ADVERTISEMENT

ಹೊರ್ತಿ ಜಾನುವಾರ ಜಾತ್ರೆ: ಮಾರುವವರೇ ಎಲ್ಲ, ಕೊಳ್ಳುವವರು ಕಡಿಮೆ

ಕೆ.ಎಸ್.ಈಸರಗೊಂಡ
Published 21 ಡಿಸೆಂಬರ್ 2023, 7:21 IST
Last Updated 21 ಡಿಸೆಂಬರ್ 2023, 7:21 IST
ಹೊರ್ತಿ ಗ್ರಾಮದ ರೇವಣಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜಾನುವಾರು ಪ್ರದರ್ಶನ ಹಾಗೂ ಮಾರಾಟದ ಜಾನುವಾರು ಜಾತ್ರೆಯಲ್ಲಿ ವಿವಿಧೆಡೆಗಳಿಂದ ಬಂದಿರುವ ಜಾನುವಾರುಗಳು
ಹೊರ್ತಿ ಗ್ರಾಮದ ರೇವಣಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜಾನುವಾರು ಪ್ರದರ್ಶನ ಹಾಗೂ ಮಾರಾಟದ ಜಾನುವಾರು ಜಾತ್ರೆಯಲ್ಲಿ ವಿವಿಧೆಡೆಗಳಿಂದ ಬಂದಿರುವ ಜಾನುವಾರುಗಳು   

ಹೊರ್ತಿ: ಗ್ರಾಮದ ರೇವಣಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆರಂಭವಾಗಿರುವ ಜಾನುವಾರು ಪ್ರದರ್ಶನ ಹಾಗೂ ಮಾರಾಟಕ್ಕೆ ಕರ್ನಾಟಕ, ಮಹಾರಾಷ್ಟ್ರದ ವಿವಿಧೆಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳು ಬಂದಿದ್ದು, ಕೊಳ್ಳವವರ ಸಂಖ್ಯೆ ಕ್ಷೀಣವಾಗಿದೆ.

₹ 5 ಸಾವಿರದಿಂದ ₹ 5 ಲಕ್ಷ ಮೊತ್ತ ಬೆಲೆ ಬಾಳುವ ಜೋಡಿ ಎತ್ತು ಮತ್ತು ಹೋರಿಗಳನ್ನು ರೈತರು ಮಾರಾಟಕ್ಕೆ ತಂದಿದ್ದಾರೆ. ಜಾತ್ರೆಗೆ ಬಂದವರು ಜಾನುವಾರುಗಳ ಬೆಲೆ ವಿಚಾರಿಸುತ್ತಾರೆಯೇ ಹೊರತು, ಖರೀದಿಗೆ ಮನಸ್ಸು ಮಾಡುತ್ತಿಲ್ಲ. ಖರೀದಿಗೆ ಬಂದವರು ಅತ್ಯಂತ ಕಡಿಮೆ ಬೆಲೆಗೆ ಹಸುಗಳನ್ನು ಕೇಳುವಂತಾಗಿದೆ.

ಬರದಿಂದ ತತ್ತರಿಸಿರುವ ರೈತರು ರಾಸುಗಳಿಗೆ ನೀರು, ಮೇವು ಒದಗಿಸಲಾಗದೇ ಮಾರಾಟಕ್ಕೆ ತಂದಿದ್ದಾರೆ. ಜಾತ್ರೆ ಡಿ.26ಕ್ಕೆ ಮುಕ್ತಾಯಗೊಳ್ಳಲಿದೆ. ಅಷ್ಟರಲ್ಲಿಯೇ ಬಂದಷ್ಟು ಹಣಕ್ಕೆ ಮಾರಾಟವಾದರೆ ಸಾಕು ಎನ್ನುತ್ತಿದ್ದಾರೆ ರೈತರು. ಊರಿಗೆ ಜಾನುವಾರುಗಳನ್ನು ಮರಳಿ ಒಯ್ದರೇ ಅವುಗಳಿಗೆ ಮೇವು ಎಲ್ಲಿಂದ ತರುವುದು ಎಂಬುದು ರೈತರ ಚಿಂತೆ.

ADVERTISEMENT

ವಿಜಯಪುರ, ಚಡಚಣ, ಆಲಮೇಲ, ಸಿಂದಗಿ ತಿಕೋಟಾ ಇಂಡಿ, ಝಳಕಿದಿಂದ ವಿವಿಧ ತಳಿಯ ಜಾನುವಾರು ಮಾರಾಟಕ್ಕೆ ಬಂದಿವೆ. ಮಹಾರಾಷ್ಟ್ರದ ಸೋಲಾಪೂರ, ಜತ್ತ, ಸಾಂಗ್ಲಿ, ಸಾಂಗೋಲಾ, ಮಂಗಳವೇಡೆ, ಸಾಂಗ್ಲಿ, ಕೋಲ್ಹಾಪೂರ, ಲಾತೂರು, ಅಕ್ಕಲಕೋಟದಿಂದಲೂ ಬಂದಿರುವ ರೈತರು ಹಾಗೂ ಮಧ್ಯವರ್ತಿಗಳು ಜಾತ್ರೆಯಲ್ಲಿಯೇ ಬೀಡು ಬಿಟ್ಟಿದ್ದಾರೆ.

