ADVERTISEMENT

‘ಇಂದಿನ ಲೇಖಕರಿಗೆ ತಾಳ್ಮೆ ಕಡಿಮೆ’

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2017, 5:49 IST
Last Updated 26 ಏಪ್ರಿಲ್ 2017, 5:49 IST

ಸೊಲ್ಲಾಪುರ:  ಇಂದಿನ ಲೇಖಕರಲ್ಲಿ ತಾಳ್ಮೆ ಇಲ್ಲ.  ಲೇಖಕ ಬೇಗ ಪ್ರಸಿದ್ಧಿ ಪಡೆಯಲು ಹಂಬಲಿಸುತ್ತಾನೆ. ಹೀಗಾಗಿ ಸತ್ವರಹಿತ ಸಾಹಿತ್ಯ ರಚನೆಯಾಗುವ ಸಾಧ್ಯತೆ ಹೆಚ್ಚು ಎಂದು ಸಾಹಿತಿ ಪ್ರೇಮಶೇಖರ ಅಭಿಪ್ರಾಯಪಟ್ಟರು.ಮುಂಬೈನ ಆದರ್ಶ ಅನುವಾದ ಅಕಾಡೆಮಿ ಹಾಗೂ ಸೊಲ್ಲಾಪುರದ ಅಕ್ಷತಾ ದೇಶಪಾಂಡೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಅನುವಾದಕರ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮರಾಠಿ ಲೇಖಕಿ ನೀರಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎರಡು ಭಾಷೆಗಳಿಗೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ಆದರ್ಶ ಅನುವಾದ ಅಕಾಡೆಮಿ ವಿಶ್ವವಿದ್ಯಾಲಯ ವೊಂದು ಹಮ್ಮಿಕೊಳ್ಳ ಬೇಕಾದ ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮುಂದಿನ ದಿನಗಳಲ್ಲಿ ಗೋವಾ ಸಮೀಪದ ಮಾಣಗಾಂವದ ಸಾನೆಗುರೂಜಿ ಟ್ರಸ್ಟ್‌ನಲ್ಲಿ ಸಮಾವೇಶ ವನ್ನು ಹಮ್ಮಿಕೊಂಡರೆ ಎಲ್ಲ ವ್ಯವಸ್ಥೆ ಒದಗಿಸಿಕೊಡುವುದಾಗಿ ಹೇಳಿದರು.

ಗಿರೀಶ ಜಕಾಪುರೆ ಅವರು ಸಂಪಾದಿಸಿರುವ ಅನುವಾದಿತ ಕಥೆಗಳ ಕೃತಿ ‘ಸದಾ ಮಲ್ಲಿಗೆ’ಯನ್ನು  ಬಿಡುಗಡೆ ಮಾಡಲಾಯಿತು. ಚಿತ್ರಕಲಾವಿದ ವಾಸುದೇವ ಕಾಮತ್ ಮಾತನಾಡಿ,  ಭಾಷೆಯ ಅಂತರಂಗ ಅರಿತು ಅನುವಾದ ಕಾರ್ಯ ನಡೆಯಬೇಕು ಎಂದರು.ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಮಾತನಾಡಿ, ಪತ್ರಿಕೆಗಳಲ್ಲಿ ಪ್ರಕಟ ಗೊಳ್ಳುವ ಹಲವಾರು ಅಂಶ ಅನುವಾದದ ಮೂಲಕವೇ ಎಲ್ಲರಿಗೂ ತಲುಪುತ್ತವೆ. ಹೀಗಾಗಿ ಪತ್ರಿಕಾರಂಗದಲ್ಲಿ ವಿಶೇಷ ಜಾಗರೂಕತೆಯ ಅವಶ್ಯಕತೆ ಇದೆ ಎಂದರು.  ನಂತರ ಭಾಗವಹಿಸಿದ್ದ ಸುಮಾರು 30 ಜನ ಅನುವಾದಕರು ಕನ್ನಡಕ್ಕೆ ಅನುವಾದಿಸಿದ್ದ  30 ಮರಾಠಿ ಕಥೆಗಳ ಅನುವಾದ ಕುರಿತು ಚರ್ಚಿಸ ಲಾಯಿತು.

ADVERTISEMENT

ಎಡರನೆಯ ದಿನ ಲೇಖಕ ಪ್ರೇಮಶೇಖರ ಕನ್ನಡ ಕಥಾ ಪ್ರಪಂಚದ ಕುರಿತು ಉಪನ್ಯಾಸ ನೀಡಿದರು. ಉಪನ್ಯಾಸ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಅನುವಾದಕಿ ಸುಮಾ ದ್ವಾರಕಾನಾಥ ಮಾತನಾಡಿದರು.ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮನೋಹರ ನಾಯಕ ಮಾತನಾಡಿ, ಜಾಹೀರಾತು ಕ್ಷೇತ್ರದಲ್ಲಿ ಅನುವಾದದ ಎಡವಟ್ಟುಗಳನ್ನು ಸೂಕ್ಷ್ಮವಾಗಿ ಹೇಳುತ್ತ ಅನುವಾದಕ ಒಬ್ಬ ಸಂವಾಹಕನಾಗ ಬೇಕು. ಅಪೂರ್ಣ ಜ್ಞಾನದ ಅನುವಾದಕ ಸಂವಾಹಕನಾಗದೇ ಸಂಹಾರಕನಾಗುವ ಸಾಧ್ಯತೆಯೇ ಹೆಚ್ಚು ಎಂದರು.

ಸೃಜನಾ ಮುಂಬಯಿ ಕನ್ನಡ ಲೇಖಕಿಯರ ಬಳಗದ ಗಿರಿಜಾ ಶಾಸ್ತ್ರಿ,  ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕ್‌ಜಾನ್ ಶೇಖ್ ಮಾತನಾಡಿದರು. ಹಿರಿಯ ಸಾಹಿತ್ಯಪ್ರೇಮಿ ಪ್ರಶಾಂತ ನಾಯಕ ಇದ್ದರು.ಡಾ.ಸಿದ್ರಾಮ ಕಾರ್ಣಿಕ, ಪ್ರಭಾ ಬೋರಗಾಂವಕರ್, ಶರಣಪ್ಪ ಫುಲಾರಿ, ರಾಜೇಂದ್ರ ಜಿಗಜಿಣಗಿ, ಕಲ್ಲಪ್ಪ ಅಡಲಟ್ಟಿ, ಮಲ್ಲಮ್ಮ ಸಾಲೇಗಾಂವ, ಚಂದ್ರಕಾಂತ ಕಾರಕಲ್ಲ, ಸೋಮಶೇಖರ ಜಮಶೆಟ್ಟಿ, ಬಸವರಾಜ ಅಲದಿ, ಅಪರ್ಣಾ ರಾವ್, ಗುರು ಬಿರಾದಾರ ಭಾಗವಹಿಸಿದರು.

ಓಂ ಕರಾಓಕೆ ಶೋನ ಮಹೇಶ ಮೇತ್ರಿ ಅವರಿಂದ ಸಂಗೀತ ರಜನಿ ಕಾರ್ಯಕ್ರಮ ಆಯೋಜಿಸಲಾಗಿತ್ತು.  ಅಕ್ಷತಾ ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಅನುವಾದಕಿ ವಿದ್ಯಾ ಕುಂದರಗಿ ನಿರೂಪಿಸಿದರು.   ಜೆ.ಪಿ.ದೊಡಮನಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.