ADVERTISEMENT

ಮುದ್ದೇಬಿಹಾಳ: ಅನ್ನದಾತನಿಗೆ ಜೊತೆಗಾರನ ನೆನಪಿಸಿದ ಕೃಷಿ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 9 ಮೇ 2024, 6:23 IST
Last Updated 9 ಮೇ 2024, 6:23 IST
ಮುದ್ದೇಬಿಹಾಳ ತಾಲ್ಲೂಕಿನ ಢವಳಗಿ ಗ್ರಾಮದಲ್ಲಿ ಬುಧವಾರ ನಡೆದ ಜೋಡೆತ್ತಿನ ಕೃಷಿ ಪುನಶ್ಚೇತನ ಸಂಕಲ್ಪ ಸಮ್ಮೇಳನಕ್ಕೆ ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ ಹಾಗೂ ಮಡಿವಾಳಪ್ಪ ಬಿರಾದಾರ ಚಾಲನೆ ನೀಡಿದರು
ಮುದ್ದೇಬಿಹಾಳ ತಾಲ್ಲೂಕಿನ ಢವಳಗಿ ಗ್ರಾಮದಲ್ಲಿ ಬುಧವಾರ ನಡೆದ ಜೋಡೆತ್ತಿನ ಕೃಷಿ ಪುನಶ್ಚೇತನ ಸಂಕಲ್ಪ ಸಮ್ಮೇಳನಕ್ಕೆ ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ ಹಾಗೂ ಮಡಿವಾಳಪ್ಪ ಬಿರಾದಾರ ಚಾಲನೆ ನೀಡಿದರು   

ಮುದ್ದೇಬಿಹಾಳ: ಸಾಮಾನ್ಯವಾಗಿ ಕಾರ್ಯಕ್ರಮದ ವೇದಿಕೆಗಳೆಂದರೆ ಒಂದು ಬ್ಯಾನರ್, ಮಂಟಪ ಹಾಕಿ ಮೈಕ್ ವ್ಯವಸ್ಥೆ ಮಾಡಿರುವುದನ್ನು ಇರುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳಾದರೆ ವೇದಿಕೆಯಲ್ಲಿ ಹೆಚ್ಚಾಗಿ ಬಣ್ಣದ ಲೈಟ್‌ಗಳನ್ನು ಕಾಣುತ್ತೇವೆ. ಆದರೆ ತಾಲ್ಲೂಕಿನ ಢವಳಗಿಯಲ್ಲಿ ಬುಧವಾರ ನಡೆದ ಜೋಡೆತ್ತಿನ ಕೃಷಿ ಪುನಶ್ಚೇತನ ಸಂಕಲ್ಪ ಸಮ್ಮೇಳನದಲ್ಲಿ ಇಡೀ ವೇದಿಕೆಯನ್ನೇ ಕೃಷಿ ಸಂಸ್ಕೃತಿ ನೆನಪಿಸಿಕೊಡುವ ಮಾದರಿಯಲ್ಲಿ ನಿರ್ಮಿಸಿದ್ದು ಗಮನ ಸೆಳೆಯಿತು.

ಕೃಷಿ ಚಟುವಟಿಕೆಯಿಂದಲೇ ವಿಮುಖನಾಗುತ್ತಿರುವ ರೈತನಿಗೆ ಆತನ ನಿಜವಾದ ಸ್ನೇಹಿತ ಎತ್ತುಗಳೇ ಎಂಬುದನ್ನು ನೆನಪಿಸಿಕೊಡುವ ಕಾರ್ಯವನ್ನು ತಾಲ್ಲೂಕಿನ ಢವಳಗಿಯಲ್ಲಿ ಬುಧವಾರ ನಡೆದ ಜೋಡೆತ್ತಿನ ಕೃಷಿ ಪುನಶ್ಚೇತನ ಸಂಕಲ್ಪ ಸಮ್ಮೇಳನ ಮಾಡಿತು.

