ADVERTISEMENT

ಆಲಮಟ್ಟಿ ಜಲಾಶಯ | ಒಂದೇ ದಿನ 10 ಟಿಎಂಸಿ ಅಡಿ ನೀರು

​ಪ್ರಜಾವಾಣಿ ವಾರ್ತೆ
Published 24 ಜುಲೈ 2023, 16:18 IST
Last Updated 24 ಜುಲೈ 2023, 16:18 IST
ಆಲಮಟ್ಟಿ ಜಲಾಶಯದ ಹಿನ್ನೀರಿನ ದೃಶ್ಯ ಪ್ರಜಾವಾಣಿ ಚಿತ್ರ: ಚಂದ್ರಶೇಖರ ಕೋಳೇಕರ
ಆಲಮಟ್ಟಿ ಜಲಾಶಯದ ಹಿನ್ನೀರಿನ ದೃಶ್ಯ ಪ್ರಜಾವಾಣಿ ಚಿತ್ರ: ಚಂದ್ರಶೇಖರ ಕೋಳೇಕರ   

ಆಲಮಟ್ಟಿ: ಮಹಾರಾಷ್ಟ್ರ ಹಾಗೂ ರಾಜ್ಯದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಹೆಚ್ಚಿದ್ದರಿಂದ, ಆಲಮಟ್ಟಿ ಜಲಾಶಯಕ್ಕೆ ಸೋಮವಾರ ಒಂದೇ ದಿನ 1,14,445 ಕ್ಯುಸೆಕ್ ನೀರು ಹರಿದು ಬಂದಿದೆ. ಈ ಮೂಲಕ  ಜಲಾಶಯದಲ್ಲಿ 66.794 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು ಜಲಾಶಯ ಅರ್ಧ ಭರ್ತಿಯಾಗಿದೆ.

519.60 ಮೀ ಗರಿಷ್ಠ ಸಂಗ್ರಹ ಮಟ್ಟದ ಜಲಾಶಯದಲ್ಲಿ 515.39 ಮೀ. ವರೆಗೆ ನೀರು ಸಂಗ್ರಹವಾಗಿದೆ. ಕೇವಲ 12 ದಿನದಲ್ಲಿ ಜಲಾಶಯ ಅರ್ಧ ಭರ್ತಿಯಾದಂತಾಗಿದೆ. 12 ದಿನಗಳ ಹಿಂದೆ ಜಲಾಶಯದ ಒಳಹರಿವು ಆರಂಭಗೊಂಡಿರಲೇ ಇಲ್ಲ.  ‌‌ಹೀಗಾಗಿ ಜಲಾಶಯ ಭರ್ತಿಯಾಗುತ್ತದೆಯೋ ಎಂಬ ಆತಂಕ ರೈತರಲ್ಲಿ ಮನೆ ಮಾಡಿತ್ತು. ಆದರೆ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿಗೆ ಬರುವ ನೀರಿನ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ.

ನಾರಾಯಣಪುರ ಜಲಾಶಯಕ್ಕೆ ಕುಡಿಯುವ ನೀರಿಗಾಗಿ 8 ಸಾವಿರ ಕ್ಯುಸೆಕ್ ನೀರನ್ನು ಆಲಮಟ್ಟಿ ಜಲಾಶಯದ ಬಲಭಾಗದ ವಿದ್ಯುತ್ ಘಟಕದ ಮೂಲಕ ನೀರನ್ನು ಬಿಡಲಾಗುತ್ತಿದೆ. ಇದರಿಂದ ಎರಡು ಘಟಕಗಳಿಂದ 60 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಆಲಮಟ್ಟಿ ಜಲಾಶಯದ ಒಳಹರಿವು 1.20 ಲಕ್ಷ ಕ್ಯುಸೆಕ್‌ಗೆ ಹೆಚ್ಚಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.