ಆಲಮೇಲ: ‘ಬಹುದಿನಗಳ ಬೇಡಿಕೆಯಾಗಿದ್ದ ಆಲಮೇಲ ತೋಟಗಾರಿಕೆ ಕಾಲೇಜು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ತರಗತಿಗಳು ಪ್ರಾರಂಭವಾಗುವುದು ನಿಶ್ಚಿತವಾಗಿದೆ. 25 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ ಮೊದಲ ವರ್ಷ ಬಾಗಲಕೋಟದ ತೋಟಗಾರಿಕಾ ವಿವಿಯ ಕ್ಯಾಂಪಸ್ ನಲ್ಲಿ ತರಗತಿಗಳು ನಡೆಸುವ ಕುರಿತು ಎಲ್ಲ ತಯಾರಿಗಳು ನಡೆದಿವೆ’ ಎನ್ನುತ್ತಾರೆ ಶಾಸಕ ಅಶೋಕ ಮನಗೂಳಿ.
‘ತಮ್ಮ ತಂದೆ ತೋಟಗಾರಿಕೆ ಸಚಿವರಾಗಿದ್ದ ಸಂದರ್ಭದಲ್ಲಿ ಆಲಮೇಲ ಪಟ್ಟಣಕ್ಕೆ ತೋಟಗಾರಿಕೆ ಕಾಲೇಜು ಮಂಜೂರು ಮಾಡಿಸಿದ್ದರು. 2019ರಲ್ಲಿಯೇ ಬಜೆಟ್ ನಲ್ಲಿ ಅನುಮೋದನೆ ಪಡೆದುಕೊಂಡಿದ್ದರೂ ಅದು ಸಾಧ್ಯವಾಗಿರಲಿಲ್ಲ. ಮತ್ತೆ ಈ ವರ್ಷ ಬಜೆಟ್ ನಲ್ಲಿ ಮತ್ತೊಮ್ಮೆ ಮಂಡನೆಯಾಗಿ ಈಗ ಕಾಲೇಜಿಗೆ ಭೂಮಿ ಸ್ವಾಧೀನಪಡೆಸಿಕೊಳ್ಳುವ ಕಾರ್ಯದೊಂದಿಗೆ ಸುಸೂತ್ರವಾಗಿ ನಡೆಯುತ್ತಿರುವುದು ಪಟ್ಟಣದ ನಿವಾಸಿಗಳಿಗೆ ಸಂತಸವನ್ನುಂಟು ಮಾಡಿದೆ’ ಎಂದರು.
ತೋಟಗಾರಿಕೆ ಕಾಲೇಜಿಗೆ 77.33 ಎಕರೆ ಭೂಮಿ ಹಸ್ತಾಂತರ : ಕೃಷಿ ವಿಶ್ವವಿದ್ಯಾಲಯದ ಆಲಮೇಲ ಕೃಷಿ ವಿಸ್ತೀರ್ಣ ಕೇಂದ್ರದ ಅಧೀನದಲ್ಲಿರುವ ಒಟ್ಟು 172 ಎಕರೆ ಜಮೀನಿನಲ್ಲಿ 77ಎಕರೆ 33ಗುಂಟೆ ಜಮೀನನ್ನು ತೋಟಗಾರಿಕೆ ಮಹಾವಿದ್ಯಾಲಯಕ್ಕೆ ನೀಡಿ ಹಸ್ತಾಂತರಿಸಿ ರಾಜ್ಯಪಾಲರು ಇದೇ ಜುಲೈ 6ರಂದು ಆದೇಶ ನೀಡಿದ್ದಾರೆ. ಇಲ್ಲಿ ಕಾಲೇಜಿನ ಕಟ್ಟಡ, ಆಡಳಿತ ಕಚೇರಿ ಸೇರಿದಂತೆ ವಿವಿಧ ವಸತಿನಿಲಯಗಳು ತಲೆ ಎತ್ತಲಿವೆ. ಉಳಿದ 101 ಎಕರೆ ಭೂಮಿಯು ಕೃಷಿ ವಿವಿಯ ವಿಸ್ತರ್ಣ ಕೇಂದ್ರಕ್ಕೆ ಇಟ್ಟುಕೊಳ್ಳಲಾಗಿದೆ.