ವೇದಿಕೆಯಲ್ಲಿ ತೆಂಗು, ತರಕಾರಿ ಬೆಳೆ, ಜೋಳದ ದಂಟು, ಚೆಂಡು ಹೂ, ಪಪ್ಪಾಯಿ, ಬಾಳೆ ಕಂಬ, ಹಣ್ಣು, ಮಾವಿನ ಮಿಡಿಗಾಯಿ, ಕುಂಬಳಕಾಯಿ, ಕಬ್ಬು, ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನಕಾಯಿ, ಟೊಮೆಟೊ, ಬೂದುಗುಂಬಳ, ಗೋಧಿ, ಮೆಕ್ಕೆಜೋಳ, ಜೋಳದ ಬೆಳೆಗಳನ್ನು ವೇದಿಕೆಯಲ್ಲಿ ಆಕರ್ಷಕವಾಗಿ ಜೋಡಿಸಿದ್ದರು. ಇಡೀ ವೇದಿಕೆಯೇ ಕೃಷಿಕರು ಹಾಗೂ ಜಾನುವಾರುಗಳಿಗೆ ಆಸರೆಯಾಗುವಂತಹ ಬೆಳೆಗಳ ಸಂಯೋಜನೆ ಹೊಂದಿದ್ದು ಎಲ್ಲರ ಮನ ಗೆದ್ದಿತು.

ADVERTISEMENT

ಪರಿಸರ ವಿಜ್ಞಾನಿ ಚಂದ್ರಶೇಖರ ಬಿರಾದಾರ ಅವರ ನೇತೃತ್ವದಲ್ಲಿ ಈ ಜೋಡೆತ್ತು ಕೃಷಿ ಪುನಶ್ಚೇತನ ಸಂಕಲ್ಪ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು. ಢವಳಗಿ ಗ್ರಾಮದ ಬಾಲಭಾರತಿ ಶಾಲೆಯ ಆವರಣದಿಂದ ಆರಂಭಗೊಂಡ ಜೋಡೆತ್ತಿನ ಬಂಡಿಗಳ ಮೆರವಣಿಗೆ ಢವಳಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಮಡಿವಾಳೇಶ್ವರ ದೇವಸ್ಥಾನದಲ್ಲಿ ಸಮಾರೋಪಗೊಂಡಿತು.

ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಮಾತನಾಡಿ, ‘ನಮ್ಮ ಮನೆಯಲ್ಲೂ ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ಇದ್ದ ಎತ್ತುಗಳ ಪಾಲನೆ ಈಗಿಲ್ಲ. ಮನೆಗೆ ಡೇರಿ ಹಾಲು ಬರುತ್ತದೆ. ಎತ್ತುಗಳ ಪಾಲನೆ ಕಷ್ಟ ಎಂಬ ಉದ್ದೇಶದಿಂದ ಅವುಗಳ ಪಾಲನೆಯಿಂದ ಎಲ್ಲರೂ ದೂರ ಉಳಿಯುತ್ತಿದ್ದಾರೆ. ಕೃಷಿ ಚಟುವಟಿಕೆಯನ್ನು ಕೆಳಮಟ್ಟದ ಕೆಲಸ ಎಂದು ಯುವಕರು ಭಾವಿಸಿದ್ದಾರೆ. ಅದು ದೂರವಾಗಬೇಕು. ಹಿಂದೆ ರೈತರು ತಮ್ಮ ವೈಯಕ್ತಿಕ ಖರ್ಚುಗಳನ್ನು ನಿಭಾಯಿಸುವ ಕೆಲಸವನ್ನು ಎತ್ತುಗಳು, ಆಕಳುಗಳಿಂದ ಸರಿದೂಗಿಸುತ್ತಿದ್ದರು. ಆದರೆ ಇಂದು ವೈಯಕ್ತಿಕವಾಗಿ ಮಾಡುವ ಎಲ್ಲ ಖರ್ಚನ್ನೂ ವ್ಯವಸಾಯದ ಖರ್ಚು ಎಂದು ಹೇಳುತ್ತಿರುವುದು ದುರಂತ’ ಎಂದರು.

ಎತ್ತುಗಳ ಉಳಿವಿಗೆ ಸಂಘ-ಸಂಸ್ಥೆಗಳು, ವಿಜ್ಞಾನಿಗಳು, ಸರ್ಕಾರಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದರು.

ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ವಿಷ್ಣುವರ್ಧನ್ ಮಾತನಾಡಿ, ‘ಕೃಷಿಯಲ್ಲಿ ಹಳೆಯ ಸಂಸ್ಕೃತಿ, ಸಂಪ್ರದಾಯ ಕಾಣಲು ಇಂದು ಸಾಧ್ಯವಿಲ್ಲ. ಮಣ್ಣಿನ ಫಲವತ್ತತೆ ಹಾಳಾಗುತ್ತಿದೆ. ಬೆಳೆಯುವ ಬೆಳೆ ಸಹ ವಿಷವಾಗುತ್ತಿದೆ. ಆರೋಗ್ಯಕರವಾದ ಮಣ್ಣನ್ನು ಬರಡು ಮಾಡುತ್ತಿದ್ದೇವೆ. ಅನ್ನ ಆರೋಗ್ಯಕರವಾಗಿಲ್ಲ. ಕೃಷಿಯಲ್ಲಿ ಸುಸ್ಥಿರತೆ ಕಾಪಾಡಬೇಕಿದೆ’ ಎಂದು ಹೇಳಿದರು.

