ಹೊಸಪೇಟೆ (ವಿಜಯನಗರ): ‘ಐವತ್ತು ವರ್ಷಗಳ ಹಿಂದೆ ಹಂಪಿಗೆ ಪ್ರವಾಸಿಗರು ಬರುತ್ತಿದ್ದುದು ಬಹಳ ಕಡಿಮೆ. ರಸ್ತೆಗಳೇ ಇರಲಿಲ್ಲ. ಇಡೀ ಹಂಪಿ ತೋರಿಸಿದ್ದಕ್ಕೆ ಒಂದು ರೂಪಾಯಿ ಕೇಳಿದರೆ ಜನ ಹೌಹಾರುತ್ತಿದ್ದರು. ನಾಲ್ಕಾಣೆಯಷ್ಟೇ ಕೊಡುವುದು ಎಂದು ಚೌಕಾಶಿ ಮಾಡಿ ಅಷ್ಟೇ ಕೊಟ್ಟು ಹೋಗುತ್ತಿದ್ದರು.....
ಹಂಪಿಯ ಪ್ರವಾಸಿ ಮಾರ್ಗದರ್ಶಿ (ಟೂರ್ ಗೈಡ್) ಗುರುಮೂರ್ತಿ ಹೇಳುತ್ತ ಹೋದರು. ಅವರಿಗೆ ವಿಜಯನಗರ ಗತವೈಭವದ ಇತಿಹಾಸ ಕಂಠಪಾಟವಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ಹಂಪಿ 50 ವರ್ಷಗಳ ಹಿಂದೆ ಹೇಗಿತ್ತು ಎಂದು ತಿಳಿದುಕೊಳ್ಳುವುದಕ್ಕೆ ಅವರನ್ನು ಒಮ್ಮೆ ಮಾತನಾಡಿಸಿದರೆ ಸಾಕು, ಇಡೀ ಚಿತ್ರಣ ಕಣ್ಣಮುಂದೆ ಹಾದುಹೋಗುತ್ತದೆ.
‘1971ರಲ್ಲಿ ನಾನು ಪ್ರವಾಸಿಗರಿಗೆ ಮಾರ್ಗದರ್ಶನ ಮಾಡಲು ಆರಂಭಿಸಿದೆ. ನನಗೆ ಇನ್ನೂ 12 ವರ್ಷ. ಆಗ ಹಂಪಿಗೆ ಬರುತ್ತಿದ್ದ ಪ್ರವಾಸಿಗರ ಸಂಖ್ಯೆ ಬಹಳ ಕಡಿಮೆ ಇತ್ತು. ರಸ್ತೆಯೇ ಇರಲಿಲ್ಲ. ಕಾಲು ದಾರಿ, ಕಾಡು, ಕಲ್ಲುಬಂಡೆಗಳಷ್ಟೇ ಕಾಣಿಸುತ್ತಿದ್ದವು. ಹೊಸಪೇಟೆಯಿಂದ ಚಕ್ಕಡಿ ಗಾಡಿಯಲ್ಲಿ ಜನರು ಬರುತ್ತಿದ್ದರು. ಹಲವರು ನಡೆದೇ ಬರುತ್ತಿದ್ದರು. ಬಸ್ ಸಹ ಇರಲಿಲ್ಲ. ವ್ಯಾನ್‌ಗಳು ಅಗೊಮ್ಮೆ, ಈಗೊಮ್ಮೆ ಬರುತ್ತಿದ್ದವು. ಆಗ ವಿರೂಪಾಕ್ಷದಿಂದ ವಿಜಯ ವಿಠ್ಠಲ ತನಕ ಪ್ರವಾಸಿಗರಿಗೆ ಮಾರ್ಗದರ್ಶನ ಮಾಡುವುದು ಇತ್ತು. ನಾಲ್ಕಾಣೆಯಷ್ಟೇ ನಮ್ಮ ಶುಲ್ಕವಾಗಿತ್ತು. ಕಮಲಮಹಲ್, ಮಹಾನವಮಿ ದಿಬ್ಬ, ರಾಣಿಸ್ನಾನಗೃಹಗಳನ್ನು ನೋಡುತ್ತಿದ್ದ ಪ್ರವಾಸಿಗರ ಸಂಖ್ಯೆ ಬಹಳ ಕಡಿಮೆ ಇತ್ತು...’ ಎಂದು ಗುರುಮೂರ್ತಿ ಹೇಳುತ್ತ ಹೋದರು.
‘ನಾನು ಓದಿದ್ದು ಎಂಟನೇ ತರಗತಿ. ಕನ್ನಡ, ತೆಲುಗು, ತಮಿಳು, ಹಿಂದಿ ಮಾತನಾಡುತ್ತೇನೆ. ಹೀಗಾಗಿ ಪ್ರವಾಸಿಗರಿಗೆ ಮಾರ್ಗದರ್ಶನ ನೀಡುವುದಕ್ಕೆ ನನಗೆ ಭಾಷೆಯ ತೊಡಕು ಆಗಿಯೇ ಇಲ್ಲ. ಈಗ 64 ವರ್ಷ ವಯಸ್ಸು.ದೂರ ನಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿರೂಪಾಕ್ಷ ದೇವಸ್ಥಾನದೊಳಗೆ ಮಾತ್ರ ಮಾರ್ಗದರ್ಶನ ನೀಡುತ್ತೇನೆ’ ಎಂದರು.
