ADVERTISEMENT

ವಿಜಯನಗರ: ಗಣೇಶನ ಮೂರ್ತಿ ವಿಸರ್ಜನೆ ವೇಳೆ ಕ್ರೇನ್ ಬಿದ್ದು ಇಬ್ಬರು ಯುವಕರ ಸಾವು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2022, 8:34 IST
Last Updated 11 ಸೆಪ್ಟೆಂಬರ್ 2022, 8:34 IST
ಗಣೇಶನ ಮೂರ್ತಿ ವಿಸರ್ಜನೆ ವೇಳೆ ಕ್ರೇನ್ ಬಿದ್ದಿರುವ ದೃಶ್ಯ
ಗಣೇಶನ ಮೂರ್ತಿ ವಿಸರ್ಜನೆ ವೇಳೆ ಕ್ರೇನ್ ಬಿದ್ದಿರುವ ದೃಶ್ಯ   

ಹೊಸಪೇಟೆ (ವಿಜಯನಗರ): ಗಣಪನ ಮೂರ್ತಿ ವಿಸರ್ಜನೆ ವೇಳೆ ಕ್ರೇನ್ ಬಿದ್ದು ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಶನಿವಾರ ತಡರಾತ್ರಿ ನಗರದ ತುಂಗಭದ್ರಾ ಜಲಾಶಯ ಸಮೀಪದ ಪವರ್ ಕಾಲುವೆ ಬಳಿ ನಡೆದಿದೆ.

ಟಿ.ಬಿ. ಡ್ಯಾಂ ನಿವಾಸಿ ಅಶೋಕ (18) ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅದೇ ಕಾಲೊನಿಯ ಸಾಯಿ ನಿಖಿಲ್ (17) ಭಾನುವಾರ ಮಧ್ಯಾಹ್ನ ಸಾವನ್ನಪ್ಪಿದ್ದಾರೆ.

ಘಟನೆ ವಿವರ:ಇ.ವಿ. ಕ್ಯಾಂಪ್ ಮಹಾಗಣಪತಿ ಗಣೇಶ ಮಂಡಳಿಯವರು ಶನಿವಾರ ರಾತ್ರಿ 1.30 ರ ಸುಮಾರಿಗೆ 34 ಅಡಿ ಎತ್ತರದ ಗಣೇಶನ ಮೂರ್ತಿಯನ್ನು ಪವರ್ ಕಾಲುವೆಯಲ್ಲಿ ವಿಸರ್ಜನೆಗೆ ತೆಗೆದುಕೊಂಡು ಹೋಗಿದ್ದರು. ಈ ವೇಳೆ ಭಾರ ತಾಳಲಾರದೇ ನಿಯಂತ್ರಣ ತಪ್ಪಿ ಕ್ರೇನ್ ಗಣಪನ ಮೂರ್ತಿ ಜೊತೆಗೆ ಕಾಲುವೆಗೆ ಉರುಳಿ ಬಿದ್ದಿದೆ. ಕ್ರೇನ್ ಮತ್ತು ತಡೆಗೋಡೆ ಮಧ್ಯೆ‌ ಸಿಲುಕಿಕೊಂಡಿದ್ದ ಅಶೋಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಗಂಭೀರ ಗಾಯಗೊಂಡಿದ್ದ ಸಾಯಿ ನಿಖಿಲ್ ಅವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ಆಸ್ಪತ್ರೆಗೆ ಕಳಿಸಲಾಯಿತು. ಆದರೆ ಮಧ್ಯಾಹ್ನ ಅವರು ಕೊನೆಯುಸಿರೆಳೆದಿದ್ದಾರೆ.

ಕ್ರೇನ್ ಆಪರೇಟರ್ ರಾಜು ಹಾಗೂ ಸುರಕ್ಷತಾ ಕ್ರಮ ಕೈಗೊಳ್ಳದ ಇ.ವಿ.ಕ್ಯಾಂಪ್ ಮಹಾಗಣಪತಿ ಮಂಡಳಿ ಮುಖಂಡ ನೂಕರಾಜ ವಿರುದ್ಧ ಟಿ.ಬಿ. ಡ್ಯಾಂ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ‌ ಡಾ. ಅರುಣ್ ಕೆ. ತಿಳಿಸಿದ್ದಾರೆ.
ಡಿವೈಎಸ್ಪಿ ವಿಶ್ವನಾಥ ರಾವ್ ಕುಲಕರ್ಣಿ ಹಾಗೂ ಅವರ ಸಿಬ್ಬಂದಿ ಕೂಡಲೇ ಮತ್ತೆರಡು ಕ್ರೇನ್ ಸ್ಥಳಕ್ಕೆ ತರಿಸಿ ಕಾಲುವೆಯೊಳಗೆ ಬಿದ್ದಿದ್ದ ಕ್ರೇನ್ ಹೊರತೆಗೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT