ವಿಜಯಪುರ/ಹುಬ್ಬಳ್ಳಿ: ‘ವಕ್ಪ್ ಕಾಯ್ದೆಗೆ ಕೇಂದ್ರ ಸರ್ಕಾರ ಪಾರದರ್ಶಕ ತಿದ್ದುಪಡಿ ತರಲಿದ್ದು, ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡಿಸಲಿದೆ. ಪ್ರಸ್ತುತ ಕಾಯ್ದೆಯಲ್ಲಿನ ತೊಡಕು ನಿವಾರಿಸಲಾಗುವುದು’ ಎಂದು ವಕ್ಫ್ ತಿದ್ದುಪಡಿ ಮಸೂದೆಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷ ಜಗದಂಬಿಕಾ ಪಾಲ್ ತಿಳಿಸಿದರು.
ಹುಬ್ಬಳ್ಳಿ ಮತ್ತು ವಿಜಯಪುರಕ್ಕೆ ಗುರುವಾರ ಭೇಟಿ ನೀಡಿದ ಅವರು, ‘ವಕ್ಫ್‌ನಿಂದ ರೈತರು, ಮಠ, ಮಂದಿರ, ಸ್ಮಾರಕ ಸೇರಿದಂತೆ ಯಾರಿಗೂ ತೊಂದರೆಯಾಗದಂತೆ ಅಗತ್ಯ ತಿದ್ದುಪಡಿ ತರಲು ಜೆಪಿಸಿ ಸಲಹೆ ನೀಡಲಿದೆ’ ಎಂದರು.
‘ರೈತರಿಗೆ ನೋಟಿಸ್ ನೀಡಿದ ಜಿಲ್ಲಾಧಿಕಾರಿ, ಕಂದಾಯ ಇಲಾಖೆ ಅಧಿಕಾರಿ ಮತ್ತು ವಕ್ಫ್ ಮಂಡಳಿ ಅಧಿಕಾರಿಗಳನ್ನು ಅಗತ್ಯವಿದ್ದರೆ ದೆಹಲಿಗೆ ಕರೆಯಿಸಿ, ವಿಚಾರಣೆ ಮಾಡಲಾಗುವುದು. ತೊಂದರೆ ಅನುಭವಿಸಿದ ರೈತರು ಅಲ್ಲದೇ ವಿಜಯಪುರದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಿದವರನ್ನು ದೆಹಲಿಗೆ ಕರೆಯಿಸಿ ಅಹವಾಲು ಆಲಿಸಲಾಗುವುದು’ ಎಂದರು. ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಅನಿರ್ದಿಷ್ಟಾವಧಿ ಧರಣಿ ಅಂತ್ಯಗೊಳಿಸಿದರು.
ಇದಕ್ಕೂ ಮುನ್ನ ಜಗದಂಬಿಕಾ ಪಾಲ್ ಅವರು ಹುಬ್ಬಳ್ಳಿಯಲ್ಲಿ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ರೈತರು, ಬಿಜೆಪಿ ಮುಖಂಡರು ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳಿಂದ 75ಕ್ಕೂ ಹೆಚ್ಚು ಅಹವಾಲುಗಳನ್ನು ಆಲಿಸಿದರು. ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ರೈತರ ಸಂಕಷ್ಟ ಆಲಿಸಲು ಬಿಜೆಪಿ ರಚಿಸಿದ್ದ ಸತ್ಯಶೋಧನಾ ಸಮಿತಿಯ ಅಧ್ಯಕ್ಷ ಗೋವಿಂದ ಕಾರಜೋಳ ತಮ್ಮ ವರದಿಯ ಪ್ರತಿಯನ್ನು ಸಮಿತಿಗೆ ನೀಡಿದರು.
