ADVERTISEMENT

ಮೃತರ ಕುಟುಂಬಗಳಿಗೆ ತಲಾ ₹ 3 ಲಕ್ಷ ಪರಿಹಾರ 

ಕೃಷ್ಣಾ ನದಿಯಲ್ಲಿ ಮುಳುಗಿದ ತೆಪ್ಪ; ಮೂವರ ಶವ ಪತ್ತೆ, ಇಬ್ಬರು ನಾಪತ್ತೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 15:42 IST
Last Updated 3 ಜುಲೈ 2024, 15:42 IST
ಕೊಲ್ಹಾರ ತಾಲ್ಲೂಕಿನ ಬಳೂತಿಯಲ್ಲಿ ಸಂಭವಿಸಿದ ತೆಪ್ಪ ದುರಂತದಲ್ಲಿ ಮೃತರಾದವರ ಮನೆಗಳಿಗೆ ಸಚಿವ ಶಿವಾನಂದ ಪಾಟೀಲ ಬುಧವಾರ ಭೇಟಿ ನೀಡಿದರು
ಕೊಲ್ಹಾರ ತಾಲ್ಲೂಕಿನ ಬಳೂತಿಯಲ್ಲಿ ಸಂಭವಿಸಿದ ತೆಪ್ಪ ದುರಂತದಲ್ಲಿ ಮೃತರಾದವರ ಮನೆಗಳಿಗೆ ಸಚಿವ ಶಿವಾನಂದ ಪಾಟೀಲ ಬುಧವಾರ ಭೇಟಿ ನೀಡಿದರು   

ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಕೃಷ್ಣಾ ನದಿಯಲ್ಲಿ ಮಂಗಳವಾರ ಸಂಭವಿಸಿದ ತೆಪ್ಪ ದುರಂತದಲ್ಲಿ ಸಾವಿಗೀಡಾದ ಮೂವರ ಮನೆಗಳಿಗೆ ಬುಧವಾರ ಸಚಿವ ಶಿವಾನಂದ ಪಾಟೀಲ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ವೈಯಕ್ತಿಕವಾಗಿ ತಲಾ ₹ 3 ಲಕ್ಷ ಪರಿಹಾರ ನೀಡಿದರು.

ತೆಪ್ಪ ದುರಂತದಲ್ಲಿ ಮೃತರಾದವರ ಮನೆಗಳಿಗೆ ಹೋಗುವ ಮುನ್ನ ಸಚಿವ ಶಿವಾನಂದ ಪಾಟೀಲ, ಬಳೂತಿ ಬಳಿಯ ನದಿ ತೀರಕ್ಕೆ ಭೇಟಿ ನೀಡಿ ಪೊಲೀಸರು ನಡೆಸುತ್ತಿರುವ ನಾಪತ್ತೆಯಾದವರ ಶೋಧ ಕಾರ್ಯಾಚರಣೆ ಪರಿಶೀಲಿಸಿ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಎಸ್ಪಿ ಋಷಿಕೇಶ ಸೊನಾವಣೆ ಅವರಿಂದ ಘಟನೆ ಹಾಗೂ ಶೋಧಕಾರ್ಯದ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದೊಂದು ನಾಗರಿಕ ಸಮಾಜ ತಲೆ ತಗ್ಗಿಸುವಂತ ಘಟನೆ. ಈ ದುರ್ಘಟನೆ ನಡೆಯಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಪ್ರಾಥಮಿಕ ಮಾಹಿತಿ ಪ್ರಕಾರ ಸಾವಿಗೀಡಾದವರು ಇಸ್ಪೀಟ್ ಆಡುವಾಗ ಪಿಎಸ್‌ಐ ದಾಳಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಗ್ರಾಮಸ್ಥರಿಂದಲು ಮಾಹಿತಿ ಪಡೆಯುತ್ತೇನೆ. ಈ ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇನೆ. ಘಟನೆಯಲ್ಲಿ ಅನೇಕ ಯುವಕರು ವಿವಾಹಿತರು, ಅವಿವಾಹಿತರು ಇದ್ದಾರೆ. ಅವರ ಜೊತೆಗೆ ಮಾತನಾಡಿದಾಗ ಸಂಕಷ್ಟ ಅರ್ಥವಾಗುತ್ತೆ. ಬಳಿಕ ಪರಿಹಾರದ ಬಗ್ಗೆ ಮಾಹಿತಿ ನೀಡುತ್ತೇನೆ. ಸರ್ಕಾರದಿಂದ ಪರಿಹಾರ ಕೊಡಲು ಬಂದರೆ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇನೆ. ಯಾವ ರೀತಿ ಸಹಾಯ ಮಾಡಲು ಸಾಧ್ಯ ಸಹಾಯ ಮಾಡುತ್ತೇನೆ ಎಂದರು.

ವಿಜಯಪುರ ಜಿಲ್ಲೆಯಲ್ಲಿ ಗ್ಯಾಂಬ್ಲಿಂಗ್ ಹೆಚ್ಚಾಗಿದೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಯಲ್ಲಿ ಗಣ್ಯರೇ ಗ್ಯಾಂಬ್ಲಿಂಗ್‌ ಆಡಿಸುತ್ತಾರೆ ಎನ್ನುವ ಮಾಹಿತಿ ಇದೆ. ಜನರು ಸಾಕ್ಷಿ ಸಮೇತ ಮಾಹಿತಿ ಕೊಡುತ್ತಿಲ್ಲ. ಈ ವಿಚಾರ ಐಜಿ, ಎಸ್‌ಪಿ ಜೊತೆಗೆ ಹಂಚಿಕೊಂಡಿದ್ದೇನೆ. ನಾನು ಸಹ ಐಜಿ ಅವರಿಗೆ ಮಾಹಿತಿ ಹಂಚಿಕೊಂಡಿದ್ದೆ. ಬಲಾಢ್ಯರು ಜೂಜು ಆಡಿಸುತ್ತಾರೆ. ಎಷ್ಟೇ ಬಲಾಢ್ಯರಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದರು.

ಯಾರೇ ಆದರೂ ಜೂಜು ಆಡಿಸಬಾರದು. ಇಂಥ ಕೆಲಸಗಳಿಗೆ ಪ್ರೇರಣೆ ನೀಡಬಾರದು. ಬಲಾಢ್ಯರು ಆಡಿಸ್ತಾರೆ, ಸಣ್ಣವರು ಆಡ್ತಾರೆ ಎಂದು ಹೇಳಿದರು.

ಮೃತರ ಕುಟುಂಬಸ್ಥರಿಂದ ಪಿಎಸ್‌ಐ ವಿರುದ್ಧ ಕೇಳಿಬಂದಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕುಟುಂಬಸ್ಥರು ದೂರು ನೀಡಿದರೆ ಕೊಲ್ಹಾರ ಪಿಎಸ್‌ಐ ವಿರುದ್ಧ ತನಿಖೆ ನಡೆಸಲಾಗುತ್ತದೆ. ದೂರು ನೀಡದೇ ಇದ್ದರೂ ಪಿಎಸ್‌ಐ ವಿರುದ್ಧ ತನಿಖೆಗೆ ನಡೆಸುತ್ತೇವೆ ಎಂದರು.

ಪೊಲೀಸರು, ಬಲಾಢ್ಯರು ಜೂಜು ಆಡಿಸುವಾಗ ಹಿಡಿಯದೇ ಇದ್ದರೆ ಸಣ್ಣ ಪುಟ್ಟ ಜನ ಜೂಜಲ್ಲಿ ಭಾಗಿಯಾಗ್ತಾರೆ. ಪೊಲೀಸರು ಈ ಬಗ್ಗೆ ತನಿಖೆ ಮಾಡುತ್ತಾರೆ. ವರದಿ ಬಂದ‌ನಂತರ ಮಾಧ್ಯಮಕ್ಕೆ ಮಾಹಿತಿ ಹಂಚಿಕೊಳ್ಳುತ್ತೇನೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.