ADVERTISEMENT

ದೇವರಹಿಪ್ಪರಗಿ | ಆಧಾರ್‌ ತಿದ್ದುಪಡಿಗಾಗಿ ಬೇಕಾಬಿಟ್ಟಿ ಹಣ ವಸೂಲಿ

₹ 200 ರಿಂದ ₹ 5000ಗಳವರೆಗೆ ಶುಲ್ಕ: ಸಾರ್ವಜನಿಕರ ಆರೋಪ

ಅಮರನಾಥ ಹಿರೇಮಠ
Published 3 ಜುಲೈ 2024, 5:45 IST
Last Updated 3 ಜುಲೈ 2024, 5:45 IST
ದೇವರಹಿಪ್ಪರಗಿ ಬಿಎಸ್ಎನ್ಎಲ್ ಕಚೇರಿ ಆವರಣದಲ್ಲಿ ಇರುವ ಆಧಾರ ಕೇಂದ್ರದ ಮುಂದೆ ನೋಂದಣಿ, ನವೀಕರಣ, ಮಾರ್ಪಾಡುಗಳಿಗಾಗಿ ಸೇರಿರುವ ಜನತೆ.
ದೇವರಹಿಪ್ಪರಗಿ ಬಿಎಸ್ಎನ್ಎಲ್ ಕಚೇರಿ ಆವರಣದಲ್ಲಿ ಇರುವ ಆಧಾರ ಕೇಂದ್ರದ ಮುಂದೆ ನೋಂದಣಿ, ನವೀಕರಣ, ಮಾರ್ಪಾಡುಗಳಿಗಾಗಿ ಸೇರಿರುವ ಜನತೆ.   

ದೇವರಹಿಪ್ಪರಗಿ: ಆಧಾರ ಕಾರ್ಡ್‌ನ ನೋಂದಣಿ, ನವೀಕರಣ, ಮಾರ್ಪಾಡಿಗೆ ಸಂಬಂಧಿಸಿ ಸರ್ಕಾರ ಸಾಕಷ್ಟು ಸೌಲಭ್ಯ ನೀಡಿದ್ದರೂ ಆಧಾರ ಕೇಂದ್ರಗಳ ಸ್ಥಳೀಯ ಸಿಬ್ಬಂದಿ ಸಾರ್ವಜನಿಕರಿಂದ ₹ 200 ರಿಂದ ₹ 5000ಗಳವರೆಗೆ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದಾರೆ’ ಎಂದು ವಿವಿಧ ಗ್ರಾಮಗಳ ಜನತೆ ದೂರಿದ್ದಾರೆ.

ಪಟ್ಟಣದಲ್ಲಿ ಆಧಾರ ಕಾರ್ಡ್‌ ಸೇವೆಗಳಿಗಾಗಿ ಸರ್ಕಾರ ಒಟ್ಟು ಮೂರು ಕೇಂದ್ರಗಳನ್ನು ತೆರೆದಿದೆ. ಇವು ಕ್ರಮವಾಗಿ ಬಿಎಸ್ಎನ್ಎಲ್ ಕಚೇರಿ ಆವರಣ, ನಾಡಕಚೇರಿ ಕೇಂದ್ರ, ಎಸ್‌ಬಿಐ ಬ್ಯಾಂಕ್ ಹತ್ತಿರದ ಗ್ರಾಹಕ ಸೇವಾ ಕೇಂದ್ರಗಳಲ್ಲಿ ಟೆಂಡರ್ ಪಡೆದ ಖಾಸಗಿ ವ್ಯಕ್ತಿಗಳಿಂದ ನಿರ್ವಹಿಸಲ್ಪಡುತ್ತಿವೆ.

ಇಲ್ಲಿ ಹೊಸ ಆಧಾರ ನೋಂದಣಿ, ಕಡ್ಡಾಯ ಬಯೊಮೆಟ್ರಿಕ್ ನವೀಕರಣ, ಬಯೊಮೆಟ್ರಿಕ್ ತಿದ್ದುಪಡಿ, ದಾಖಲೆ ತಿದ್ದುಪಡಿ, ಡೆಮೊಗ್ರಾಫಿಕ್ ತಿದ್ದುಪಡಿ, ಇ-ಆಧಾರ್‌ ಡೌನ್‌ಲೋಡ್ ಮತ್ತು ವರ್ಣಮುದ್ರಣ ಸೇವೆಗಳು ಲಭ್ಯವಿವೆ. ಈ ಎಲ್ಲ ಸೇವೆಗಳಲ್ಲಿ ಹೊಸ ಆಧಾರ ನೋಂದಣಿ ಹಾಗೂ ಕಡ್ಡಾಯ ಬಯೊಮೆಟ್ರಿಕ್ ನವೀಕರಣ ಉಚಿತವಾಗಿದೆ. ಬಯೊಮೆಟ್ರಿಕ್‌ ತಿದ್ದುಪಡಿಗಾಗಿ ₹ 100, ಡಾಕ್ಯುಮೆಂಟ್ ಹಾಗೂ ಡೆಮೊಗ್ರಾಫಿಕ್‌ ತಿದ್ದುಪಡಿಗೆ ₹ 50 ಶುಲ್ಕವಿದೆ. ಇ-ಆಧಾರ ಡೌನಲೋಡ್ ಮತ್ತು ವರ್ಣಮುದ್ರಣಕ್ಕೆ ₹ 30 ದರ ನಿಗದಿಪಡಿಸಲಾಗಿದೆ. ಆದರೆ ಸ್ಥಳೀಯ ಸಿಬ್ಬಂದಿ ಈ ಎಲ್ಲವುಗಳಿಗೆ ₹ 200 ರಿಂದ ₹ 500ರವರೆಗೆ ಹಣ ಪಡೆಯುತ್ತಿದ್ದಾರೆ.

