ADVERTISEMENT

ಉತ್ತಮ ಮಳೆ | ಹೊಲಗಳತ್ತ ಮುಖ ಮಾಡಿದ ಅನ್ನದಾತ: ಬಿತ್ತನೆ ಕಾರ್ಯ ಚುರುಕು

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 5:44 IST
Last Updated 17 ಜೂನ್ 2024, 5:44 IST
ಮುದ್ದೇಬಿಹಾಳ ತಾಲ್ಲೂಕಿನ ಕವಡಿಮಟ್ಟಿಯಲ್ಲಿ ರೈತ ಪವಾಡಸ್ವಾಮಿ ಶಿವಯೋಗಿಮಠ ಹೊಲದಲ್ಲಿ ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ
ಮುದ್ದೇಬಿಹಾಳ ತಾಲ್ಲೂಕಿನ ಕವಡಿಮಟ್ಟಿಯಲ್ಲಿ ರೈತ ಪವಾಡಸ್ವಾಮಿ ಶಿವಯೋಗಿಮಠ ಹೊಲದಲ್ಲಿ ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ   

ಮುದ್ದೇಬಿಹಾಳ: ತಾಲ್ಲೂಕಿನ ಮೂರು ಹೋಬಳಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದು, ರೈತರು ಬಿತ್ತನೆಗೆ ಸಿದ್ಧ ಮಾಡಿಕೊಂಡ ಕೃಷಿಪರಿಕರಗಳೊಂದಿಗೆ ಹೊಲಗಳತ್ತ ಮುಖ ಮಾಡಿದ್ದು, ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.

ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ ತೊಗರಿ, ಹೆಸರು, ಸಜ್ಜೆ,ಹ ತ್ತಿ ಬೆಳೆಗಳ ಬಿತ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೃಷಿ ಇಲಾಖೆಯಿಂದ ಈಗಾಗಲೇ ಮುದ್ದೇಬಿಹಾಳ, ಢವಳಗಿ, ನಾಲತವಾಡ ಹೋಬಳಿ ವ್ಯಾಪ್ತಿಯ ರೈತರಿಗೆ ತೊಗರಿ, ಹೆಸರು ಬೀಜಗಳನ್ನು ವಿತರಣೆ ಮಾಡಿದೆ. ಅದರಲ್ಲಿ ಮುಸುಕಿನ ಜೋಳ, ಬಿಜಿಎಸ್-9 ಹೆಸರು, ಟಿಎಸ್ಆರ್3ಆರ್ ತೊಗರಿ ಬೀಜಗಳನ್ನು ವಿತರಣೆ ಮಾಡಲಾಗಿದೆ.

ಮುದ್ದೇಬಿಹಾಳ ತಾಲ್ಲೂಕಿನ ಮೂರು ಹೋಬಳಿ ವ್ಯಾಪ್ತಿಯನ್ನು ಒಳಗೊಂಡ ಒಟ್ಟು 16,772 ಹೆಕ್ಟೇರ್ ಪ್ರದೇಶ ನೀರಾವರಿ ಇದ್ದು 39,939 ಹೆಕ್ಟೇರ್ ಶೇ 10ರಷ್ಟು ಪ್ರಮಾಣದಲ್ಲಿ ಬಿತ್ತನೆ ಆಗಿದೆ.

ADVERTISEMENT

ಮಳೆ ಮಾಹಿತಿ: ಪ್ರಸಕ್ತ ಸಾಲಿನ ಮಳೆ ಮಾಪನ ಕೇಂದ್ರದಲ್ಲಿ ಮೇ 31ರ ವರೆಗೆ ದಾಖಲಾದ ಮಳೆ ಪ್ರಮಾಣ. 9.2 ಸೆಂ.ಮೀ ಮಳೆ ಆಗಬೇಕಿದ್ದು, ಜ.1ರಿಂದ ಮೇ 31ರ ವರೆಗೆ 6.71 ಸೆಂ.ಮೀ ಮಳೆ ಆಗಿದೆ. ಜೂನ್ 7ರಂದು ಮುದ್ದೇಬಿಹಾಳ 4.5 ಸೆಂ.ಮೀ, ನಾಲತವಾಡ 1.78 ಸೆಂ.ಮೀ, ಢವಳಗಿ 5.24 ಸೆಂ.ಮೀ, ಜೂ.8ರಂದು ಢವಳಗಿ 1 ಸೆಂ.ಮೀ, ಜೂ.9ರಂದು ಮುದ್ದೇಬಿಹಾಳ 4.8 ಸೆಂ.ಮೀ, ನಾಲತವಾಡ 8.2 ಸೆಂ.ಮೀ, ಢವಳಗಿ 5.21 ಸೆಂ.ಮೀ, ಜೂ.10ರಂದು ಮುದ್ದೇಬಿಹಾಳ 3.6 ಸೆಂ.ಮೀ, ನಾಲತವಾಡ 2.32 ಸೆಂ.ಮೀ, ಢವಳಗಿ 1.2 ಸೆಂ.ಮೀ ಮಳೆಯಾಗಿದ್ದು, ಜೂನ್ ತಿಂಗಳ ಆರಂಭದಲ್ಲಿ ಬರುವ ಮಳೆ ಸಾಕಷ್ಟು ಪ್ರಮಾಣದಲ್ಲಿ ಸುರಿದಿದ್ದು, ಇದರಿಂದ ರೈತರು ಜಮೀನುಗಳಿಗೆ ತೆರಳಿ ಬಿತ್ತನೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

‘ಈ ಬಾರಿ ಮುಂಗಾರಿ ಚೊಲೊ ಮಳೀ ಆಗೇತ್ರಿ. ಬಿತ್ತಾಕ ಬಂದೀವಿ. ತೊಗರಿ, ಹೆಸರು ಬಿತ್ತಾಕತ್ತೇವಿ. ನೆಲ ಸಾಕಷ್ಟು ಹಸಿ ಆಗೈದ’ ಎಂದು ಕವಡಿಮಟ್ಟಿ ರೈತ ದ್ಯಾಮಣ್ಣ ಮೇಟಿ ಹೇಳಿದರು.

ಈ ಬಾರಿ ಮುಂಗಾರು ಹಂಗಾಮು ಆಶಾದಾಯಕವಾಗಿದ್ದು ಎಲ್ಲ ಹೋಬಳಿಗಳಲ್ಲೂ ಅಗತ್ಯಕ್ಕಿಂತ ಹೆಚ್ಚಿನ ಮಳೆ ಸುರಿದಿದೆ. ರೈತರಿಗೆ ಅಗತ್ಯವಿರುವ ಬೀತ್ತನೆ ಬೀಜ ಗೊಬ್ಬರ ಒದಗಿಸುವ ಕಾರ್ಯವನ್ನು ಕೃಷಿ ಇಲಾಖೆ ಕೈಗೊಂಡಿದೆ
ಎಸ್.ಡಿ.ಭಾವಿಕಟ್ಟಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.