ವಿಜಯಪುರ: ಸಾಂವಿಧಾನಿಕ ಸಂಸ್ಥೆಗಳಾದ ಇಡಿ, ಐಟಿ, ರಾಜಭವನಗಳನ್ನು ಕೇಂದ್ರ ಬಿಜೆಪಿ ಸರ್ಕಾರ ರಾಜಕೀಯ ಲಾಭಕ್ಕಾಗಿ ದುರುಪಯೋಗ ಪಡಿಸಿಕೊಳ್ಳುವುದನ್ನು ರಾಷ್ಟ್ರಪತಿಗಳು ತಡೆಗಟ್ಟಬೇಕು ಎಂದು ಒತ್ತಾಯಿಸಿ ವಿಜಯಪುರ ನಗರದಲ್ಲಿ ಬುಧವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ ಬಣ)ಯಿಂದ ಅರೆಬೆತ್ತಲೆ ಮೆರವಣಿಗೆ ನಡೆಸಲಾಯಿತು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಗಾಂಧಿ ವೃತ್ತದ ವರೆಗೆ ಅರೆ ಬೆತ್ತಲೆ ಮೆರವಣಿಗೆಯಲ್ಲಿ ತೆರಳಿದ ಡಿಎಸ್‌ಎಸ್ ಮುಖಂಡರು ಮಾನವ ಸರಪಳಿ ರಚಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರು. ಬಳಿಕ ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದರು.
ಸಮಿತಿಯ ರಾಜ್ಯ ಸಂಚಾಲಕ ಡಿ.ಜಿ.ಸಾಗರ ಮಾತನಾಡಿ, ಬಿಜೆಪಿ ಸರ್ಕಾರ ಕೇಂದ್ರಗಳಲ್ಲಿ ಅಧಿಕಾರಕ್ಕೆ ಬಂದ ಬಳಿಕ ದೇಶದ ಅಖಂಡತೆಗೆ ದಕ್ಕೆ ತಂದೊಡ್ಡಲು, ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಅಪಚಾರ ಎಸಗುವ ಕಾರ್ಯದಲ್ಲಿ ನಿರತವಾಗಿದೆ ಎಂದು ಆರೋಪಿಸಿದರು.
ದೇಶದ ಹಲವು ರಾಜ್ಯಗಳಲ್ಲಿ ಬಿಜೆಪಿಯೇತರರ ಪಕ್ಷಗಳ ಸರ್ಕಾರಗಳನ್ನು ಅಸ್ಥಿರಗೊಳಿಸುವ ಹುನ್ನಾರದಲ್ಲಿ ತೊಡಗಿದೆ. ಬೇರೆ ಪಕ್ಷದಿಂದ ಆಯ್ಕೆಗೊಂಡಿರುವ ಶಾಸಕರಿಗೆ ಆಮಿಷವೊಡ್ಡಿ ಅವರ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ, ಇಲ್ಲವೇ ಸಾಂವಿಧಾನಿಕ ಸಂಸ್ಥೆಗಳಾದ ಐಟಿ, ಇಡಿ ಹಾಗೂ ರಾಜಪಾಲರನ್ನು ಬಳಿಸಿಕೊಂಡು ಒತ್ತಡ ಹೇರುವ ಮೂಲಕ ಜನರಿಂದ ಆಯ್ಕೆಗೊಂಡಿರುವ ಸರ್ಕಾರಗಳನ್ನು ಪತನಗೊಳ್ಳಲು ಸಂಚು ರೂಪಿಸಿ, ಹಿಂಬಾಗಿಲಿನಿಂದ ಬಿಜೆಪಿ ಅಧಿಕಾರದ ಗದ್ದಿಗೆಯನ್ನು ಏರುತ್ತಿದೆ ಎಂದು ದೂರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಮುಡಾ ಪ್ರಕರಣವನ್ನು ಬಳಸಿಕೊಳ್ಳಲಾಗುತ್ತಿದೆ. ಕೋಮುವಾದಕ್ಕೆ ಹಾಗೂ ರಾಜ್ಯದಲ್ಲಿ ಬಿಜೆಪಿ ರಾಜಕೀಯಕ್ಕೆ ಸಿದ್ದರಾಮಯ್ಯ ತಡೆಗೋಡೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಡಾ ಎಂಬ ಕೃತಕ ಪ್ರಕರಣ ಹೆಣೆದು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಯತ್ನಿಸಿದೆ ಎಂದು ಆರೋಪಿಸಿದರು.
‘ನೈತಿಕತೆ’ ಎಂಬ ಗೂಟಕ್ಕೆ ಸಿದ್ದರಾಮಯ್ಯ ಅವರನ್ನು ಕಟ್ಟಿ, ಬಲಿ ಹಾಕುವ ರಾಜಕೀಯ ಸಂಚಿನ ವಿರುದ್ಧ ಪ್ರಜಾಪ್ರಭುತ್ವವಾದಿಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ರಾಜಕೀಯ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ವಂಶಪಾರಂಪರ್ಯ ರಾಜಕಾರಣಕ್ಕೆ ಪೂರ್ಣವಿರಾಮ ಹಾಕುವುದಾಗಿ ಹೇಳಿ ಜನರ ವಿಶ್ವಾಸ ಗಳಿಸಿ ಅಧಿಕಾರ ಪಡೆದ ಬಿಜೆಪಿಯು ಭ್ರಷ್ಟಾಚಾರಿ, ಹಗರಣಗಳ ರೂವಾರಿಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣವರ, ದಲಿತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ವೈ.ಸಿ. ಮಯೂರ, ರಮೇಶ ದರಣಾಕರ, ಮಹಾಂತೇಶ ಸಾಸಾಬಾಳ, ಶರಣಗೌಡ ಪಾಟೀಲ, ಅಖಿಲ ಭಾರತೀಯ ವಾಲ್ಮೀಕಿ ಸೇವಾ ಸಂಘದ ಜಿಲ್ಲಾಧ್ಯಕ್ಷ ವಿಜಯ ಕಾಂಬಳೆ, ಅರುಣ ಗವಾರಿ, ರಮೇಶ ನಿಂಬಾಳಕರ, ಬಾಬು ಗುಣಮಿ, ರಾಮಚಂದ್ರ ದೊಡಮನಿ, ಪ್ರಶಾಂತ ತೊರವಿ, ಜೈಭೀಮ ತಳಕೇರಿ, ಜಾನು ಗುಡಿಮನಿ, ಚೇತನ ರಾಯಣ್ಣವರ, ಶಿವರುದ್ರ ಮುಲಿಮನಿ, ಯಮನೂರಿ ಬೆಕ್ಕಿನಾಳ, ನಾಗು ರೆಡ್ಡಿ, ಸೋಮು ಬಡಿಗೇರ, ಮಲಕಪ್ಪ ಹಾದಿಮನಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.