ಕಲಕೇರಿ(ವಿಜಯಪುರ ಜಿಲ್ಲೆ): ಮಳೆಗೆ ಪ್ರಾರ್ಥಿಸಿ ಕತ್ತೆ ಮದುವೆ, ಕಪ್ಪೆ ಮದುವೆ, ದೇವರಿಗೆ ನೀರುಣಿಸುವುದು, ಗುರ್ಜಿ ಪೂಜೆ, ಸಪ್ತ ಭಜನೆ ಸೇರಿದಂತೆ ವಿವಿಧ ರೀತಿಯ ಜಾನಪದ ಆಚರಣೆ, ಸಂಪ್ರದಾಯ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಕಾಣಬಹುದು. ಆದರೆ, ಕಲಕೇರಿ ಗ್ರಾಮದ ಸಶ್ಮಾನದಲ್ಲಿ ಹೂತಿರುವ ಸುಮಾರು 50 ಶವಗಳ ಬಾಯಿಗೆ ನೀರುಣಿಸಿ ಮಳೆಗಾಗಿ ಪ್ರಾರ್ಥಿಸಿರುವ ವಿಚಿತ್ರ ಆಚರಣೆ ಭಾನುವಾರ ನಡೆದಿದೆ.
ಜೂನ್ ಮುಗಿಯುತ್ತಾ ಬಂದರೂ ಮಳೆಯಾಗದೇ ಬರದ ಛಾಯೆ ಆವರಿಸಿರುವುದರಿಂದ ಕಂಗಲಾದ ಕಲಕೇರಿ ಜನರು ಹಿರೇಮಠದ ವೇದಮೂರ್ತಿ ವಾಗೀಶ ಸ್ವಾಮಿಗಳ ನೇತೃತ್ವದಲ್ಲಿ, ಗ್ರಾಮದ ಹಿಂದೂ ಸಶ್ಮಾನದಲ್ಲಿ ಕಳೆದ ಐದಾರು ತಿಂಗಳ ಈಚೆಗೆ ಹೂತಿರುವ ಶವಗಳಿಗೆ ಕೊಳವೆ ಮೂಲಕ ನೀರುಣಿಸಿದರು.
ನೀರು ತುಂಬಿದ ಟ್ಯಾಂಕರ್‌ನೊಂದಿಗೆ ಸ್ಮಶಾನಕ್ಕೆ ತೆರಳಿದ ಗ್ರಾಮಸ್ಥರು ಸಮಾಧಿಗಳನ್ನು ಅಗೆದು ಕೊಳವೆ ಮೂಲಕ ಶವಗಳ ಬಾಯಿಗೆ ನೀರುಣಿಸಿ, ಮಳೆಗಾಗಿ ಪ್ರಾರ್ಥಿಸಿದರು. ಕಾಕತಾಳಿಯ ಎಂಬಂತೆ 20 ನಿಮಿಷಗಳ ಬಳಿಕ ಗ್ರಾಮದಲ್ಲಿ ಧಾರಾಕಾರ ಮಳೆಯಾಯಿತು.
‘ಮನುಷ್ಯರು ಸಾಯುವಾಗ ಬಾಯಿ ತೆರೆದುಕೊಂಡು ಸತ್ತಿದ್ದರೆ ಮಳೆ ಆಗುವುದಿಲ್ಲ ಎಂಬುದು ನಮ್ಮ ಹಿರಿಯರ ನಂಬಿಕೆ. ಅಂತಹ ಶವಗಳಿಗೆ ಪೂಜೆ ಸಲ್ಲಿಸಿ, ನೀರುಣಿಸಿದರೆ ಮಳೆ ಬರುತ್ತದೆ ಎಂಬ ನಂಬಿಕೆಯಿಂದ ಮಾಡಿದ್ದೇವೆ’ ಎಂದು ಹಿರೇಮಠದ ವೇ.ಮೂ.ವಾಗೀಶ ಸ್ವಾಮಿ ಹೇಳಿದರು.
‘ನಿನ್ನೆ ಗ್ರಾಮದ ಹಣಮಂತ ದೇವರಿಗೆ 1001 ಕೊಡ ನೀರು ಹಾಕಿ ಮಳೆಗಾಗಿ ಪ್ರಾರ್ಥಿಸಿದ್ದೆವು. ಇಂದು ಶವಗಳ ಬಾಯಿಗೆ ನೀರುಣಸಿದೆವು. ಮಳೆ ಬರುತ್ತದೆ ಎನ್ನುವ ನಂಬಿಕೆಯಿಂದ ಮಾಡಿದ್ದೇವೆ, ಕಳೆದ ವರ್ಷವೂ ಇದೇ ರೀತಿ ಮಾಡಿದ್ದೆವು. ಅವತ್ತು ರಾತ್ರಿನೇ ಜೋರಾಗಿ ಮಳೆ ಬಂದಿತ್ತು, ಇಂದು ಸಹ ಮಳೆ ಬಂದಿದೆ. ಹೇಗಾದರೂ ಆಗಲಿ ಮಳೆ ಬಂದು ಒಳ್ಳೆಯ ಬೆಳೆ ಬೆಳೆದರು ನಾಡು ಸಮೃದ್ಧವಾಗಿರಬೇಕು’ ಎಂದು ಗ್ರಾಮದ ರೈತ ಸಿದ್ದಲಿಂಗ ಗುಡಗುಂಟಿ ತಿಳಿಸಿದರು.
ಗ್ರಾಮದ ಪ್ರಮುಖರಾದ ಮಡಿವಾಳಯ್ಯ ಲಕ್ಕುಂಡಿಮಠ, ರಾಜಶೇಖರ ಆಲಗೂರ, ಶ್ರೀಶೈಲ ಅಡಕಿ, ಸುದಾಕರ ಕವದಿ, ಸಿದ್ದಲಿಂಗ ಗುಡಗುಂಟಿ, ಬಸಯ್ಯ ಕಪ್ಪಡಿಮಠ, ಬಸವರಾಜ ಗುಮಶೆಟ್ಟಿ, ಮಲ್ಲು ಜಂಬಗಿ, ಮಂಜು ಗುಮಶೆಟ್ಟಿ, ಈರಪ್ಪ ಬೈಚಬಾಳ, ಮಲ್ಲು ದೇಸಾಯಿ, ಮಡೆಪ್ಪ ಗುಮಶೆಟ್ಟಿ, ದೇವಿಂದ್ರ ವಡ್ಡರ, ಮಹಿಬೂಬ ಬಾಷಾ ಮನಗೂಳಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.