ಬರಗಾಲ ಇರುವುದರಿಂದ ರೈತರು ಕಡಿಮೆ ಬೆಲೆಗೆ ತಮ್ಮ ಜಾನುವಾರು ಮಾರುತ್ತಾರೆ. ಮರಳಿ ಊರಿಗೆ ಒಯ್ಯಲಾರರು ಎಂಬ ಲೆಕ್ಕಾಚಾರದಲ್ಲಿ ಮಧ್ಯವರ್ತಿಗಳು ಇದ್ದಾರೆ.

‘ಇವು ನಮ್ಮ ಕೈ ಬಿಟ್ಟು ಹೋದರೆ ಸಾಕ್ರಿ. ಜೋಪಾನ ಮಾಡಲೂ ಮೇವು ಮತ್ತು ನೀರು ಎಲ್ಲಿಂದ ತರುವುದು. ಹಿಂಡಿ, ಜೋಳದ ಕಣಕಿ, ಗೋವಿನ ಜೋಳದ ಸೊಪ್ಪು ಕೊಳ್ಳಲು ಹಣವಿಲ್ಲ‘ ಎಂದು ಹೊರ್ತಿಯ ರೈತ ಶರಣಬಸು ಡೋಣಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟ ಕಾರಣ ಬೆಳೆಗಳು ಒಣಗಿ ರೈತರು ಸಾಲದ ಸುಳಿಗೆ ಸಿಲುಕಿ ಮೇವು, ನೀರಿನ ಕೊರತೆ ಅನುಭವಿಸುತ್ತಿದ್ದಾರೆ. ಹೊಲದಲ್ಲಿನ ಭಾವಿ, ಬೋರ್‌ವೆಲ್‌ಗಳು ನೀರಿಲ್ಲದೇ ಒಣಗಿ ಬರಿದಾಗಿವೆ’ ಎನ್ನುತ್ತಾರೆ ಹೊರ್ತಿಯ ಮಲ್ಲಪ್ಪ ಮ.ದೇಗಿನಾಳ.

ಹೊರ್ತಿ ಗ್ರಾಮದ ರೇವಣಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜಾನುವಾರು ಪ್ರದರ್ಶನ ಹಾಗೂ ಮಾರಾಟದ ಜಾನುವಾರು ಜಾತ್ರೆಯಲ್ಲಿ ವಿವಿಧೆಡೆಗಳಿಂದ ಬಂದಿರುವ ಜಾನುವಾರುಗಳು 
ಹೊರ್ತಿ ಗ್ರಾಮದ ರೇವಣಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜಾನುವಾರು ಪ್ರದರ್ಶನ ಹಾಗೂ ಮಾರಾಟದ ಜಾನುವಾರು ಜಾತ್ರೆಯಲ್ಲಿ ವಿವಿಧೆಡೆಗಳಿಂದ ಬಂದಿರುವ ಜಾನುವಾರುಗಳು 
ಜಾತ್ರೆಯಲ್ಲಿ ಲಕ್ಷಕ್ಕೂ ಅಧಿಕ ಜಾನುವಾರು  ಬರದಿಂದ ಮೇವು, ನೀರು ಹೊದಿಸುವುದೇ ದುಸ್ತರ ಕೈಗೆ ಬಂದಷ್ಟು ಹಣಕ್ಕೆ ಮಾರಾಟಕ್ಕೆ ಮುಂದಾದ ರೈತರು 
ಕೇಳಿದಷ್ಟು ಬೆಲೆಗೆ ದನಕರುಗಳನ್ನು ಮಾರಾಟ ಮಾಡಿ ನಿಶ್ಚಿಂತೆಯಿಂದ ಮನೆಗೆ ಹೋಗುತ್ತೇವೆ. ಮೇವು ನೀರಿಲ್ಲದೇ ಜಾನುವಾರುಗಳನ್ನು ಸಾಕುವುದು ನಮ್ಮ ಕೈಯಿಂದ ಆಗಲ್ಲ
ಬಂದೇನವಾಜ್‌ ಗೋಡಿಹಾಳ ರೈತ ವಿಜಯಪುರ
ಹೊರ್ತಿ ಜಾನುವಾರು ಜಾತ್ರೆಗೆ ಪ್ರತಿ ವರ್ಷ ಬರುತ್ತೇವೆ ಇಲ್ಲಿ ಹೋರಿ ಕರು ಹಾಗೂ ಆಕಳು ಮತ್ತು ಎತ್ತುಗಳು ಕಡಿಮೆ ಬೆಲೆಗೆ ಸಿಗುತ್ತವೆ. ಒಂದು ವರ್ಷ ಸಾಕಿದರೆ ಹಾಕಿದ ಹಣಕ್ಕೆ ಎರಡು ಪಟ್ಟು ಹಣ ಬರುತ್ತದೆ
ಅಮೋಘಸಿದ್ಧ ಬಿರಾದಾರ  ರೈತ ಗೋಕಾಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.