಕರ ದಿನ ಎಂದು ಹೆಸರಿಸಲಾಗಿದೆ. ಫ್ರಾನ್ಸ್‌ನ ಲೂಯಿಸ್ ಡ್ಯಾಗರಿ ಮತ್ತು ಜೋಸೆಫ್ ನೈಸ್‌ಫೋರ್ ನೈಪ್ಸ್ ಅವರು ಈ ಛಾಯಾಚಿತ್ರ ಸಂಸ್ಕರಣಾ ಪದ್ಧತಿ ಕಂಡುಹಿಡಿದವರು. 1839ರ ಜನವರಿ 9ರಂದು ಫ್ರೆಂಚ್ ವಿಜ್ಞಾನ ಅಕಾಡೆಮಿ ‘ಡ್ಯಾಗರಿಯೊಟೈಪ್‘ ಅನ್ನು ಅಧಿಕೃತವಾಗಿ ಮಾನ್ಯ ಮಾಡಿತು. ಅದೇ ವರ್ಷದ ಆಗಸ್ಟ್ 19ರಂದು ಫ್ರೆಂಚ್ ಸರ್ಕಾರ ಈ ಸಾಧನದ ಹಕ್ಕುಸ್ವಾಮ್ಯವನ್ನು ಖರೀದಿಸಿತು. ಡ್ಯಾಗರಿಯೊಟೈಪ್ ತಂತ್ರಜ್ಞಾನದ ಆವಿಷ್ಕಾರ ‘ಜಗತ್ತಿಗೊಂದು ಉಡುಗೊರೆ’ ಎಂದು ಘೋಷಿಸಿದ ಸರ್ಕಾರ ಎಲ್ಲರಿಗೂ ಮುಕ್ತವಾಗಿ ಸಿಗುವಂತೆ ಮಾಡಿತು. ಛಾಯಾಗ್ರಹಣ ತಂತ್ರಜ್ಞಾನದಲ್ಲಿ ಆಗುತ್ತಿರುವ ಹೊಸ ಹೊಸ ಆವಿಷ್ಕಾರಗಳಿಗೆ ಬುನಾದಿಯಾಗಿರುವ ಇದು ಕಳೆದ 185 ವರ್ಷಗಳಲ್ಲಿ ಮಾಡಿರುವ ಪ್ರಭಾವ ಅಗಣಿತ. ನಾವು ನೀವೆಲ್ಲ ನಮ್ಮ ತಾತ ಮುತ್ತಾತರ ಫೋಟೊ ನೋಡುತ್ತಿದ್ದರೆ ಅಥವಾ ಈಗ ತಾನೇ ಅಂಬೆಗಾಲಿಡುತ್ತಿರುವ ಮಗು ಸಹ ಫೋಟೊಗ್ರಫಿ ಮಾಡುತ್ತಿದ್ದರೆ ಅದೆಲ್ಲದಕ್ಕೂ ಮೂಲದಲ್ಲಿರುವ ತಂತ್ರಜ್ಞಾನವನ್ನು ನಾವು ಮರೆಯಬಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.