ಈ ಸಂದರ್ಭದಲ್ಲಿ ಜಗದಂಬಿಕಾ ಪಾಲ್ ಮಾತನಾಡಿ, ‘ಕರ್ನಾಟಕದಲ್ಲಿ ರೈತರ ಜಮೀನು, ದೇವಸ್ಥಾನ, ಮಠಗಳ ಜಮೀನು ತನ್ನದೆಂದು ವಕ್ಫ್ ಮಂಡಳಿ ಹೇಳಿಕೊಳ್ಳುತ್ತಿದೆ. ಅಷ್ಟೇ ಅಲ್ಲದೇ, ಆರ್‌ಟಿಸಿ ಪಹಣಿ ದಾಖಲೆ ಪತ್ರಗಳಲ್ಲಿಯೂ ವಕ್ಫ್ ಆಸ್ತಿ ಎಂದು ನಮೂದಿಸುತ್ತಿದೆ. ಅಧಿಕಾರಿಗಳ ಸಹಕಾರ ಇಲ್ಲದೇ ಇದಾಗಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.
‘ವಕ್ಫ್ ಮಂಡಳಿ ನೀಡಿದ ನೋಟಿಸ್ ಹಿಂಪಡೆಯಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಆದರೆ, ದಾಖಲೆಗಳಲ್ಲಿ ಆದ ತಿದ್ದುಪಡಿ ಸರಿಪಡಿಸಲು ಏನು ಮಾಡುತ್ತಿದೆ? ಇದಕ್ಕೆ ಯಾರು ಜವಾಬ್ದಾರಿ? ಬೀದರ್, ವಿಜಯಪುರ, ಗುಲ್ಬರ್ಗ ಸೇರಿದಂತೆ ವಿವಿಧೆಡೆಯಿಂದ ಇಂತಹ ಹಲವು ದೂರುಗಳು ಕೇಳಿಬಂದಿವೆ’ ಎಂದರು.
‘15 ಸಾವಿರ ಎಕರೆಯಷ್ಟು ದೊಡ್ಡ ಪ್ರಮಾಣದಲ್ಲಿ ಆಸ್ತಿ ಹೇಗೆ ವಕ್ಫ್‌ಗೆ ಸೇರುತ್ತದೆ? ದೇವಾಲಯ ಇರಲಿ, ಮಠಗಳ ಆಸ್ತಿ ಏನಾಗಬಹುದು. 1920, 1930ರಿಂದ ವ್ಯವಸಾಯ ಮಾಡುತ್ತಿದ್ದ ಜಮೀನು ಅದ್ಹೇಗೆ ವಕ್ಫ್ ಆಸ್ತಿ ಆಗಿದೆ? ಇದು ಆತಂಕದ ವಿಷಯವಾಗಿದೆ. ಈ ವಿಷಯಗಳನ್ನು ಜೆಪಿಸಿ ಖಂಡಿತವಾಗಿ ಪರಿಶೀಲಿಸಲಿದೆ. ವರದಿಯಲ್ಲಿ ಪ್ರಸ್ತಾಪಿಸುತ್ತೇನೆ’ ಎಂದರು.
ಕೇಂದ್ರ ಸಚಿವ ವಿ. ಸೋಮಣ್ಣ, ಸಂಸದರಾದ ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಶಾಸಕರಾದ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಸಂಸದ ಪ್ರತಾಪ್ ಸಿಂಹ ಇದ್ದರು.
ಧಾರವಾಡ ಜಿಲ್ಲೆಯಲ್ಲಿ ರೈತರಿಗೆ ನೋಟಿಸ್‌ನ್ನು ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಇದ್ದ ಸಂದರ್ಭದಲ್ಲಿ ನೀಡಲಾಗಿತ್ತು. ಬೇಕಿದ್ದರೆ ಜಿಲ್ಲಾಧಿಕಾರಿ ಅವರನ್ನು ಕೇಳಿನೋಡಿ.ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ
ಕೇಂದ್ರ ಸರ್ಕಾರವು ವಕ್ಫ್ ಆಸ್ತಿಯನ್ನು ಸಂಪೂರ್ಣ ವಶಕ್ಕೆ ಪಡೆದು ಕೇಂದ್ರ ಸರ್ಕಾರದ ಆಸ್ತಿ ಎಂದು ಘೋಷಿಸಬೇಕು. ರಾಷ್ಟ್ರೀಕರಣ ಮಾಡಬೇಕು.ಬಸನಗೌಡ ಪಾಟೀಲ ಯತ್ನಾಳ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.