ADVERTISEMENT

ಮಕ್ಕಳಿಗೆ ಖುಷಿ ತಂದ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2013, 10:34 IST
Last Updated 11 ಫೆಬ್ರುವರಿ 2013, 10:34 IST

ವಿಜಾಪುರ: ಏನ್ ಜನಾ, ಎಂಥಾ ಭಾಷಣಾ, ಒಳ್ಳೊಳ್ಳೆ ಪುಸ್ತಕಾ, ಹೊಟ್ಟೆ ತುಂಬಾ ಊಟ, ನಮ್ಮ ಜೀವನದಾಗ್ ಇಂಥಾ ಸಮ್ಮೇಳನ ಮರೆಯೋಕಾಗಲ್ಲಾ ಬಿಡ್ರಿ.....
ವಿಜಾಪುರ ಹಾಗೂ ಸುತ್ತಮುತ್ತಲಿನ ತಾಲ್ಲೂಕುಗಳಿಂದ ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನ ನೋಡಲು ಬಂದ ವಿದ್ಯಾರ್ಥಿಗಳು ಖುಷಿಯಿಂದ ಹೇಳುತ್ತಿರುವ ಮಾತುಗಳಿವು.


ಒಂಬತ್ತು ದಶಕಗಳ ನಂತರ ಬರದ ನಾಡಿನಲ್ಲಿ ನಡೆಯುತ್ತಿರುವ ಸಾಹಿತ್ಯ ಸುಗ್ಗಿಗೆ ವಿದ್ಯಾರ್ಥಿಗಳ ಮಹಾಪೂರವೇ ಹರಿದು ಬರುತ್ತಿದೆ. ಸಮ್ಮೇಳನದ ಹಿನ್ನಲೆಯಲ್ಲಿ ಜಿಲ್ಲೆಯ ಶಾಲೆಗಳಿಗೆ ಮೂರು ದಿನಗಳ ಕಾಲ ರಜೆಯನ್ನೂ ಘೋಷಿಸುವ ಮೂಲಕ ಶಿಕ್ಷಕ ಮತ್ತು ವಿದ್ಯಾರ್ಥಿಗಳಿಗೆ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಸಮ್ಮೇಳನದಲ್ಲಿ ನಾಡಿನ ಮೂಲೆಮೂಲೆಗಳಿಂದ ಸಾವಿರಾರು ಜನ ಶಿಕ್ಷಕರು ಸಹಭಾಗಿಗಳಾಗಿದ್ದಾರೆ. ಅದರಂತೆ ವಿಜಾಪುರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಶಾಲಾ ಮಕ್ಕಳನ್ನೂ ಕೂಡ ಶಿಕ್ಷಕರು ಮತ್ತು ಪಾಲಕರು ಇಲ್ಲಿಗೆ ಕರೆ ತಂದು ಸಾಹಿತ್ಯ ಸಂಭ್ರಮದ ರಸಗವಳ ಉಣಬಡಿಸುತ್ತಿದ್ದಾರೆ. ಮಕ್ಕಳು ಖುಷಿಖುಷಿಯಾಗಿ ಸಮ್ಮೇಳನ ಆವರಣದಲ್ಲಿನ ಪುಸ್ತಕ ಮಳಿಗೆಗಳಲ್ಲಿ ನಾನಾ ಕೃತಿಗಳ ಪರಿಚಯ ಮತ್ತು ಖರೀದಿ ಮಾಡಿಕೊಳ್ಳುತ್ತಿದ್ದರೆ, ಹಲವರು ವೇದಿಕೆಯಲ್ಲಿ ಕುಳಿತುಕೊಂಡು ಪ್ರಬುದ್ಧರ ವಿದ್ವತ್ ಮಾತುಗಳನ್ನು ತದೇಕಚಿತ್ತದಿಂದ ಆಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

