ವಿಜಯಪುರ: ಬಿಜೆಪಿಯ ಜಿಲ್ಲಾ ಘಟಕದ ಪಾಲಿಗೆ ವಿಧಾನ ಪರಿಷತ್‌ನ ಪಕ್ಷೇತರ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ‘ಬಿಸಿ ತುಪ್ಪ’ವಾಗಿ ಪರಿಣಮಿಸಿದ್ದಾರೆ. ನಗರ ಮಂಡಲದ ಪ್ರಮುಖರಿಗಂತೂ ಬಿಸಿ ತುಪ್ಪ ಎನ್ನುವಂತಾಗಿದ್ದು, ಉಗುಳುವಂಗೂ ಇಲ್ಲ; ನುಂಗುವಂತೆಯೂ ಇಲ್ಲದ ಪರಿಸ್ಥಿತಿ.
ಯತ್ನಾಳ ಸೇರ್ಪಡೆಗೆ ಸಂಬಂಧಿಸಿದಂತೆ ಮಾತುಕತೆ ಚುರುಕುಗೊಂಡ ಬೆನ್ನಿಗೆ, ಜಿಲ್ಲೆಯ ವಿವಿಧೆಡೆಯಿರುವ ಯತ್ನಾಳ ಅಭಿಮಾನಿಗಳು, ಬೆಂಬಲಿಗರು, ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಸ್ವಾಗತ ಕೋರಿದ್ದಾರೆ. ಕೆಲ ಮುಖಂಡರು ವೈಯಕ್ತಿಕವಾಗಿ ಭೇಟಿ ಮಾಡಿ ಅಭಿನಂದನೆಯನ್ನೂ ಸಲ್ಲಿಸಿದ್ದಾರೆ. ಇದರ ಜತೆಗೆ ಯತ್ನಾಳರ ಬದ್ಧ ವೈರಿ ಪಡೆ ತಮ್ಮ ವಿರೋಧವನ್ನೂ ಸಾಂಕೇತಿಕವಾಗಿ ಸಲ್ಲಿಸಿದೆ.
ಮಧ್ಯ ಕರ್ನಾಟಕದಲ್ಲಿ ಎರಡು ದಿನ ಮಠ ಯಾತ್ರೆ ನಡೆಸಿದ ಅಮಿತ್ ಶಾ ನವದೆಹಲಿಯತ್ತ ತೆರಳುತ್ತಿದ್ದಂತೆ; ಮಾತೃ ಪಕ್ಷ ಸೇರ್ಪಡೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಯತ್ನಾಳ ಬೆಂಗಳೂರಿಗೆ ದೌಡಾಯಿಸಿದ್ದಾರೆ. ಇದರ ಬೆನ್ನಿಗೆ ತಮ್ಮ ಅಹವಾಲು ಸಲ್ಲಿಸಲು ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ರಾಜಧಾನಿ ತಲುಪಿದ್ದು, ಬುಧವಾರ ಪಕ್ಷದ ವರಿಷ್ಠರು ಆರ್‌ಎಸ್‌ಎಸ್ ಪ್ರಮುಖರನ್ನು ಭೇಟಿಯಾಗಿ ತಮ್ಮ ಅಸಮಾಧಾನ, ವಾಸ್ತವ ನೆಲೆಗಟ್ಟಿನ ಚಿತ್ರಣ ಮನದಟ್ಟು ಮಾಡಿಕೊಡುವ ಯತ್ನ ನಡೆಸಿದ್ದಾರೆ.
