ಆಲಮಟ್ಟಿ ( ವಿಜಯಪುರ ಜಿಲ್ಲೆ): ಕೃಷ್ಣಾ ಭಾಗ್ಯ ಜಲ ನಿಗಮದ ಆಲಮಟ್ಟಿ ಡ್ಯಾಂ ಸೈಟ್‌ನ ನೌಕರರ ವಸಾಹತು ಸೇರಿ ನಿಗಮದ ಎಲ್ಲ ಕಚೇರಿಗಳ ವಿದ್ಯುತ್ ಸಂಪರ್ಕವನ್ನು ಹೆಸ್ಕಾಂ ಶುಕ್ರವಾರ ಸಂಜೆ 5ರಿಂದ ಸ್ಥಗಿತಗೊಳಿಸಿದ್ದು, ಇದರಿಂದ ಆಲಮಟ್ಟಿ ಡ್ಯಾಂ ಸೈಟ್ ಸಂಪೂರ್ಣ ಕತ್ತಲೆಯಲ್ಲಿದೆ.
‘ವಸಾಹತು ಪ್ರದೇಶದ ಬಿಲ್ ಪಾವತಿಸಿದ್ದರೂ, ಅನ್ಯ ನೀರಾವರಿ ಯೋಜನೆಗಳ ಬಿಲ್ ಬಾಕಿ ಎಂಬ ಸಬೂಬು ನೀಡಿ ಇಡೀ ಕಾಲೊನಿಯ ವಿದ್ಯುತ್ ತೆಗೆಯಲಾಗಿದೆ. ಇದು ತಪ್ಪು’ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೃಷ್ಣಾ ಭಾಗ್ಯ ಜಲ ನಿಗಮದ ನೌಕರರ ವಸಾಹತು ಪ್ರದೇಶದ ಕಾಲೊನಿ, ಕಚೇರಿ ಸೇರಿ ವಿದ್ಯುತ್ ಬಿಲ್ ಅಳೆಯುವ ಒಂದೇ ಮೀಟರ್ ಇದೆ. ಆ ಮೀಟರ್‌ಗೆ ತಕ್ಕಂತೆ ಬಿಲ್ ಅನ್ನು ಪ್ರತಿ ತಿಂಗಳು ಕೆಬಿಜೆಎನ್‌ಎಲ್ ಹೆಸ್ಕಾಂಗೆ ಪಾವತಿಸುತ್ತದೆ. ಇದರ ಜತೆಗೆ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಆರು ಏತ ನೀರಾವರಿ ಯೋಜನೆಗಳಿಗೆ ವಿದ್ಯುತ್ ಮೂಲಕ ಪಂಪಸೆಟ್ ಚಾಲು ಮಾಡಿ ನದಿಯಿಂದ ನೀರನ್ನು ಎತ್ತಿ ನೀರನ್ನು ಕಾಲುವೆಗೆ ಹರಿಸಲಾಗುತ್ತದೆ. ಇಂತಹ ಆರು ದೊಡ್ಡ ಜಾಕವೆಲ್‌ಗಳಿಗೆ. ನಿತ್ಯವೂ ನಿರಂತರವಾಗಿ ನೀರನ್ನು ಕಾಲುವೆಗೆ ಹರಿಸಲಾಗುತ್ತಿದೆ. ಇದಕ್ಕೆ ಅಪಾರ ಪ್ರಮಾಣದ ವಿದ್ಯುತ್ ಅಗತ್ಯವಿದೆ. ಕಳೆದ 10 ತಿಂಗಳಿಂದ ಈ ಎಲ್ಲ ಏತ ನೀರಾವರಿ ಯೋಜನೆಗಳ ವಿದ್ಯುತ್ ಬಿಲ್ ₹ 187 ಕೋಟಿ ಆಗಿದ್ದು, ಅದನ್ನು ಕೆಬಿಜೆಎನ್ ಎಲ್ ಪಾವತಿಸಿಲ್ಲ. ಅದನ್ನೇ ನೆಪವಾಗಿಟ್ಟುಕೊಂಡು ಏತ ನೀರಾವರಿ ಯೋಜನೆಯ ಜಾಕವೆಲ್ ಬಿಟ್ಟು, ನೌಕರರು ವಾಸಿಸುವ ಕಾಲೊನಿಯ ವಿದ್ಯುತ್ ಕಡಿತ ಮಾಡಲಾಗಿದೆ.
ಕೆಬಿಜೆಎನ್‌ಎಲ್ ನಿಗಮದ ನೌಕರರು ವಾಸಿಸುವ ಆಲಮಟ್ಟಿ ಡ್ಯಾಂ ಸೈಟ್ ಕಾಲೊನಿ ಹಾಗೂ ನಿಗಮದ ಕಚೇರಿಗೆ ಸಂಬಂಧಿಸಿ ಇರುವ ವಿದ್ಯುತ್‌ನ ಬಾಕಿ ಬಿಲ್ ₹ 3.48 ಕೋಟಿಯನ್ನು ಪಾವತಿಸಲಾಗಿದೆ. 2024 ಆಗಸ್ಟ್‌ವರೆಗೆ ಎಲ್ಲ ಬಿಲ್ ಪಾವತಿಸಲಾಗಿದೆ. ಏತನೀರಾವರಿ ಜಾಕವೆಲ್‌ಗಳ ವಿದ್ಯುತ್ ಬಿಲ್ ಪಾವತಿಸಿಲ್ಲ. ಅದನ್ನು ಪಾವತಿಸುವವರೆಗೆ ಕಾಲೊನಿಗೆ ವಿದ್ಯುತ್ ನಿಲ್ಲಿಸಿದರೆ ಅಧಿಕಾರಿಗಳ ಮೇಲೆ ಒತ್ತಡ ಬರುತ್ತದೆ. ಹೀಗಾಗಿ ಬಿಲ್ ಪಾವತಿಯಾಗುತ್ತದೆ ಎನ್ನುವ ಉದ್ದೇಶದಿಂದ ಹೆಸ್ಕಾಂ ಈ ಕ್ರಮ ಕೈಗೊಂಡಿದೆ ಎಂಬ ಆರೋಪ ಕೇಳಿ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.