ಆಲಮಟ್ಟಿ: ಮದುವೆ ಜೀವನದಲ್ಲಿ ನಡೆಯುವ ಪ್ರಮುಖ ಘಟ್ಟವಾಗಿದ್ದು, ಅದರ ಸುಂದರ ಕ್ಷಣಗಳನ್ನು ಸೆರೆ ಹಿಡಿಯಲು ಇತ್ತೀಚೆಗೆ ಪ್ರಿವೆಡ್ಡಿಂಗ್ ಶೂಟ್ ಹಾಗೂ ಪೋಸ್ಟ್ ವೆಡ್ಡಿಂಗ್ ಶೂಟ್ ಮಾಡಿಸುವುದು ಟ್ರೆಂಡ್ ಆಗಿದೆ.
ಅಂತಹ ಶೂಟಿಂಗ್ ಮಾಡಲು ಸುಂದರ ಸ್ಥಳವೂ ಅಗತ್ಯವಾಗಿದ್ದು, ಆಲಮಟ್ಟಿ ಉತ್ತಮ ಸ್ಥಳವಾಗಿದೆ.
ಈಗ ಮದುವೆ ಸೀಸನ್ ಆರಂಭಗೊಂಡಿದ್ದು,ಆಲಮಟ್ಟಿಯ ನಾನಾ ಸ್ಥಳಗಳಲ್ಲಿ ಪ್ರಿವೆಡ್ಡಿಂಗ್ ಶೂಟಿಂಗ್‌ಗಳ ತಂಡಗಳು ಕಾಣಿಸುತ್ತಿವೆ. ಉತ್ತರಕ ರ್ನಾಟಕದ ನಾನಾ ಕಡೆಯ ವಧು-ವರರು, ಫೋಟೊಗ್ರಾಫರ್‌ಗಳ ನೆಚ್ಚಿನ ತಾಣ ಆಲಮಟ್ಟಿಯಾಗಿದೆ.
ಆಲಮಟ್ಟಿ ಪೆಟ್ರೋಲ್ ಪಂಪ್‌ನಿಂದ ಆಲಮಟ್ಟಿ ಅಣೆಕಟ್ಟು ಸ್ಥಳದವರೆಗಿನ ಮಾರ್ಗ ಮಲೆನಾಡಿಗಿಂತಲೂ ಸುಂದರವಾಗಿದೆ. ರಸ್ತೆಯ ಅಕ್ಕಪಕ್ಕ ಬೆಳೆದಿರುವ ಸರ್ಕುಲಿಯಾ ಪೋಟಿಡಾ ಎಂಬ ಸಾಲು ಸಾಲು ಗಿಡಗಳು ಈ ಪರಿಸರವನ್ನು ಸುಂದರಗೊಳಿಸಿವೆ. ಇಲ್ಲಿ ಫೋಟೊಗ್ರಾಫಿಗೆ ಯಾವುದೇ ನಿರ್ಬಂಧವಿಲ್ಲ, ಯಾವುದೇ ಅನುಮತಿ, ಹಣ ನೀಡುವ ಅಗತ್ಯವೂ ಇಲ್ಲ.
ಆದ್ದರಿಂದಲೇ ಇಲ್ಲಿ ಪ್ರಿವೆಡ್ಡಿಂಗ್ ಫೋಟೊ ಶೂಟ್ ಹೆಚ್ಚಾಗಿ ನಡೆಯುತ್ತಿದೆ. ಫೋಟೊ ಶೂಟ್ ಮಾಡಲು ಮೂರ್ನಾಲ್ಕು ಬೆಲೆಬಾಳುವ ಕ್ಯಾಮರಾಗಳು, ಲೈಟಿಂಗ್ಸ್, ಮೇಕಪ್ ಮ್ಯಾನ್, ಬಟ್ಟೆ ಬದಲಾಯಿಸಲು ಪ್ರತ್ಯೇಕ ವ್ಯವಸ್ಥೆ, ಡ್ರೋಣ ಕಾಮೆರಾ ಬಳಕೆ... ಹೀಗೆ ಐದಾರು ಜನರ ತಂಡವೇ ಇರುತ್ತದೆ.
ಇದರ ಜತೆ ಇಲ್ಲಿಯ ಎಂಟ್ರನ್ಸ್ ಪ್ಲಾಜಾ, ಮೊಘಲ್ ಉದ್ಯಾನ, ಜಲಾಶಯದ ಹಿಂಭಾಗದ ಕೃಷ್ಣೆಯ ಹಿನ್ನೀರು ಕೂಡಾ ಫೋಟೊಗ್ರಫಿಯ ನೆಚ್ಚಿನ ತಾಣಗಳಾಗಿವೆ.
ಆಧುನಿಕ ಸೌಲಭ್ಯಗಳೊಂದಿಗೆ ಫೋಟೊಗ್ರಫಿ ಮಾಡುವ ಅನಿಕೇತ ಕಣಿಟಕರ ಪುಣೆ, ಇಂದ್ರಕುಮಾರ ದಸ್ತೇನವರ, ಸಂತೋಷ ಹಂಜಗಿ, ಶಿವಕುಮಾರ ಧಲಬಂಜನ್, ವೈಭವ ಮುಳ್ಳೂರು, ರವಿ ಬದಾಮಿ, ಪ್ರಶಾಂತ, ಸಂಗಮೇಶ ಬಡಿಗೇರ ಸೇರಿದಂತೆ ಹಲವು ಫೋಟೋಗ್ರಾಫರ್‌ಗಳ ನೆಚ್ಚಿನ ತಾಣವೂ ಆಲಮಟ್ಟಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.