ADVERTISEMENT

ವೀಳ್ಯದೆಲೆ ಬೆಳೆದು ಲಾಭ ಕಂಡ ರೈತ

ನಿರಂತರ ಆದಾಯ ಪಡೆಯುತ್ತಿರುವ ಕೂಡಗಿ ಗ್ರಾಮದ ಸವರಾಜ ಹಿರೇಕುರಬರ

ಪ್ರಜಾವಾಣಿ ವಿಶೇಷ
Published 13 ಸೆಪ್ಟೆಂಬರ್ 2024, 6:40 IST
Last Updated 13 ಸೆಪ್ಟೆಂಬರ್ 2024, 6:40 IST
ಕೂಡಗಿ ಗ್ರಾಮದ ರೈತ ಬಸವರಾಜ ಹಿರೇಕುರಬರ ಅವರ ತೋಟದಲ್ಲಿ ಬೆಳೆದಿರುವ ವೀಳ್ಯದೆಲೆ
ಕೂಡಗಿ ಗ್ರಾಮದ ರೈತ ಬಸವರಾಜ ಹಿರೇಕುರಬರ ಅವರ ತೋಟದಲ್ಲಿ ಬೆಳೆದಿರುವ ವೀಳ್ಯದೆಲೆ   

ಕೊಲ್ಹಾರ:  ತಾಲ್ಲೂಕಿನ ಕೂಡಗಿ ಗ್ರಾಮದಲ್ಲಿ ಕಡಿಮೆ ಖರ್ಚಿನಲ್ಲಿ ವೀಳ್ಯದೆಲೆ ಬೆಳೆದು, ನಿರಂತರ ಆದಾಯ ಪಡೆಯುತ್ತಿದ್ದಾರೆ ಪ್ರಗತಿಪರ ರೈತ ಬಸವರಾಜ ಹಿರೇಕುರಬರ.

ಮೊದಲು ಹಮಾಲಿ ಮಾಡುತ್ತಿದ್ದ ಬಸವರಾಜ, ನಂತರ ಕುರಿ ಕಾಯುವ ಕಾಯಕದಲ್ಲಿ ತೊಡಗಿದ್ದರು. ಇದರಲ್ಲೂ ಹೆಚ್ಚು ಆದಾಯ ಬರದಿದ್ದಾಗ, ವೀಳ್ಯದೆಲೆ ಬೆಳೆಯಲು ಆಸಕ್ತಿ ತೋರಿದರು. ಇದರಲ್ಲಿ ಯಶ ಕಂಡಿರುವ ಅವರು ಕೈತುಂಬ ಆದಾಯ ಪಡೆಯುತ್ತಿದ್ದಾರೆ.

 6ಕ್ಕೂ ಹೆಚ್ಚು ಎಕರೆ ಜಮೀನಿನಲ್ಲಿ ವೀಳ್ಯದೆಲೆ ಬೆಳೆದಿದ್ದೇನೆ. ಭೂಮಿಯ ಮಣ್ಣು ಹದಮಾಡಿ ,8 ಟ್ರ್ಯಾಕ್ಟರ್ ತಿಪ್ಪೆ ಗೊಬ್ಬರ (ಕೊಟ್ಟಿಗೆ ಗೊಬ್ಬರ) ಹಾಕಿ ಅಡಿಗೆ ಒಂದರಂತೆ ಮಡಿ ಮಾಡಿ,ಮಡಿಗೆ 16 ರಂತೆ ಒಟ್ಟು 500 ಮಡಿಗಳಿಗೆ ,8000 ಸಸಿಗಳು ಬೇಕಾಗುತ್ತದೆ. ಮೂರು ತಿಂಗಳವರೆಗೆ ಆಧಾರದ ಗಿಡಗಳನ್ನು ನೆಟ್ಟು ಬೆಳೆಸಿದ ನಂತರ ಗಿಡದ ಕೆಳಗೆ ಬೀಜ ಹಾಕಿ ಎಂಟು ತಿಂಗಳ ಬೆಳೆಸಿದರೆ ವೀಳ್ಯದೆಲೆ ಫಸಲು ಕೈಗೆ ಬರುತ್ತದೆ ಎಂದು ತಿಳಿಸಿದರು.

