ADVERTISEMENT

ತಾಂಬಾ | ಬರಡು ಭೂಮಿಯಲ್ಲಿ ಬದುಕು ನೀಡಿದ ದ್ರಾಕ್ಷಿ

ಬನ್ನಿಹಟ್ಟಿ ಗ್ರಾಮದಲ್ಲಿ ದ್ರಾಕ್ಷಿ ಬೆಳಗಾರರಿಗೆ ಮಾಹಿತಿ ನೀಡುವ ರೈತ ವೆಂಕಟರಾವ್

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 5:06 IST
Last Updated 16 ಫೆಬ್ರುವರಿ 2024, 5:06 IST
ತಾಂಬಾ ಸಮೀಪದ ಬನ್ನಿಹಟ್ಟಿ ಗ್ರಾಮದ ರೈತ ವೆಂಕಟರಾವ ಪಾಟೀಲ ಅವರ ಹೊಲದಲ್ಲಿ ಬೆಳೆದಿರುವ ದ್ರಾಕ್ಷಿ ಬೆಳೆ
ತಾಂಬಾ ಸಮೀಪದ ಬನ್ನಿಹಟ್ಟಿ ಗ್ರಾಮದ ರೈತ ವೆಂಕಟರಾವ ಪಾಟೀಲ ಅವರ ಹೊಲದಲ್ಲಿ ಬೆಳೆದಿರುವ ದ್ರಾಕ್ಷಿ ಬೆಳೆ   

ತಾಂಬಾ: ಮಳೆರಾಯನ ಮುನಿಸಿನಿಂದ ವಿಜಯಪುರ ಜಿಲ್ಲೆ ಬರಗಾಲದಿಂದ ಬಳಲುತ್ತಿದೆ. ರೈತರು ತಲೆ ಮೇಲೆ ಕೈ ಹೊತ್ತು ಕುಳಿತಿರುವ ಈ ಸಂದರ್ಭದಲ್ಲಿ ಬರಗಾಲದ ಬವಣೆಯ ನಡುವೆಯೂ ಕಳೆದ ಹಲವು ವರ್ಷಗಳಿಂದ ಬರಡು ಭೂಮಿಯಲ್ಲಿಯೇ ದ್ರಾಕ್ಷಿ ಬೆಳೆಯುವುದರ ಮೂಲಕ ತಾಂಬಾ ಸಮೀಪದ ಬನ್ನಿಹಟ್ಟಿ ಗ್ರಾಮದ ರೈತ ವೆಂಕಟರಾವ ಪಾಟೀಲ ಮಾದರಿಯಾಗಿದ್ದಾರೆ.

2014ರಲ್ಲಿ 8 ಎಕರೆ ದ್ರಾಕ್ಷಿಯ ಹೊಸ ಬೆಳೆ ತಯಾರಿ ಮಾಡಲು ಅಂದಾಜು 28 ರಿಂದ 30 ಲಕ್ಷ ಖರ್ಚು ಮಾಡಿ ಅದೇ ವರ್ಷ 35 ಲಕ್ಷ ಭರಪೂರ ಲಾಭ ಪಡೆದರು. ನಂತರದ ವರ್ಷಗಳಲ್ಲಿ ಖರ್ಚು ಕಡಿಮೆಯಾಗಿ, ಇಳುವರಿ ಹೆಚ್ಚಿದಂತೆ ಹಾಕಿದ ಬಂಡವಾಳ ಕೈ ಸೇರಿ, ಪ್ರತಿ ವರ್ಷ ಲಾಭ ಹೆಚ್ಚುತ್ತಲೆ ಸಾಗುತ್ತಿದ್ದು, ಈ ಸಾಲಿನಲ್ಲಿ ₹40 ಲಕ್ಷಕ್ಕೂ ಹಚ್ಚು ಲಾಭ ಬರುತ್ತದೆ ಎಂದು ವಿಶ್ವಾಸ ಅವರದ್ದು. 

ಮೆಕ್ಕೆಜೋಳ, ಕರಿಬೇವು, ನವಣಿ, ಪಪ್ಪಾಯಿ, ಚಿಕ್ಕು, ಪೇರಲ, ಮಾವು, ಸೇರಿದಂತೆ ಅನೇಕ ಬಗೆಯ ಬೆಳೆಗಳನ್ನು ಬೆಳೆಯುತ್ತಾರೆ. ಅಷ್ಟೇ ಅಲ್ಲ ಎಲ್ಲ; ಬಗೆಯ ತರಕಾರಿಗಳು, ಕಬ್ಬು, ಗೋಧಿ, ಸಿರಿಧಾನ್ಯ, ಜೋಳ, ಗೋವಿನಜೋಳ, ಕಡಲೆ, ಹೀಗೆ ಆಧುನಿಕ ಹಾಗೂ ಸಾಂಪ್ರಾದಾಯಿಕ ಬೆಳೆಗಳನ್ನು ಬೆಳೆಯುವ ಮೂಲಕ ಕೃಷಿಯಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ.