‘ಕೃಷಿ ಕುಟುಂಬದಲ್ಲಿ ಬೆಳೆದಿರುವವರು ಎತ್ತುಗಳನ್ನು ಪಾಲನೆ ಮಾಡುವುದು ಅವುಗಳನ್ನು ಬೆಳೆಸುವಂತಹ ಸಂಪ್ರದಾಯ ಗ್ರಾಮೀಣರಲ್ಲಿದೆ. ಆದರೆ ರೈತ ತನ್ನ ಸ್ನೇಹಿತನಾಗಿರುವ ಎತ್ತುಗಳನ್ನು ಅವಿಭಾಜ್ಯ ಅಂಗ ಎಂಬುದನ್ನು ಮರೆಯುತ್ತಿದ್ದಾನೆ. ರೈತನ ಮನೆತನದ ಗೌರವವನ್ನು ಎತ್ತುಗಳು ಬಿಂಬಿಸುತ್ತಿದ್ದವು. ಸಾವಯವ ಕೃಷಿ ಎಲ್ಲ ಕಡೆ ಕಂಡು ಬರುತ್ತಿತ್ತು. ಆದರೆ ಎತ್ತು ಸಾಕುವವರು ಕಡಿಮೆ ಆಗಿದ್ದಾರೆ. ಯುವ ಪೀಳಿಗೆ ಕೃಷಿ ಚಟುವಟಿಕೆಗಳನ್ನು ಮಾಡಲು ಆಸಕ್ತಿ ಕಳೆದುಕೊಂಡಿದೆ. ಇದು ಬದಲಾಗಬೇಕು’ ಎಂದು ಹೇಳಿದರು.

ಢವಳಗಿ ಗದ್ದುಗೆ ಮಠದ ಮಡಿವಾಳೇಶ್ವರ ಸ್ವಾಮೀಜಿ, ಪ್ರಗತಿಪರ ರೈತರಾದ ಶರಣಬಸವ ಬಿರಾದಾರ, ನಿವೃತ್ತ ಕೃಷಿ ಅಧಿಕಾರಿ ಶಂಕರಗೌಡ ಬಿರಾದಾರ, ಮುಖಂಡ ಶ್ರೀಶೈಲ ದೊಡಮನಿ, ಮಡಿವಾಳಪ್ಪಗೌಡ ಬಿರಾದಾರ, ನಿವೃತ್ತ ಮುಖ್ಯಗುರು ಎಸ್.ಎಸ್. ಪಾಟೀಲ್, ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಶಿವಾನಂದ ಮೇಟಿ, ರೈತ ಹಿತರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸಿದರೆಡ್ಡಿ, ಅಭಿ ಫೌಂಡೇಶನ್‌ನ ಬಸವರಾಜ ಎನ್. ಬಿರಾದಾರ ಇದ್ದರು.

ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಜೋಡಿ ಎತ್ತುಗಳ ಮೆರವಣಿಗೆ ನಡೆಸಲಾಯಿತು. ಎತ್ತುಗಳ ಮಾಲೀಕರಿಗೆ ತೆಂಗಿನ ಸಸಿ, ಮೇವಿನ ಬೀಜ, ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.

