ADVERTISEMENT

ಹೋಂ ಕ್ವಾರಂಟೈನ್ ಉಲ್ಲಂಘಿಸಿದರೆ ಕ್ರಮ: ಜಿಲ್ಲಾಧಿಕಾರಿ ಸುನೀಲ್‌ ಕುಮಾರ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 13:06 IST
Last Updated 8 ಆಗಸ್ಟ್ 2020, 13:06 IST
ಸಿಂದಗಿ ಪಟ್ಟಣದ ಗೋಲಗೇರಿ ರಸ್ತೆಯಲ್ಲಿರುವ ಕೋವಿಡ್ ಕೇರ್ ಸೆಂಟರ್‌ಗೆ ಶನಿವಾರ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌ ಭೇಟಿ ನೀಡಿ ಪಾಸಿಟಿವ್ ರೋಗಿಗಳ ಯೋಗಕ್ಷೇಮ ವಿಚಾರಿಸಿದರು 
ಸಿಂದಗಿ ಪಟ್ಟಣದ ಗೋಲಗೇರಿ ರಸ್ತೆಯಲ್ಲಿರುವ ಕೋವಿಡ್ ಕೇರ್ ಸೆಂಟರ್‌ಗೆ ಶನಿವಾರ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌ ಭೇಟಿ ನೀಡಿ ಪಾಸಿಟಿವ್ ರೋಗಿಗಳ ಯೋಗಕ್ಷೇಮ ವಿಚಾರಿಸಿದರು    

ವಿಜಯಪುರ:ಜಿಲ್ಲೆಯಲ್ಲಿ ಕೋವಿಡ್-19 ಪರಿಣಾಮಕಾರಿಯಾಗಿನಿಯಂತ್ರಿಸುವ ಸಂಬಂಧ ಹೋಂ ಕ್ವಾರಂಟೈನ್ ಹಾಗೂ ಹೋಂ ಐಸೊಲೇಷನ್ ನಿಯಮಗಳನ್ನು ಉಲ್ಲಂಘಿಸದಂತೆ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂಡಿ ಉಪವಿಭಾಗದ ತಹಶೀಲ್ದಾರ್‌, ತಾಲ್ಲೂ ಆರೋಗ್ಯಾಧಿಕಾರಿಗಳು, ಪುರಸಭೆ ಮುಖ್ಯಾಧಿಕಾರಿಗಳೊಂದಿಗೆ ಕೋವಿಡ್-19 ನಿಯಂತ್ರಣ ಕುರಿತಂತೆ ನಡೆದಸಭೆಯಲ್ಲಿ ಅವರು ಮಾತನಾಡಿದರು.

ಹೋಂ ಕ್ವಾರಂಟೈನ್ ಮತ್ತು ಹೋಂ ಐಸೊಲೇಷನ್ ನಿಯಮಗಳು ಉಲ್ಲಂಘನೆಯಾದರೆ ತಕ್ಷಣ ಪ್ರಕರಣ ದಾಖಲಿಸುವಂತೆ ಅವರು ಸೂಚನೆ ನೀಡಿದರು.

ADVERTISEMENT

ಕೋವಿಡ್‌ ನಿಯಂತ್ರಿಸಲು ಹೆಚ್ಚು ಹೆಚ್ಚು ಗಂಟಲುದ್ರವ ಸಂಗ್ರಹ ಮಾಡಲು ಕ್ರಮಕೈಗೊಳ್ಳಬೇಕು. ಕೋವಿಡ್ ಸೋಂಕಿತರೊಂದಿಗೆ ಸಂಪರ್ಕಗಳನ್ನು ಪರಿಣಾಮಕಾರಿಯಾಗಿ ಪತ್ತೆ ಹಚ್ಚಬೇಕು. ಹೋಂ ಕ್ವಾರಂಟೈನ್ ವಾಚ್ ಹಾಗೂ ಕಾಂಟ್ಯಾಕ್ಟ್ ಟ್ರೇಸಿಂಗ್ ಆ್ಯಪ್‌ಗಳನ್ನು ಸಮರ್ಪಕವಾಗಿ ಬಳಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ಮುಂಬರುವ ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸಲು ನಿಷೇಧವಿದ್ದು, ಸಾರ್ವಜನಿಕರು ಶ್ರೀ ಗಣೇಶ ಮೂರ್ತಿಯನ್ನು ಮನೆಯಲ್ಲೇ ಶ್ರದ್ಧಾಭಕ್ತಿಯೊಂದಿಗೆ ಪ್ರತಿಷ್ಠಾಪಿಸಿ ಅವಶ್ಯಕ ಮುನ್ನೆಚ್ಚರಿಕೆ ಮತ್ತು ಮುಂಜಾಗ್ರತೆಗಳೊಂದಿಗೆ ವಿಸರ್ಜನೆಯಾಗುವಂತೆ ನೋಡಿಕೊಳ್ಳಬೇಕು ಎಂದರು.

ಸಭೆಗೂ ಮುನ್ನಾ ಸಿಂದಗಿ ಗೋಲಗೇರಿ ರಸ್ತೆಯಲ್ಲಿರುವ ಕೋವಿಡ್ ಕೇರ್ ಸೆಂಟರ್‌ಗಳಿಗೆ ಭೇಟಿ ನೀಡಿ ಪಾಸಿಟಿವ್ ರೋಗಿಗಳ ಆರೋಗ್ಯ ಮತ್ತು ಯೋಗಕ್ಷೇಮ ವಿಚಾರಿಸಿದರು. ಇದೇ ಸಂದರ್ಭದಲ್ಲಿ ಕೋವಿಡ್ ಕೇರ್ ಸೆಂಟರ್‌ಗಳಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.

ಈವರೆಗೆ ಗೋಲಗೇರಿ ರಸ್ತೆಯಲ್ಲಿರುವ ಕೋವಿಡ್ ಕೇರ್ಸೆಂಟರ್‌ನಿಂದ 165 ಜನ ಸೋಂಕಿತರು ಗುಣಮುಖರಾಗಿ ಮನೆಗೆ ಮರಳಿರುವ ಬಗ್ಗೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆರ್.ಎಸ್.ಇಂಗಳೆ ತಿಳಿಸಿದರು.

ಸಭೆಯಲ್ಲಿ ತಾಲ್ಲೂಕು ಪ್ರಗತಿ ಪರಿಶೀಲನೆ ಮತ್ತು ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಉಪವಿಭಾಗಾಧಿಕಾರಿ ಸ್ನೇಹಲ್ ಲೋಖಂಡೆ, ಕಂದಾಯ ಇಲಾಖೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.