ಆಲಮಟ್ಟಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಕಾಲುವೆಗೆ ಹಿಂಗಾರು ಹಂಗಾಮಿಗೆ 2025 ರ ಮಾ.23 ರವರೆಗೆ ನೀರು ಹರಿಸಲು ಶನಿವಾರ ಆಲಮಟ್ಟಿಯಲ್ಲಿ ಐಸಿಸಿ ಅಧ್ಯಕ್ಷ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಜರುಗಿದ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯ ನಂತರ, ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಚಿವರು, ಆಲಮಟ್ಟಿ, ನಾರಾಯಣಪುರ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಜನಪ್ರತಿನಿಧಿಗಳ ಜತೆ ಚರ್ಚಿಸಿ ರೈತರಿಗೆ ನ್ಯಾಯಯುತವಾಗಿ ನೀರು ಹರಿಸಲು ತೀರ್ಮಾನಿಸಲಾಗಿದ್ದು 14 ದಿನ ಚಾಲು ಹಾಗೂ 8 ದಿನ ಬಂದ್ ಅವಧಿಯ ವಾರಾಬಂಧಿ ಅಳವಡಿಸಲಾಗುವುದು ಎಂದು ತಿಳಿಸಿದರು.
ಹಿಂಗಾರಿಗೆ 65 ಟಿಎಂಸಿ ಅಡಿ ನೀರು:
ಹಿಂಗಾರು ಹಂಗಾಮಿಗೆ ಡಿ.9 ರಿಂದ 2025 ರವರೆಗೆ ಮಾ.23 ರವರೆಗೆ ವಾರಾಬಂಧಿ ಪದ್ಧತಿ ಅನುಸರಿಸಿ 113 ದಿನಗಳ ಕಾಲ ನೀರು ಹರಿಯಲಿದೆ. ದಿನಕ್ಕೆ 1 ಟಿಎಂಸಿ ಅಡಿ ನೀರು ಹರಿಸಿ ಹಿಂಗಾರು ಹಂಗಾಮಿಗೆ ಒಟ್ಟಾರೇ 65 ದಿನಗಳ ಕಾಲ ಕಾಲುವೆಗೆ ನೀರು ಹರಿಸಲು ನಿರ್ಧರಿಸಲಾಗಿದೆ.
ಆಲಮಟ್ಟಿ, ನಾರಾಯಣಪುರ ಎರಡೂ ಜಲಾಶಯದಲ್ಲಿ ಬಳಕೆ ಯೋಗ್ಯ 115.11 ಟಿಎಂಸಿ ಅಡಿ ನೀರಿದ್ದು, ಕಳೆದ ವರ್ಷಕ್ಕಿಂತ 42 ಟಿಎಂಸಿ ಅಡಿ ನೀರು ಹೆಚ್ಚಿಗೆ ಲಭ್ಯವಿದೆ. ಈಗಾಗಲೇ ಬೆಳೆದು ನಿಂತಿರುವ ತೊಗರಿ ಬೆಳೆ ಹಾಗೂ ದ್ವಿಋತು ಬೆಳೆಗಳಿಗೆ ತಕ್ಕಂತೆ ಆಯಾ ಕಾಲುವೆಗೆ ನೀರು ತಾತ್ಕಾಲಿಕವಾಗಿ ಹರಿಸಲಾಗುತ್ತದೆ.
ಡಿ.1 ರಿಂದ 2025 ರ ಜೂನ್ 30 ರವರೆಗೆ ಕುಡಿಯುವ ನೀರು, ಕೆರೆಗಳ ಭರ್ತಿ, ಕಾಲುವೆಗಳ ಮೂಲಕ ಕುಡಿಯುವ ನೀರಿನ ಯೋಜನೆಗಳಿಗೆ ನೀರು ಪೂರೈಸುವುದು, ಭಾಷ್ಕೀಪಕರಣ, ಉಷ್ಣ ವಿದ್ಯುತ್ ಸ್ಥಾವರಗಳಿಗೆ, ಕೈಗಾರಿಕೆಗಳಿಗೆ, ಬ್ಯಾರೇಜ್‌ಗಳಲ್ಲಿ ನೀರು ಸಂಗ್ರಹಣೆ, ರೈತರ ಹಿನ್ನೀರಿನ ಬಳಕೆ ಸೇರಿದಂತೆ ಅಂದಾಜು 44 ಟಿಎಂಸಿ ಅಡಿ ನೀರು ಕಾಯ್ದಿರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಸಚಿವ ತಿಮ್ಮಾಪುರ ಹೇಳಿದರು.
ಸಚಿವರಾದ ಶಿವಾನಂದ ಪಾಟೀಲ, ಶರಣಬಸಪ್ಪಗೌಡ ದರ್ಶನಾಪುರ, ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಎಚ್.ವೈ. ಮೇಟಿ, ಸಿ.ಎಸ್. ನಾಡಗೌಡ, ಚೆನ್ನಾರೆಡ್ಡಿ ಪಾಟೀಲ ತುನ್ನೂರ, ಜೆ.ಟಿ.ಪಾಟೀಲ, ಅಶೋಕ ಮನಗೂಳಿ, ವಿಠ್ಠಲ ಕಟಕದೋಂಡ, ರಾಜಾ ವೇಣುಗೋಪಾಲ ನಾಯಕ, ಕರೆಮ್ಮ ನಾಯಕ, ಕೆಬಿಜೆಎನ್ಎಲ್ ಎಂಡಿ ಕೆ.ಪಿ.ಮೋಹನರಾಜ್, ಮುಖ್ಯ ಎಂಜಿನಿಯರ್ ಎಚ್.ಎನ್. ಶ್ರೀನಿವಾಸ, ಐಸಿಸಿ ಸದಸ್ಯ ಕಾರ್ಯದರ್ಶಿ ಪ್ರೇಮಸಿಂಗ್, ಆರ್.ಮಂಜುನಾಥ, ವಿ.ಆರ್. ಹಿರೇಗೌಡರ ಮತ್ತೀತರರು ಇದ್ದರು.