ADVERTISEMENT

ಸುತ್ತಲಿನ ಅನೇಕ ರೈತರಿಗೆ ವೆಂಕಟರಾವ ಪಾಟೀಲ ಮಾದರಿಯಾಗಿದ್ದಾರೆ. ತಿಕೋಟ, ಬಾಬಾನಗರ, ಬಿಜ್ಜರಗಿ, ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ದ್ರಾಕ್ಷಿ ಬೆಳೆಯನ್ನು ಬನ್ನಿಹಟ್ಟಿ ಭಾಗದಲ್ಲಿಯೂ ಬೆಳೆಯಬಹುದು ಎಂದು ಗ್ರಾಮದಲ್ಲಿ 2014ರಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾಕ್ಷಿ ಬೆಳೆ ಆರಂಭಿಸಿ ಬಂಗಾರದಂತ ಬದುಕು ನಡೆಸುತ್ತಿದ್ದಾರೆ. ಹೀಗಾಗಿ ಈ ಭಾಗದ ರೈತರಿಗೆ ಮಾದರಿಯಾಗಿದ್ದಾರೆ.

ದ್ರಾಕ್ಷಿ ಬೆಳೆಯುವ ರೀತಿ, ಅಳವಡಿಸಿಕೊಳ್ಳುವ ವಿವಿಧ ಹಂತಗಳು, ಉಪಯೋಗಿಸುವ ಗೊಬ್ಬರ, ರಾಸಾಯನಿಕ ಸೇರಿದಂತೆ ಸಮಗ್ರ ಎಲ್ಲ ರೀತಿಯ ಮಾಹಿತಿಯನ್ನು ರೈತ ಸಮುದಾಯಕ್ಕೆ ನೀಡುವ ಕೆಲಸ ಮಾಡುತ್ತಿದ್ದಾರೆ. ದ್ರಾಕ್ಷಿ ಕೃಷಿಗೆ ಶರಣಗೌಡ ಹಟ್ಟಿ 5 ಎಕರೆ, ಸಂತೋಷ ಮಂಗಳೂರ 3 ಎಕರೆ, ರಾಮಪ್ಪ ಚನ್ನಣವರ 8 ಎಕರೆ, ಜಗ್ಗು ಹಟ್ಟಿ 4 ಎಕರೆ, ಧ್ಯಾವಪ್ಪ ಪೂಜಾರಿ 4 ಎಕರೆ ಬೆಳೆಯುವಂತೆ ಮಾಡಿದ್ದಾರೆ.

ವಿಜಯಪುರ ಬರಗಾಲದ ಬವಣೆಯಿಂದ ಬಳಲುತ್ತಿದ್ದು, ಕುಡಿವ ನೀರಿಗೂ ತೊಂದರೆ ಇರುವಾಗ ಬನ್ನಿಹಟ್ಟಿ ಗ್ರಾಮದಲ್ಲಿ ದ್ರಾಕ್ಷಿ ಬೆಳೆ ಬೆಳೆದು ಯಶಸ್ವಿಯಾಗಿದ್ದೇನೆ. ₹8 ಲಕ್ಷ ವೆಚ್ಚದಲ್ಲಿ ದ್ರಾಕ್ಷಿಯನ್ನು ಒಣದ್ರಾಕ್ಷಿಯಾಗಿಸಲು ವಿಶಾಲವಾದ ಶೆಡ್ ನಿರ್ಮಿಣ ಮಾಡಿದ್ದೇನೆ. ₹4ಲಕ್ಷ ವೆಚ್ಚದ ಔಷಧ ಸಿಂಪಡಿಸುವ ಯಂತ್ರವೂ ಖರೀದಿಸಿದ್ದೇನೆ. ಪ್ರತಿನಿತ್ಯ 5 ರಿಂದ 10 ಜನರು ಕೆಲಸ ಮಾಡುತ್ತಾರೆ ಎನ್ನುತ್ತಾರೆ ರೈತ ವೆಂಕಟರಾವ ಪಾಟೀಲ.

ವೆಂಕಟರಾವ ಪಾಟೀಲ

8 ಎಕರೆಯಲ್ಲಿ ದ್ರಾಕ್ಷಿಯ ಬೆಳೆದು ಸಾಧನೆ ದ್ರಾಕ್ಷಿ, ಒಣದ್ರಾಕ್ಷಿಯಿಂದ ವಾರ್ಷಿಕ ₹40 ಲಕ್ಷ ಲಾಭ ಆಧುನಿಕ, ಸಾಂಪ್ರಾದಾಯಿಕ ಬೆಳೆಯಲ್ಲೂ ಯಶಸ್ವಿ

ಪ್ರತಿ ವರ್ಷ ದ್ರಾಕ್ಷಿ ಹಾಗೂ ಒಣದ್ರಾಕ್ಷಿಯಿಂದ ₹30 ರಿಂದ ₹40 ಲಕ್ಷದವರೆಗೆ ಲಾಭ ಬರುತ್ತದೆ. ನಮ್ಮ ಬದುಕಿಗೆ ದ್ರಾಕ್ಷಿ ಒಂದು ಆಧಾರವಾಗಿದೆ. ವೆಂಕಟರಾವ ಪಾಟೀಲ ಬನ್ನಿಹಟ್ಟಿ ಗ್ರಾಮದ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.