ADVERTISEMENT

ಕೆಲವು ವಿವಾಹವಾದ ಮಹಿಳೆಯರ ಆಧಾರ ವಿಳಾಸ ಬದಲಾವಣೆಗೆ ₹ 5000ವರೆಗೂ ಹಣ ಪಡೆದಿದ್ದಾರೆ. ಇದು ಕೇವಲ ಒಂದೆರಡು ದಿನಗಳ ವಿಷಯವಲ್ಲ. ಕಳೆದ ಹಲವು ದಿನಗಳಿಂದ ಪ್ರತಿದಿನ 80 ರಿಂದ 100 ಜನರಿಗೆ ಸೇವೆ ನೀಡುವ ನೆಪದಲ್ಲಿ ಮುಗ್ಧ ಗ್ರಾಮಸ್ಥರಿಂದ ಹಣ ದೋಚಲಾಗುತ್ತಿದೆ’ ಎನ್ನುತ್ತಾರೆ ಹಡಗಲಿ ತಾಂಡಾದ ದಿನೇಶ ರಾಠೋಡ.

ಶಿವಣಗಿ ಗ್ರಾಮದ ಜಯಶ್ರೀ ಪವಾರ ಹಾಗೂ ಮಗು ಮಯೂರ ಪವಾರ ಬಯೊಮೆಟ್ರಿಕ್ ತಿದ್ದುಪಡಿಗಾಗಿ ₹ 450, ಹಡಗಲಿ ಗ್ರಾಮದ ಶೈಲಾ ಸಿಂದಗಿ ಮೊಬೈಲ್ ಸಂಖ್ಯೆ ಬದಲಾವಣೆಗೆ ₹ 220, ಬಮ್ಮನಜೋಗಿ ಗ್ರಾಮದ ಮಗು ಶ್ರೀಮಂತ ರಾಠೋಡ ಆಧಾರ ನೋಂದಣಿಗಾಗಿ ₹ 250 ನೀಡಿದ ಬಗ್ಗೆ ದೂರಿದ್ದಾರೆ.

ಆಧಾರ ಕೇಂದ್ರಗಳಲ್ಲಿ ಹೆಚ್ಚು ಶುಲ್ಕ ಪಡೆಯುತ್ತಿರುವ ಕುರಿತು ಆಧಾರ ದೂರು ದಾಖಲು ಕೇಂದ್ರ 1947ಗೆ ದೂರು ಸಲ್ಲಿಸಿದರೆ, ‘ನಿಮ್ಮ ದೂರಿಗೆ ಒಂದು ತಿಂಗಳಲ್ಲಿ ಪ್ರತಿಕ್ರಿಯಿಸಲಾಗುವುದು ಎಂದು ಗ್ರಾಹಕ ಕೇಂದ್ರದ ಪ್ರತಿನಿಧಿಗಳು ಉತ್ತರಿಸುತ್ತಾರೆ. ಹಾಗಾದರೆ ಇಂತಹ ಸಿಬ್ಬಂದಿ ಕುರಿತು ಕ್ರಮ ಕೈಗೊಳ್ಳಲು ಒಂದು ತಿಂಗಳು ಬೇಕೆ?’ ಎಂದು ಪ್ರಶ್ನಿಸುತ್ತಾರೆ ಬಯೊಮೆಟ್ರಿಕ್ ತಿದ್ದುಪಡಿಗಾಗಿ ₹ 300 ನೀಡಿದ ಇಂಗಳಗಿ ಗ್ರಾಮದ ಶಿವಮ್ಮ ಗೋಡ್ಯಾಳ ಹಾಗೂ ನೀರಲಗಿ ಗ್ರಾಮದ ನೀಲಮ್ಮ ಮಂಗಳೂರ.

ಆಧಾರ ಕೇಂದ್ರಕ್ಕೆ ನಾನೇ ಖುದ್ದಾಗಿ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಯನ್ನು ಪರಿಶೀಲಿಸುತ್ತೇನೆ

- ಪ್ರಕಾಶ ಸಿಂದಗಿ ತಹಶೀಲ್ದಾರ್‌ ದೇವರಹಿಪ್ಪರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.