ಆಲಮಟ್ಟಿ: ರೈತರ ಬೇಡಿಕೆ ಹಾಗೂ ಬೆಳೆದು ನಿಂತ ಪೈರಿನ ರಕ್ಷಣೆಗಾಗಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ 2.75 ಟಿಎಂಸಿ ಅಡಿ ನೀರು ಹರಿಸಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆದೇಶ ನೀಡಿದ್ದಾರೆ.
ಕಾಲುವೆಗೆ ನೀರು ಹರಿಸಬೇಕೆಂಬ ರೈತರ ಬೇಡಿಕೆ ಹೆಚ್ಚಿದ್ದರಿಂದ ಶನಿವಾರ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರು ಕೃಷ್ಣಾ ಅಚ್ಚುಕಟ್ಟ ಪ್ರದೇಶದ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾಧಿಕಾರಿಗಳು, ಕೆಬಿಜೆಎನ್‌ಎಲ್ ಅಧಿಕಾರಿಗಳ ವಿಡಿಯೊ ಕಾನ್ಫರೆನ್ಸ್ ಸಭೆ ನಡೆಸಿ ನೀರು ಹರಿಸಲು ಆದೇಶ ನೀಡಿದರು.
0.4 ಟಿಎಂಸಿ ಅಡಿ: ಆಲಮಟ್ಟಿ ಎಡದಂಡೆ ಕಾಲುವೆ, ಆಲಮಟ್ಟಿ ಬಲದಂಡೆ ಕಾಲುವೆ ಹಾಗೂ ತಿಮ್ಮಾಪುರ ಏತ ನೀರಾವರಿ ಯೋಜನೆಯ ಕಾಲುವೆಗಾಗಿ 0.4 ಟಿಎಂಸಿ ಅಡಿ ನೀರು ಕಾಲುವೆಗೆ ಸೋಮವಾರದಿಂದ ಹರಿಸಲಾಗುತ್ತದೆ ಎಂದು ಆಲಮಟ್ಟಿ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಎಚ್.ಎನ್, ಶ್ರೀನಿವಾಸ ತಿಳಿಸಿದರು.
ಇದು ಕೇವಲ ಬೆಳೆದು ನಿಂತ ಪೈರಿಗಾಗಿ ಮಾತ್ರ ನೀರು ಹರಿಸಲಾಗುತ್ತದೆ, ನೀರನ್ನು ಹಿತಮಿತವಾಗಿ ಬಳಸಬೇಕು. ಮುಂದಿನ ನಾಲ್ಕು ದಿನ ಕಾಲುವೆಗೆ ನೀರು ಹರಿಯಲಿದೆ ಎಂದು ಕೆಬಿಜೆಎನ್ ಎಲ್ ಸೂಪರಿಂಟೆಂಡಿಂಗ್ ಎಂಜಿನಿಯರ್ ಡಿ. ಬಸವರಾಜು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.