ದುಡಿಮೆಗೆ ಕೂಲಿ: ‘ಬಸನಗೌಡ ಪಾಟೀಲ ಯತ್ನಾಳ ಸದ್ಯದ ಪರಿಸ್ಥಿತಿಯಲ್ಲಿ ಪಕ್ಷಕ್ಕೆ ಅನಿವಾರ್ಯವಾಗಿರಬಹುದು. ಸೇರ್ಪಡೆಗೆ ನಮ್ಮ ವಿರೋಧವಿಲ್ಲ. ಇದಕ್ಕೆ ಚಕಾರವನ್ನೂ ಎತ್ತಲ್ಲ. ನಮ್ಮದು ಒಂದೇ ಬೇಡಿಕೆ. ಎಲ್ಲ ಕಾಲಘಟ್ಟದಲ್ಲೂ ಪಕ್ಷಕ್ಕೆ ನಿಷ್ಠೆಯಿಂದ ದುಡಿದಿದ್ದೇವೆ. ನಮ್ಮ ದುಡಿಮೆಗೆ ಕೂಲಿ ಕೊಡಿ ಎಂದು ವರಿಷ್ಠರನ್ನು ಭೇಟಿಯಾಗಿ ಅಹವಾಲು ಸಲ್ಲಿಸಲು ಬೆಂಗಳೂರಿಗೆ ಬಂದಿದ್ದೇವೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಟಿಕೆಟ್ ಆಕಾಂಕ್ಷಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತ್‌ಕುಮಾರ್, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಮುರಳೀಧರರಾವ್ ಅವರನ್ನು ಭೇಟಿಯಾಗಿ ನಮ್ಮ ಬೇಡಿಕೆ ಮಂಡಿಸುತ್ತೇವೆ. ಯಾವುದೇ ಕಾರಣಕ್ಕೂ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಅನ್ನು ಯತ್ನಾಳಗೆ ಕೊಡಬಾರದು. ಸಂಘಟನೆ ಸದೃಢವಾಗಿದೆ. ಇಷ್ಟು ದಿನ ಪಕ್ಷಕ್ಕೆ ದುಡಿದ ಕಾರ್ಯಕರ್ತನಿಗೆ ಅವಕಾಶ ತಪ್ಪಿಸಬೇಡಿ. ಒಂದು ವೇಳೆ ಬಸನಗೌಡರಿಗೆ ವಿಧಾನಸಭೆಗೆ ಸ್ಪರ್ಧಿಸಲು ಅವಕಾಶ ಕೊಡುವುದಿದ್ದರೆ ಬೇರೆ ಕ್ಷೇತ್ರಗಳಲ್ಲಿ ಟಿಕೆಟ್ ನೀಡಿ ಎಂದು ಮನವಿ ಸಲ್ಲಿಸಿದ್ದೇವೆ. ವರಿಷ್ಠರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಅವರು ಹೇಳಿದರು.
‘ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹ, ದಕ್ಷಿಣ ಭಾರತದ ಉಸ್ತುವಾರಿ ಮುಕುಂದ್ ಬೆಂಗಳೂರಿಗೆ ಬುಧವಾರ ಬಂದಿದ್ದು, ಸಂಘ ಪರಿವಾರದ ಹಿನ್ನೆಲೆ ಹೊಂದಿರುವ ಟಿಕೆಟ್ ಆಕಾಂಕ್ಷಿಗಳು ಯತ್ನಾಳಗೆ ಅವಕಾಶ ಕೊಡಲೇಬಾರದು ಎಂಬ ಒಂದಂಶದ ಬೇಡಿಕೆಯೊಂದಿಗೆ ತಮ್ಮ ಹಕ್ಕೊತ್ತಾಯವನ್ನು ‘ಕೇಶವ ಕೃಪ’ದಲ್ಲಿ ಮಂಡಿಸಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
‘ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಚಂದ್ರಶೇಖರ ಕವಟಗಿ, ರಾಜಶೇಖರ ಮಗಿಮಠ, ಡಾ.ಪ್ರಶಾಂತ ಕಟಕೋಳ, ಉಮಾಕಾಂತ ಲೋಣಿ ಬೆಂಗಳೂರಿನಲ್ಲಿ ಬೀಡು ಬಿಟ್ಟು ಲಾಬಿ ನಡೆಸುತ್ತಿರುವ ಪ್ರಮುಖರಾಗಿದ್ದಾರೆ.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ವಿಜಯಪುರದಲ್ಲೇ ಪತ್ರಿಕಾಗೋಷ್ಠಿ ನಡೆಸಿ ‘ನೋವಿನ’ ಹೆಸರಿನಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಇ್ನು ಪ್ರಬಲ ಆಕಾಂಕ್ಷಿಗಳು ತಮ್ಮದೇ ಪರಿವಾರದ ಪ್ರಭಾವದಿಂದ ಮುಂಬೈ, ನವದೆಹಲಿಯಲ್ಲಿ ಟಿಕೆಟ್‌ಗಾಗಿ ಲಾಬಿ ನಡೆಸಿದ್ದಾರೆ’ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.