ADVERTISEMENT

ಎರಡು ತಿಂಗಳಿಗೊಮ್ಮೆ ಮಣ್ಣು ತಿರಿವಿ ಹಾಕುವುದರಿಂದ ಬೇರುಗಳಿಗೆ ಹೊಸ ಜೀವ, ಪೋಷಕಾಂಶಗಳು ಮೇಲಿಂದ ಮೇಲೆ ಸಿಗುತ್ತವೆ ಎಂದರು.

ಮೂರು ಬೋರ್‌ವೆಲ್‌ಗಳಿಂದ ಕೃಷಿ ಹೊಂಡದಲ್ಲಿ ನೀರು ಸಂಗ್ರಹ ಮಾಡಿ ವಾತಾವರಣಕ್ಕೆ ತಕ್ಕಂತೆ ವಾರಕ್ಕೆ ಎರಡು ಬಾರಿ ನೀರು ಬಿಡುತ್ತಾರೆ. ಇದರ ಜೊತೆಗೆ ಉಳ್ಳಾಗಡ್ಡಿ ಮೆಕ್ಕೆಜೋಳ, ನುಗ್ಗೆ ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ. ಇದರ ಮಧ್ಯೆ  70 ರಿಂದ 80 ಕುರಿ ಸಾಕಾಣಿಕೆ ಸಹ ಮಾಡುತ್ತಿದ್ದಾರೆ.

ಸ್ಥಳೀಯವಾಗಿ ಮಾರುಕಟ್ಟೆ ಲಭ್ಯವಿರುವರಿಂದ  ಅನುಕೂಲವಾಗಿದೆ. ಜೊತೆಗೆ ರೈತರ ತೋಟಗಳಿಗೆ ಬೇರೆ ಬೇರೆ ವ್ಯಾಪಾರಸ್ಥರು ಸ್ವತಃ ಬಂದು ವ್ಯಾಪಾರ ವಹಿವಾಟು ಮಾಡುವುದರಿಂದ ರೈತರಿಗೆ ವ್ಯಾಪಾರದ ತೊಂದರೆಯಿಲ್ಲ.

‘ಒಂದು ಎಕರೆಯಲ್ಲಿ ಒಂದು ಕಟಾವಿಗೆ 150 ಬುಟ್ಟಿ ಫಸಲು ಬರುತ್ತದೆ. 1 ಬುಟ್ಟಿಯಲ್ಲಿ 3000 ಎಲೆಗಳು ಇರುತ್ತವೆ. 1 ಬುಟ್ಟಿಗೆ ₹1,500ಕ್ಕೆ ಮಾರಾಟ ಮಾಡಲಾಗಿದೆ. ಇದರಿಂದ ಎಂಟು ತಿಂಗಳಿಗೆ ₹12 ಲಕ್ಷ ಆದಾಯ ಸಿಕ್ಕಿದೆ. ₹ 2 ಲಕ್ಷ ಖರ್ಚು ತೆಗೆದರೂ ನಿವ್ವಳ ₹10 ಲಕ್ಷ ಬಂದಿದೆ .ಇತರೆ ಬೆಳೆಗಳ ಆದಾಯ ₹4 ಲಕ್ಷ, ಕುರಿಸಾಕಣೆಯಿಂದ ₹2 ಲಕ್ಷ . ಒಟ್ಟು ವಾರ್ಷಿಕ ₹16 ಲಕ್ಷ  ಲಾಭ ಪಡೆಯುತ್ತೇನೆ ಎಂದು ಅವರು ತಿಳಿಸಿದರು.

 ರೈತ ಬಸವರಾಜ ಹಿರೇಕುರಬರ 
ವೀಳ್ಯದೆಲೆ ಬೆಳೆಯಿಂದ ಉತ್ತಮ ಆದಾಯ ಪಡೆಯುತ್ತಿದ್ದೇನೆ. ಸುತ್ತಲಿನ ರೈತರು ಹೊಲಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ
ಬಸವರಾಜ ಹಿರೇಕುರಬರ ಪ್ರಗತಿಪರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.