ಆಲಮಟ್ಟಿ: ಈದ್ ಉಲ್ ಫಿತ್ರ್ ಹಿನ್ನೆಲೆಯಲ್ಲಿ ಗುರುವಾರ ಆಲಮಟ್ಟಿಯ ವಿವಿಧ ಉದ್ಯಾನಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು, ರಾಕ್ ಉದ್ಯಾನವಂತೂ ಪ್ರವಾಸಿಗರಿಂದ ತುಂಬಿತ್ತು.
ಪ್ರತಿ ವರ್ಷ ಈದ್ ಉಲ್ ಫಿತ್ರ್ ಹಬ್ಬದ ಮರುದಿನ ಮುಸ್ಲಿಮರು ಆಲಮಟ್ಟಿಯ ವಿವಿಧ ಉದ್ಯಾನಕ್ಕೆ ಭೇಟಿ ನೀಡುವುದು ಹೆಚ್ಚು.
ಬೆಳಿಗ್ಗೆಯಿಂದಲೇ ಕಾರು, ಟಂಟಂ, ಬಸ್ ಹಾಗೂ ರೈಲಿನ ಮೂಲಕ ಆಗಮಿಸಿದ ಸಹಸ್ರಾರು ಪ್ರವಾಸಿಗರು ರಾಕ್ ಉದ್ಯಾನದ ಮುಂದೆ ಟಿಕೆಟ್ ಪಡೆಯಲು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡು ಬಂತು.
ಮಧ್ಯಾಹ್ನದ ನಂತರ ಉದ್ಯಾನ ಗಳಲ್ಲಿ ಜನಜಂಗುಳಿ ಇನ್ನಷ್ಟು ಹೆಚ್ಚಿತು. ಸಂಜೆಯವರೆಗೂ ಜನ ಬರುತ್ತಲೆ ಇದ್ದರು. ಬುತ್ತಿ ಕಟ್ಟಿಕೊಂಡು ಕುಟುಂಬ ಸಮೇತರಾಗಿ ಬಂದು ರಾಕ್ ಉದ್ಯಾನ ಸೇರಿ ನಾನಾ ಕಡೆ ಊಟ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೃಷ್ಣಾ ನದಿಯ ತಟದಲ್ಲಿಯೂ ಜನಜಂಗುಳಿ ಹೆಚ್ಚಿತ್ತು.
ಟಂಟಂ, ಟ್ರಾಕ್ಸ್, ಕಾರ್, ಬೈಕ್, ಮೂಲಕ ಉದ್ಯಾನಕ್ಕೆ ಬರುವವರ ಸಂಖ್ಯೆಯೂ ಹೆಚ್ಚಿದ್ದು, ಅದಕ್ಕಾಗಿ ಹೆಲಿಪ್ಯಾಡ್ ಬಳಿ ಹೆಚ್ಚುವರಿಯಾಗಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಚಕ್ಕುಲಿ, ಐಸ್‌ಕ್ರೀಂ, ನೀರು, ದಿಢೀರ್ ಫೋಟೋ ತೆಗೆಯುವವರ ವ್ಯಾಪಾರ ಜೋರಾಗಿತ್ತು.
ಮಧ್ಯಾಹ್ನ 3 ಗಂಟೆಯವರೆಗೂ ಮೊಘಲ್ ಉದ್ಯಾನ ಬಂದ್ ಮಾಡಿದ್ದರಿಂದ ಪ್ರವಾಸಿಗರು ರಾಕ್ ಉದ್ಯಾನದಲ್ಲಿಯೇ ಹೆಚ್ಚು ಕಾಲ ಕಳೆದರು. ಸಂಜೆಯ ವೇಳೆಗೆ ಮೊಘಲ್ ಉದ್ಯಾನದ ಬಳಿ ಹೆಚ್ಚಾಗಿತ್ತು. ಜನ ಹೆಚ್ಚಿದ್ದರಿಂದ ನಿತ್ಯ ಒಂದು ಪ್ರದರ್ಶನ ನಡೆಯುತ್ತಿದ್ದ ಸಂಗೀತ ಕಾರಂಜಿ ಮೂರು ಪ್ರದರ್ಶನಗಳು ನಡೆದವು.
₹1.12 ಲಕ್ಷ ಸಂಗ್ರಹ: ರಾಕ್ ಉದ್ಯಾನದಲ್ಲಿ ₹ 85 ಸಾವಿರ , ಕೃಷ್ಣಾ ಉದ್ಯಾನ ₹15 ಸಾವಿರ, ಲವಕುಶ ಉದ್ಯಾನ ₹14 ಸಾವಿರ ಸೇರಿ ಒಟ್ಟಾರೇ ₹1.12 ಲಕ್ಷ ಪ್ರವೇಶ ದರದ ಹಣ ಸಂಗ್ರಹಗೊಂಡಿದೆ ಆರ್‌ಎಫ್‌ಒ ಮಹೇಶ ಪಾಟೀಲ ತಿಳಿಸಿದರು. ಇನ್ನೂ ಸಂಗೀತ ಕಾರಂಜಿಯ ಪ್ರವೇಶ ದರ ಸಂಗ್ರಹದ ಮಾಹಿತಿ ದೊರೆತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.