‘ತೋಟಗಾರಿಕೆ ಕಾಲೇಜಿಗೆ ಭೂಮಿ ಪರಭಾರೆ ಮಾಡಿಸಿಕೊಡುವಲ್ಲಿ ಶಾಸಕ ಅಶೋಕ ಮನಗೂಳಿ ಅವರ ಕಾರ್ಯ ಶ್ಲಾಘನೀಯ. ಚುನಾವಣಾ ಸಂದರ್ಭದಲ್ಲಿ ಅವರು ನೀಡಿದ ಭರವಸೆ ಈಡೇರಿಸಿದ್ದಾರೆ. ಇದು ಆಲಮೇಲ ಭಾಗಕ್ಕೆ ಅವರು ನೀಡಿರುವ ಗ್ಯಾರಂಟಿ ಯೋಜನೆ ಸಾಕಾರಗೊಳಿಸಿದ್ದಾರೆ’ ಎಂದು ಆಲಮೇಲ ಪಟ್ಟಣದ ನಾಗರೀಕ ವೇದಿಕೆಯ ಅಧ್ಯಕ್ಷ ರಮೇಶ ಭಂಟನೂರ ತಿಳಿಸಿದ್ದಾರೆ. ಈ ಮೂಲಕ ಬಹಳ ವರ್ಷಗಳ ಬೇಡಿಕೆ ಈಡೇರಿದೆ ಎಂದು ಹೇಳಿದ್ದಾರೆ.
25 ವಿದ್ಯಾರ್ಥಿಗಳಿಗೆ ಪ್ರವೇಶ: ಮುಖ್ಯಮಂತ್ರಿಗಳು 2024-25ರ ಆಯವ್ಯಯ ಭಾಷಣ ಖಂಡಿಕೆ-49ರಲ್ಲಿ ಪ್ರಸ್ತಾಪಿಸಿದಂತೆ ಆಲಮೇಲದಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪಿಸುವುದಾಗಿ ಹೇಳಲಾಗಿತ್ತು. ಪ್ರಾಧ್ಯಾಪಕರು, ಡೀನ್, ಬೋಧಕೇತರ ಸಿಬ್ಬಂದಿ ಸೇರಿದಂತೆ 126 ಜನರು ಕಾರ್ಯನಿರ್ವಹಿಸಲಿದ್ದು, ಮೂಲ ಸೌಕರ್ಯಗಳ ನಿರ್ಮಾಣ, ಭೂ ಅಭಿವೃದ್ಧಿ ಹಾಗೂ ಸಿಬ್ಬಂದಿ ವೇತನ ಕ್ಕೆ ₹145 ಕೋಟಿ 72 ಲಕ್ಷ ಆರ್ಥಿಕ ಅನುದಾನ ಕೋರಲಾಗಿದೆ.
ಪ್ರಸಕ್ತ ವರ್ಷ ಆಲಮೇಲ ಪಟ್ಟಣದಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. 25 ವಿದ್ಯಾರ್ಥಿ ಸಂಖ್ಯೆಗೆ ಮಿತಿಗೊಳಿಸಿ ತರಗತಿಗಳು ಮಾತ್ರ ಬಾಗಲಕೋಟದ ತೋಟಗಾರಿಕೆ ಆವರಣದಲ್ಲಿ ನಡೆಯಲಿದೆ ಎಂದು ಜುಲೈ 10 ರಂದು ತೋಟಗಾರಿಕೆ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
‘₹50ಲಕ್ಷ ಸಹಾಯಧನ ನೀಡಲಾಗಿದೆ. ಪ್ರಸಕ್ತ ವರ್ಷವೇ ಪ್ರವೇಶ ಪ್ರಕ್ರಿಯೆಗಳು ಆರಂಭವಾಗುತ್ತಿರುವುದು ಸಂತಸ ತಂದಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಶಿವಶರಣ ಗುಂದಗಿ ಹೇಳಿದ್ದಾರೆ.
‘ನಮ್ಮ ಸರ್ಕಾರ ಬಜೆಟ್ ನಲ್ಲಿ ಹೇಳಿದಂತೆಯೇ ನಡೆದುಕೊಂಡಿದೆ. ಇದೇ ವರ್ಷದಿಂದ ತರಗತಿಗಳಿಗೆ ಪ್ರವೇಶ ನೀಡಲಾಗುತ್ತಿದೆ ಮುಂದಿನ ದಿನದಲ್ಲಿ ಆಲಮೇಲ ಅಭಿವೃದ್ದಿ ಪರ್ವ ಆಗಲಿದೆ- ಅಶೋಕ ಎಂ.ಮನಗೂಳಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.