‘1978ರ ಸುಮಾರಿಗೆ ಹಂಪಿಗೆ ರಸ್ತೆ ಸಂಪರ್ಕ ದೊರೆಯಿತು. ಅದು ಜಲ್ಲಿಕಲ್ಲುಗಳ ರಸ್ತೆ. 1983ರ ವೇಳೆಗೆ ಹೊಸಪೇಟೆಯಿಂದ ಬಸ್ ಸೇವೆ ಆರಂಭವಾಯಿತು. 1986ರಿಂದೀಚೆಗೆ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗತೊಡಗಿತು. ಹಂಪಿಗೆ ವಿಶ್ವ ಪಾರಂಪರಿಕ ತಾಣದ ಹೆಗ್ಗಳಿಕೆ ದೊರೆತ ಬಳಿಕ ವಿದೇಶಿ ಪ್ರವಾಸಿಗರು ಸಹ ಹೆಚ್ಚು ಹೆಚ್ಚು ಬರತೊಡಗಿದರು. ಇಂದು ಹಂಪಿ ವಿಶ್ವ ಪ್ರಸಿದ್ಧವಾಗಿದೆ. ವಿವಿಧ ಅಭಿರುಚಿಯ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಅದಕ್ಕೆ ತಕ್ಕಂತೆ ಈ ತಾಣದಲ್ಲಿ ಮಾಹಿತಿ ಕೊಡುವ ವ್ಯವಸ್ಥೆ ಆಗಬೇಕು, ಗೈಡ್‌ಗಳು ತಮ್ಮ ಜ್ಞಾನದ ಆಳ, ಅಗಲವನ್ನು ಇನ್ನಷ್ಟು ವಿಸ್ತರಿಸಿಕೊಳ್ಳುವ ಅಗತ್ಯ ಇದೆ’ ಎಂದು ಗುರುಮೂರ್ತಿ ಅಭಿಪ್ರಾಯಪಟ್ಟರು.
‘ಪ್ರವಾಸಿ ತಾಣ ಧಾರ್ಮಿಕ ಕ್ಷೇತ್ರ–ವ್ಯತ್ಯಾಸ ತಿಳಿದರೆ ಉತ್ತಮ’
‘ಹಂಪಿ ಹಾಳು ಹಂಪಿ ಎಂದು ಹೆಸರು ಗಳಿಸಿರಬಹುದು ಆದರೆ ವಿರೂಪಾಕ್ಷ ದೇವಸ್ಥಾನ ಮಾತ್ರ ಭಗ್ನಗೊಂಡಿಲ್ಲ ವಿರೂಪಗೊಂಡಿಲ್ಲ. ಇದು ದೇಶದ ಅತ್ಯಂತ ಪವಿತ್ರ ಶಿವ ಕ್ಷೇತ್ರಗಳಲ್ಲಿ ಒಂದು. ಹೀಗಿರುವಾಗ ಹಂಪಿಯನ್ನು ಕೇವಲ ಪ್ರವಾಸಿ ತಾಣವೆಂಬಂತೆ ಬಿಂಬಿಸದೆ ಧಾರ್ಮಿಕ ಕ್ಷೇತ್ರವೆಂದು ಸಹ ಬಿಂಬಿಸುವ ಅಗತ್ಯ ಇದೆ. ದೇವಸ್ಥಾನದ ಬಳಿ ಪೂಜಾ ಸಾಮಗ್ರಿ ದೇವರ ಫೋಟೊಗಳು ಧರ್ಮಗ್ರಂಥಗಳು ರಾತ್ರಿ ಉಳಿದುಕೊಳ್ಳುವುದಕ್ಕೆ ಛತ್ರಗಳು ಸಹಿತ ವಿವಿಧ ಅಂಗಡಿಗಳು ಇದ್ದರೇನೇ ಚೆಂದ. ಹಂಪಿಯಲ್ಲಿ ಅದಕ್ಕೆ ಅವಕಾಶ ಇಲ್ಲ. ಸಂಜೆ 7ರ ಬಳಿಕ ಜನಸಂಚಾರವೇ ಇಲ್ಲಿ ಇರುವುದಿಲ್ಲ. ಧಾರ್ಮಿಕ ಕ್ಷೇತ್ರ ಎಂಬುದಾಗಿ ಹಂಪಿಯನ್ನು ಬಿಂಬಿಸುವುದಕ್ಕೆ ಸಹ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡುತ್ತಾರೆ ಗುರುಮೂರ್ತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.