ಒಂದೇ ವೇದಿಕೆಯಲ್ಲಿ ಹಾಲಿ–ಮಾಜಿ ಶಾಸಕರ ಸಮ್ಮಿಲನ
ವಿಧಾನಸಭಾ ಚುನಾವಣೆಯ ಬಳಿಕ ಹಾಲಿ ಮತ್ತು ಮಾಜಿ ಶಾಸಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಬುಧವಾರ ನಡೆದ ಜೋಡೆತ್ತಿನ ಕೃಷಿ ಪುನಶ್ಚೇತನ ಸಂಕಲ್ಪ ಸಮ್ಮೇಳನದಲ್ಲಿ ಕಾಣಿಸಿಕೊಂಡರು. ಕಾರ್ಯಕ್ರಮ ಉದ್ಘಾಟನೆಯನ್ನು ಮಾಜಿ ಶಾಸಕ ನಡಹಳ್ಳಿಯವರು ಮಾಡಿದರೆ ಶಾಸಕರು ನಾಡಗೌಡರು ಮೊದಲಿಗರಾಗಿ ಮಾತನಾಡಿ ಮಾಜಿ ಶಾಸಕರ ಹೆಸರನ್ನು ಕೂಡ ತಮ್ಮ ಭಾಷಣದಲ್ಲಿ ಉಲ್ಲೇಖಿಸಿ ವೇದಿಕೆಯಿಂದ ನಿರ್ಗಮಿಸಿದರು. ಬಳಿಕ ನಡಹಳ್ಳಿಯವರು ಶಾಸಕರ ಹೆಸರನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ಚುನಾವಣೆ ಬಳಿಕ ಒಂದೇ ವೇದಿಕೆಯಲ್ಲಿ ಉಭಯ ನಾಯಕರು ಕಾಣಿಸಿಕೊಂಡಿದ್ದು ಹಲವು ಚರ್ಚೆಗಳಿಗೆ ನಾಂದಿ ಹಾಡಿದೆ.
‘ಜೋಡೆತ್ತಿನ ಕೃಷಿಯಲ್ಲಿದೆ ನಾಗರಿಕತೆಯ ಭವಿಷ್ಯ’
ಜೋಡೆತ್ತಿನ ಕೃಷಿಯ ನಾಶದಿಂದ ನಮ್ಮ ಭೂಮಿ ಫಲವತ್ತತೆ ಕಳೆದುಕೊಂಡು ಹಲವು ಬೆಳೆಗಳ ಇಳುವರಿ ಕುಂಠಿತಗೊಳ್ಳುತ್ತಿದೆ. ಜೋಡೆತ್ತಿನ ಕೃಷಿಕರ ಮೇಲೆ ನಮ್ಮ ನಾಗರಿಕತೆಯ ಭವಿಷ್ಯ ನಿಂತಿದೆ. ಗ್ರಾಮಗಳಲ್ಲಿ ಜೋಡೆತ್ತಿನ ಕೃಷಿಕರು ಉಳಿದರೆ ಮಾತ್ರ ಅದಕ್ಕೆ ಅವಲಂಬಿತ ಇತರ ಉದ್ಯೋಗಗಳೂ ಉಳಿಯಲು ಸಾಧ್ಯ. ಕೃಷಿ ಆಧಾರಿತ ಜೋಡೆತ್ತುಗಳನ್ನು ಹೊಂದಿದ ಕೃಷಿಕರಿಗೆ ಪ್ರೋತ್ಸಾಹ ಒದಗಿಸುವ ಕಾರ್ಯ ಆಗಬೇಕು. ಅಪಘಾನಿಸ್ತಾನ ಜಾಂಬೋಡಿಯಾ ಕಾಂಬೋಡಿಯಾ ಟರ್ಕಿ ಸೇರಿದಂತೆ ಐವತ್ತು ದೇಶಗಳಲ್ಲಿ ಸುತ್ತಾಡಿದರೂ ನಂದಿ ಮೂರ್ತಿ ಕಾಣುತ್ತೇವೆ. ಎತ್ತುಗಳಿಗೆ ಇರುವ ಪ್ರಾಮುಖ್ಯ ಎಷ್ಟಿದೆ ಎಂಬುದು ಇದರಿಂದ ತಿಳಿದು ಬರುತ್ತದೆ. ಹೀಗಾಗಿ ನಾವು ನಂದಿಯಾತ್ರೆ ಮಾಡುತ್ತಿದ್ದೇವೆ. ಪರಿಸರದಲ್ಲಿ ಅತ್ಯಂತ ಪ್ರಾಮುಖ್ಯ ಪಡೆದುಕೊಂಡಿರುವುದು ಎತ್ತುಗಳು ಎಂಬುದನ್ನು ಮತ್ತೊಮ್ಮೆ ರೈತ ಸಂಕುಲಕ್ಕೆ ಮನವರಿಕೆ ಮಾಡಿಕೊಡುವುದು ಈ ಕಾರ್ಯಕ್ರಮ ಉದ್ದೇಶ ಎಂದು ವಿಜ್ಞಾನಿ ಚಂದ್ರಶೇಖರ ಬಿರಾದಾರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.