`ಆಗಾಗ ಪತ್ರಿಕೆ, ದೂರದರ್ಶನಗಳಲ್ಲಿ ಸಾಹಿತ್ಯ ಸಮ್ಮೇಳನ, ಸಮಾವೇಶಗಳನ್ನು ನೋಡಿ ಸಂಭ್ರಮಿಸುತ್ತಿದ್ದ ತಮಗೆ ಪ್ರತ್ಯಕ್ಷವಾಗಿ ಸಮ್ಮೇಳನದಲ್ಲಿ ಭಾಗಿಯಾಗಲು ಅವಕಾಶ ದೊರಕಿರುವುದು ನಮ್ಮ ಭಾಗ್ಯವೇ ಸರಿ. ಸಮ್ಮೇಳನದಲ್ಲಿ ವಚನ ಸಾಹಿತ್ಯ, ಅನುಭಾವ ಸಾಹಿತ್ಯ, ಮಕ್ಕಳ ಸಾಹಿತ್ಯ ಮೊದಲಾದ ಹಲವಾರು ವಿಷಯಗಳ ಕುರಿತು ವಿಚಾರ ಸಂಕಿರಣಗಳನ್ನು ಏರ್ಪಡಿಸಿರುವುದು ನಮ್ಮಂಥ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದೆ.

ಸಮ್ಮೇಳನದ ಆವರಣದಲ್ಲಿ ಹರಡಿಕೊಂಡಿರುವ ನೂರಾರು ಪುಸ್ತಕ ಮಳಿಗೆಗಳು ಒಳ್ಳೊಳ್ಳೆಯ ಪುಸ್ತಕಗಳನ್ನು ಪರಿಚಯಿಸುತ್ತಿವೆ. ಎಷ್ಟೋ ಸಾಹಿತಿಗಳ ಹೆಸರುಗಳೂ ಗೊತ್ತಿರದ ನಮಗೆ ನಾಡಿನ ಸಾರಸ್ವತ ಲೋಕದ ಪರಿಚಯ ಮಾಡಿಕೊಳ್ಳಲು ಅವಕಾಶವಾಗಿದೆ. ಈ ಸಮ್ಮೇಳನದಲ್ಲಿ ಭಾಗಿಯಾಗಿರುವುದು ಜೀವನದ ಅವಿಸ್ಮರಣೀಯ ಘಳಿಗೆಯಾಗಿದೆ' ಎಂದು ಸಿಂದಗಿ ತಾಲ್ಲೂಕಿನ ತಿಳಗೋಳದ ಪ್ರೌಢಶಾಲೆಯೊಂದರ ವಿದ್ಯಾರ್ಥಿನಿ ಭಾಗ್ಯಶ್ರೀ ಸಾತಿಹಾಳ ಹೇಳುತ್ತಾಳೆ.

`ವಿದ್ಯಾರ್ಥಿಗಳೊಂದಿಗೆ ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಲು ಬಂದಿದ್ದೇನೆ. ಮಕ್ಕಳಿಗೆ ಊಟ, ಉಪಾಹಾರದ ವ್ಯವಸ್ಥೆ ಚೆನ್ನಾಗಿದೆ. ಕನ್ನಡ ಸಾಹಿತ್ಯ ಪರಂಪರೆಯ ಕುರಿತು ಮಕ್ಕಳಿಗೆ ಅರಿವು ಮೂಡಿಸುವಲ್ಲಿ ಇಂತಹ ಸಮ್ಮೇಳನಗಳು ಸಹಕಾರಿಯಾಗಿವೆ.

90 ವರ್ಷಗಳ ನಂತರ ವಿಜಾಪುರ ಜನತೆಗೆ ಸಾಹಿತ್ಯ ಸಂಭ್ರಮದಲ್ಲಿ ಮಿಂದೇಳುವ ಅವಕಾಶ ಸಿಕ್ಕಿದೆ' ಎನ್ನುತ್ತಾರೆ ಅದೇ ಶಾಲೆಯ ಶಿಕ್ಷಕ ಬಿ.ಎಸ್.ಗುಂಡಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT