ADVERTISEMENT

ಆಲಮಟ್ಟಿ: ಸರ್ಕಾರಿ ಶಾಲೆಗೊಂದು ಅಭಿನಂದನ ಗ್ರಂಥ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 5:26 IST
Last Updated 27 ಜೂನ್ 2024, 5:26 IST
ಆಲಮಟ್ಟಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ
ಆಲಮಟ್ಟಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ   

ಆಲಮಟ್ಟಿ: ಆಲಮಟ್ಟಿ ಅಣೆಕಟ್ಟು ಸ್ಥಳದಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ (ಎಂಪಿಎಸ್‌) ಇದೀಗ ಅಭಿನಂದನ ಗ್ರಂಥ ಪಡೆಯುವ ಸುಯೋಗ ಒದಗಿಬಂದಿದೆ.

1964ರಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಅಂದಿನ ಕೇಂದ್ರ ಸಚಿವ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರು ಅಡಿಗಲ್ಲು ಹಾಕಿದಾಗ ಸರ್ಕಾರಿ ಅಧಿಕಾರಿಗಳು, ನೌಕರರು, ಕಾರ್ಮಿಕರು, ವ್ಯಾಪಾರಿಗಳು ಅಣೆಕಟ್ಟು ಸ್ಥಳದ ಕ್ಯಾಂಪ್‌ಗೆ ವಲಸೆ ಬರತೊಡಗಿದರು. ಹಾಗೆ ವಲಸೆ ಬಂದ ಮಕ್ಕಳಿಗಾಗಿ ಅದೇ ವರ್ಷ ಎಂ.ಪಿ.ಎಸ್. ಸ್ಥಾಪನೆ ಆಯಿತು. ಉನ್ನತ ಅಧಿಕಾರಿಗಳ ಮಕ್ಕಳಿಂದ ಹಿಡಿದು ಕಾರ್ಮಿಕರ ಮಕ್ಕಳೆಲ್ಲ ಒಟ್ಟಾಗಿ ಓದುತ್ತಿದ್ದ ಈ ಶಾಲೆಯಲ್ಲಿ ಒಂದು ಕಾಲಕ್ಕೆ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 1,300ರಿಂದ 1,500 ಇರುತ್ತಿತ್ತು.

ಎಂ.ಪಿ.ಎಸ್.ನಲ್ಲಿ ಏಳನೆಯ ತರಗತಿ ಉತ್ತೀರ್ಣರಾದ ನಂತರ ಆಗಿನ ವಿದ್ಯಾರ್ಥಿಗಳು, ‘ಕರುನಾಡ ಗಾಂಧಿ’ ಮಂಜಪ್ಪ ಹರ್ಡೇಕರ ಅವರು 1927ರಲ್ಲಿ ಸ್ಥಾಪಿಸಿದ ಮಂಜಪ್ಪ ಹರ್ಡೇಕರ ಸ್ಮಾರಕ (ಎಂ.ಎಚ್.ಎಂ.) ಪ್ರೌಢಶಾಲೆಗೆ ಸೇರುತ್ತಿದ್ದರು. ಹಲವು ಏಳುಬೀಳುಗಳನ್ನು ಕಂಡು, ಈಗ ಗದುಗಿನ ತೋಂಟದಾರ್ಯ ವಿದ್ಯಾಪೀಠದ ಅಧೀನದಲ್ಲಿ ಹೆಮ್ಮರವಾಗಿ ಬೆಳೆದಿದೆ. ಈ ಶಾಲೆಗೆ ಈಗ 97 ವರ್ಷ.

ADVERTISEMENT

ಈ ಉಭಯ ಶಾಲೆಗಳಲ್ಲಿ ಕಲಿತವರು ಈಗ ಅಮೇರಿಕ, ಇಂಗ್ಲೆಂಡ್, ಆಸ್ಟ್ರೇಲಿಯ, ಯು.ಎ.ಇ. ಸೇರಿದಂತೆ ನಾನಾ ದೇಶಗಳಲ್ಲಿ ವೈದ್ಯರಾಗಿ, ತಂತ್ರಜ್ಞರಾಗಿ, ವಿವಿಧ ಉದ್ಯೋಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದೇಶದ ದೆಹಲಿ, ಬೆಂಗಳೂರು, ಮುಂಬೈ, ಚಂಡಿಗಡ, ಹೈದರಾಬಾದ್‌ ಮುಂತಾದ ನಗರಗಳಲ್ಲಿ ಆಲಮಟ್ಟಿಯ ಪ್ರತಿಭೆಗಳು ಕಾಣಸಿಗುತ್ತವೆ. ಅನೇಕರು ಯು.ಪಿ.ಎಸ್.ಸಿ. ಮತ್ತು ಕೆ.ಪಿ.ಎಸ್.ಸಿ.ಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉತ್ತೀರ್ಣರಾಗಿ ಸರ್ಕಾರದ ಉನ್ನತ ಹುದ್ದೆಗಳಲ್ಲಿ ರಾರಾಜಿಸುತ್ತಿದ್ದಾರೆ.

ಉಭಯ ಶಾಲೆಗಳ ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ ‘ಮಂಜಪ್ಪ ಹರ್ಡೇಕರ ಪ್ರೇರಿತ ಎಂ.ಪಿ.ಎಸ್. ಹಾಗೂ ಎಂ.ಎಚ್.ಎಂ. ಶಾಲೆಗಳ ಹಳೆಯ ವಿದ್ಯಾರ್ಥಿಗಳ ಬಳಗ’ ಎಂಬ ಸಂಘಟನೆಯೊಂದನ್ನು ಹುಟ್ಟುಹಾಕಿ, ‘ಕಲಿತ ಶಾಲೆಗೆ ಅಕ್ಷರ ತೋರಣ’ ಎಂಬ ಅಭಿನಂದನ ಗ್ರಂಥವನ್ನು ಸಿದ್ಧಪಡಿಸಿದ್ದಾರೆ. ನಾನಾ ಉದ್ಯೋಗಗಳಲ್ಲಿರುವ ವಿದ್ಯಾರ್ಥಿಗಳು ಎರಡೂ ಶಾಲೆಗಳಲ್ಲಿನ ತಮ್ಮ ಸವಿನೆನಪುಗಳ ಬಗ್ಗೆ, ತಮಗೆ ದಾರಿ ತೋರಿದ ಗುರುಗಳ ಬಗ್ಗೆ ಲೇಖನ-ಕವನಗಳನ್ನು ಈ ಕೃತಿಯಲ್ಲಿ ಬರೆದಿದ್ದಾರೆ. ಈ ಶಾಲೆಗಳಲ್ಲಿ ಕಲಿಸಿದ್ದ ಕೆಲವು ಶಿಕ್ಷಕ-ಶಿಕ್ಷಕಿಯರೂ ತಮ್ಮ ನೆನಪುಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ.

ಇಂಥ ಅಪರೂಪದ ಕೃತಿ ಜೂನ್‌ 28ರಂದು ಇಲ್ಲಿಯ ಸಮುದಾಯ ಭವನದಲ್ಲಿ ಬಿಡುಗಡೆ ಆಗಲಿದೆ. ಮುಂಡರಗಿಯ ನಿಷ್ಕಲ ಮಂಟಪದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹಾಗೂ ಆಲಮಟ್ಟಿ ರುದ್ರಮುನಿ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ.

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಗ್ರಂಥವನ್ನು ಬಿಡುಗಡೆಗೊಳಿಸಲಿದ್ದು, ಸಚಿವ ಶಿವಾನಂದ ಪಾಟೀಲ​ ವಿದ್ಯಾರ್ಥಿ ಬಳಗವನ್ನು ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬಿ.ಕೆ. ಹರಿಪ್ರಸಾದ್‌, ಹಣಮಂತ ನಿರಾಣಿ, ಎಸ್.ಕೆ.ಬೆಳ್ಳುಬ್ಬಿ, ಸಂಗಮೇಶ ಬಬಲೇಶ್ವರ, ಅರುಣ ಶಹಾಪುರ, ಮೋಹನರಾಜ್ ಕೆ.ಪಿ., ಐ.ಎ.ಎಸ್. ಶಿವಾನಂದ ಪಟ್ಟಣಶೆಟ್ಟಿ, ಉಮಾದೇವಿ ಸೊನ್ನದ, ವಸಂತ ರಾಠೋಡ, ಸದಾಶಿವ ಬಿ. ದಳವಾಯಿ ಆಗಮಿಸಲಿದ್ದಾರೆ.

ಎಂ.ಪಿ.ಎಸ್. ಹಾಗೂ ಎಂ.ಎಚ್.ಎಂ. ಶಾಲೆಗಳ 70 ನಿವೃತ್ತ ಹಾಗೂ ಹಾಲಿ ಸೇವೆಯಲ್ಲಿರುವ ಶಿಕ್ಷಕ-ಶಿಕ್ಷಕಿಯರು ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಸನ್ಮಾನ ನಡೆಯಲಿದೆ.

ಮಧ್ಯಾಹ್ನ 2.30ಕ್ಕೆ ‘ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಹೇಗೆ?’ ನಾನಾ ಸಾಧಕ ಹಳೇ ವಿದ್ಯಾರ್ಥಿಗಳು ಆಲಮಟ್ಟಿ ಸುತ್ತಮುತ್ತಲಿನ ಗ್ರಾಮಗಳ ಶಾಲಾ ವಿದ್ಯಾರ್ಥಿಗಳಿಗಾಗಿ ಸಂವಾದ ಏರ್ಪಡಿಸಲಾಗಿದೆ.

ಅಭಿನಂದನ ಗ್ರಂಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.