ನ.21 ರಿಂದ ಡಿ.8 ರವೆಗೆ ಕಾಲುವೆಗೆ ನೀರಿಲ್ಲ
ಆಲಮಟ್ಟಿ ಜಲಾಶಯದ ಹಂತ1 ಮತ್ತು ಹಂತ 2 ಹಾಗೂ ನಾರಾಯಣಪುರ ಎಡದಂಡೆ ಕಾಲುವೆಗಳ ಜಾಲದ ಬೆಳೆಗೆ ಅನುಗುಣವಾಗಿ ನ.17 ರಿಂದ ನ.20 ರವೆರೆಗೆ ನಾಲ್ಕು ದಿನ ನಿರಂತರ ನೀರು ಹರಿಸಲಾಗುತ್ತದೆ.
ನ.21 ರಿಂದ ಡಿ. 8 ರವೆಗೆ 18 ದಿನಗಳ ಕಾಲ ಈ ಕಾಲುವೆಗಳಿಗೆ ನೀರು ಹರಿಯುವುದಿಲ್ಲ. ಆದರೆ ನಾರಾಯಣಪುರ ಬಲದಂಡೆ ಕಾಲುವೆಗೆ ನ.17 ರಿಂದ ನ. 24 ರವರೆಗೆ ನೀರು ಹರಿಸುವುದನ್ನು ಬಂದ್ ಮಾಡಿ, ನ.25 ರಿಂದ ನ.30 ರವರೆಗೆ ನೀರು ಹರಿಸಲಾಗುತ್ತದೆ. ಅಲ್ಲಿ ಡಿ.1 ರಿಂದ ಡಿ 8ರವರೆಗೂ ನೀರು ಹರಿಯುವುದಿಲ್ಲ.
ಕ್ಲೋಸರ್ ಕಾಮಗಾರಿಗೆ ₹ 135 ಕೋಟಿ
ಕಾಲುವೆಗಳ ಜಾಲಗಳ ದುರಸ್ತಿ ಜಂಗಲ್ ಕಟ್ಟಿಂಗ್ ಹೂಳು ತೆಗೆಯುವ ಕ್ಲೋಸರ್ ಕಾಮಗಾರಿಗೆ ₹ 135 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆಗೊಳಿಸಿದೆ. ಕಾಲುವೆಗಳ ಜಾಲಕ್ಕೆ ನೀರು ಹರಿಯದ ಸಮಯದಲ್ಲಿ ಕಾಮಗಾರಿ ನಡೆಸಲು ಸೂಚಿಸಲಾಗಿದೆ ಎಂದು ಸಚಿವ ತಿಮ್ಮಾಪುರ ತಿಳಿಸಿದರು. ಕೆಬಿಜೆಎನ್ಎಲ್ ಎಂಡಿ ಕಚೇರಿ ಆಲಮಟ್ಟಿಗೆ ಸ್ಥಳಾಂತರಕ್ಕೆ ಸರ್ಕಾರ ಆದೇಶ ನೀಡಿದ್ದರೂ ಇನ್ನೂ ಸ್ಥಳಾಂತರಗೊಂಡಿಲ್ಲ ಶೀಘ್ರವೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ರೈತರ ವಿರುದ್ಧ ಕಠಿಣ ಕ್ರಮ ಇಲ್ಲ
ಕಾಲುವೆಗಳ ಜಾಲದಿಂದ ಪಂಪಸೆಟ್ ಮೂಲಕ ಅಕ್ರಮವಾಗಿ ನೀರು ಎತ್ತಿ ರೈತರು ಜಮೀನಿಗೆ ಒಯ್ಯುತ್ತಿದ್ದು ಇದರಿಂದ ಕಾಲುವೆಯ ಕೊನೆ ಅಂಚಿಗೆ ನೀರು ಹರಿಯುತ್ತಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ತಿಮ್ಮಾಪುರ ರೈತರ ವಿರುದ್ಧ ಕಠಿಣ ಕ್ರಮ ಅನುಸರಿಸಲು ಬರುವುದಿಲ್ಲ ಕಾಲುವೆಯ ಕೊನೆ ಅಂಚಿಗೆ ನೀರು ಹರಿಸಲಾಗಿದೆ ಈ ಬಾರಿಯೂ ನೀರು ಹರಿಯುವಂತೆ ಎಲ್ಲಾ ಕ್ರಮಕೈಗೊಳ್ಳಲಾಗುತ್ತಿದೆ. ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಕಬ್ಬಿನ ಬೆಳೆ ಹೆಚ್ಚಾಗಿದ್ದು ಇದರಿಂದ ಸವುಳು-ಜವಳಿನ ಪ್ರಮಾಣ ಹೆಚ್ಚಾಗಿದ್ದು ಇದರ ನಿಯಂತ್ರಣಕ್ಕಾಗಿ ಕೃಷ್ಣಾ ಕಾಡಾಕ್ಕೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.