ವಿಜಯಪುರ: ‘ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಸಾಧನೆ ಶೂನ್ಯ. ದಶಕದ ಅವಧಿ ಸಂಸತ್ತಿನಲ್ಲಿ ವಿಜಯಪುರ ಪ್ರತಿನಿಧಿಸಿದರೂ ಒಂದೇ ಒಂದು ಪ್ರಶ್ನೆ ಕೇಳಿಲ್ಲ. ಜನರ ಸಮಸ್ಯೆಗೆ ಸ್ಪಂದಿಸಲಿಲ್ಲ’ ಎಂದು ಕೆಪಿಸಿಸಿ ಸಂಚಾಲಕ ಸುನೀಲ ಉಕ್ಕಲಿ ದೂರಿದರು.
‘ಕಾಕಾ, ಬಾಬಾ, ಅಣ್ಣಾ... ಎಂದೇ ಮಾತನಾಡಿ ಜನರನ್ನು ಮೂರ್ಖರನ್ನಾಗಿಸಿದ್ದಾರೆ. ಸಂವಿಧಾನದತ್ತವಾದ ಅವಕಾಶದಿಂದ ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ರಮೇಶ ಜಿಗಜಿಣಗಿ, ಶೋಷಿತ ವರ್ಗಗಳನ್ನು ಮೇಲಕ್ಕೆ ಕರೆದೊಯ್ಯಬೇಕಿತ್ತು. ಆದರೆ ತಾವೇ ದೇವಾಲಯ ಪ್ರವೇಶಿಸದೆ ಅಸ್ಪೃಶ್ಯತೆಯನ್ನು ಜೀವಂತವಾಗಿಟ್ಟಿದ್ದಾರೆ’ ಎಂದು ಭಾನುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
‘ಈ ಬಾರಿ ಕ್ಷೇತ್ರದಲ್ಲಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸುನೀತಾ ದೇವಾನಂದ ಚವ್ಹಾಣ ಪರ ಅಲೆಯಿದೆ. ಮತದಾರರು ಬೆಂಬಲಿಸಬೇಕಿದೆ’ ಎಂದು ಉಕ್ಕಲಿ ಮನವಿ ಮಾಡಿದರು.
ನಿವೃತ್ತ ಪೊಲೀಸ್ ಅಧಿಕಾರಿ ಸುಭಾಸ ಗುಡಿಮನಿ, ಎಐಸಿಸಿ ಸದಸ್ಯೆ ಶ್ರೀದೇವಿ ಉತ್ಲಾಸರ, ಜೆಡಿಎಸ್ ಎಸ್.ಸಿ. ಘಟಕದ ಜಿಲ್ಲಾ ಅಧ್ಯಕ್ಷ ಸಿದ್ದು ಕಾಮತ, ಕಾಂಗ್ರೆಸ್ ಎಸ್.ಸಿ. ಘಟಕದ ಅಧ್ಯಕ್ಷ ಜವನರ, ಜೆಡಿಎಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಮಹಾದೇವಿ ತಳಕೇರಿ, ಬಿ.ಎಸ್.ಬ್ಯಾಳಿ, ಬಿ.ಎಂ.ಹಳ್ಳದಮನಿ, ವಸಂತ ಹೊನಮೊಡೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಊಟಕ್ಕೆ ಅಪ್ಪುಗೆ ಆಹ್ವಾನ
ಪ್ರಕಾಶ ರಾಠೋಡ ಚುನಾವಣಾ ಸಂದರ್ಭದ ರಾಜಕಾರಣಿ. ಐದು ವರ್ಷಕ್ಕೊಮ್ಮೆ ಬರುತ್ತಾರೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಟೀಕಿಸಿರುವುದಕ್ಕೆ, ವಿಧಾನ ಪರಿಷತ್ ಸದಸ್ಯರ ಬೆಂಬಲಿಗರು ತಿರುಗೇಟು ನೀಡಿದ್ದಾರೆ.
‘ಅಪ್ಪು ಅವರೇ ಪ್ರಕಾಶ ರಾಠೋಡ ವಿಜಯಪುರದಲ್ಲೇ ಮನೆ ಹೊಂದಿದ್ದಾರೆ. ನೀವು ಅವರ ಮನೆಗೆ ಊಟಕ್ಕೆ ಬನ್ನಿ. ಅಲ್ಲಿಯೇ ಜಿಗಜಿಣಗಿ ಸಾಧನೆ ಚರ್ಚಿಸಿ’ ಎಂದು ಅಶೋಕ ರಾಠೋಡ, ಎಂ.ಎಸ್.ನಾಯ್ಕ್, ಮಾದೇವ ರಾಠೋಡ, ಸಂತೋಷ ರಾಠೋಡ ಪತ್ರಿಕಾ ಪ್ರಕಟಣೆ ಮೂಲಕ ಆಹ್ವಾನ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.