ADVERTISEMENT

ಆಲಮಟ್ಟಿ: ಮೈದೆಳೆಯುತ್ತಿದೆ ಬಯಲು ವಿಜ್ಞಾನ ಪಾರ್ಕ್

ಆಲಮಟ್ಟಿಯ ಮೊಘಲ್ ಉದ್ಯಾನದ ಸಮುಚ್ಛಯದಲ್ಲಿ ನಿರ್ಮಾಣ

ಚಂದ್ರಶೇಖರ ಕೊಳೇಕರ
Published 3 ಜುಲೈ 2021, 19:30 IST
Last Updated 3 ಜುಲೈ 2021, 19:30 IST
ಶಕ್ತಿಯೊಂದಿಗೆ ಕಸರತ್ತು (ಶಕ್ತಿಯ ವಿವಿಧ ನಿಯಮಗಳನ್ನು ತಿಳಿಸುವ ಪ್ರಯೋಗ)
ಶಕ್ತಿಯೊಂದಿಗೆ ಕಸರತ್ತು (ಶಕ್ತಿಯ ವಿವಿಧ ನಿಯಮಗಳನ್ನು ತಿಳಿಸುವ ಪ್ರಯೋಗ)   

ಆಲಮಟ್ಟಿ: ಹಲವು ಉದ್ಯಾನಗಳಿಂದ ಕಂಗೊಳಿಸುತ್ತಿರುವ ಆಲಮಟ್ಟಿಯ ಮೊಘಲ್ ಉದ್ಯಾನದ ಸಮುಚ್ಛಯದಲ್ಲಿ ವಿದ್ಯಾರ್ಥಿ ಹಾಗೂ ಸಾರ್ವಜನಿಕರಿಗೆ ವಿಜ್ಞಾನದ ಕೌಶಲ ಹೆಚ್ಚಲು ಪ್ರಾಯೋಗಿಕ ವಿಜ್ಞಾನ ಪಾರ್ಕ್ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ.

ಸುಮಾರು₹1 ಕೋಟಿ ವೆಚ್ಚದಲ್ಲಿ 1.2 ಎಕರೆ ಪ್ರದೇಶದಲ್ಲಿ ಮೂರು ವಿಭಾಗಗಳಲ್ಲಿ ಈ ಪಾರ್ಕ್ ನಿರ್ಮಿಸಲಾಗಿದೆ. ಗಣಿತ, ಭೌತಶಾಸ್ತ್ರ, ಜೀವಶಾಸ್ತ್ರ, ಭೂಗೋಳದ ಪ್ರಮುಖ ಅಂಶಗಳ ಸುಮಾರು 84 ಪ್ರಾಯೋಗಿಕ ಮಾದರಿಗಳು ಆಕರ್ಷಣೀಯವಾಗಿ ಅಳವಡಿಸಲಾಗಿದ್ದು, ಮಕ್ಕಳಲ್ಲಿ ತೀವ್ರ ಕುತೂಹಲದ ಜತೆ ಹಲವು ಸಂಶಯಗಳಿಗೆ ಉತ್ತರವೂ ದೊರೆಯುತ್ತದೆ.

‘ಆಡುತ್ತಾ ಕಲಿ’ ಎಂಬ ತತ್ವದಡಿ ವಿಜ್ಞಾನದ ಹಲವು ಅಂಶಗಳನ್ನು ಪ್ರತಿಯೊಬ್ಬರೂ ಸರಳವಾಗಿ ತಿಳಿಯುವ ಉದ್ದೇಶದಿಂದ ಈ ಪಾರ್ಕ್ ನಿರ್ಮಿಸಲಾಗಿದೆ. ಆಲಮಟ್ಟಿಗೆ ಭೇಟಿ ನೀಡುವ ಪ್ರವಾಸಿಗರ ಪೈಕಿ ಶಾಲಾ ವಿದ್ಯಾರ್ಥಿಗಳೇ ಅಧಿಕ. ಹೀಗಾಗಿ, ಆ ಮಕ್ಕಳಿಗೆ ಮನೋರಂಜನೆಯ ಜತೆಗೆ ಕಲಿಕೆಯೂ ಆಗಲಿ ಎನ್ನುವ ಉದ್ದೇಶದಿಂದ ಉದ್ಯಾನದಲ್ಲಿಯೇ ವಿಜ್ಞಾನ ಪಾರ್ಕ್ ನಿರ್ಮಿಸಲಾಗುತ್ತಿದೆ ಎನ್ನುತ್ತಾರೆ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಎಚ್. ಸುರೇಶ.‌

ADVERTISEMENT

₹1 ಕೋಟಿ ವೆಚ್ಚ: ಸುಮಾರು ₹ 1 ಕೋಟಿ ವೆಚ್ಚದಲ್ಲಿ ಈ ಪ್ರಾಯೋಗಿಕ ಮಾದರಿಗಳ ಅಳವಡಿಕೆ ನಡೆಯುತ್ತಿದ್ದು, ಬೆಂಗಳೂರಿನ ಗ್ಯಾಂತ್ರೋ ಕಂಪನಿಯು ಇದರ ಅಳವಡಿಕೆ ಕಾರ್ಯದಲ್ಲಿ ತೊಡಗಿದೆ.

ಕ್ಯೂ ಆರ್ ಕೋಡ್: ಸರಳವಾಗಿ ತಿಳಿಯುವ ಹಾಗೆ ಅಳವಡಿಸಿರುವ ಪ್ರತಿ ವಿಜ್ಞಾನ ಚಾಲನಾ ಮಾದರಿಗಳ ಮುಂದೆ ಪ್ರಯೋಗದ ಉದ್ದೇಶ, ತತ್ವ, ಉಪಯೋಗ ಸೇರಿ ನಾನಾ ಮಾಹಿತಿಯನ್ನು ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ನಮೂದಿಸಲಾಗಿದೆ. ಕ್ಯೂ ಆರ್ ಕೋಡ್ ಅಳವಡಿಸಲಾಗಿದ್ದು, ಅದನ್ನು ಸ್ಕ್ಯಾನ್ ಮಾಡಿದರೆ ಆ ಪ್ರಯೋಗದ ಸಂಪೂರ್ಣ ವಿವರವೂ ದೊರೆಯಲಿದೆ ಎನ್ನುತ್ತಾರೆ ಗ್ಯಾಂತ್ರೋ ವಿಜ್ಞಾನ ಉಪಕರಣಗಳ ಸಂಯೋಜಕ ಡಾ ಸುಪ್ರೀತ್.

ಚಾಲನಾ ಮಾದರಿಗಳು: ವಿಶ್ವದ ಪ್ರಮುಖ ದೇಶಗಳಲ್ಲಿ ಈಗ ಆಗಿರುವ ಸಮಯ ಎಷ್ಟು? ಎಂದು ತಿಳಿಯುವ ಪ್ರಯೋಗ, ನ್ಯೂಟನ್ ಹಾಗೂ ಆರ್ಕಿಮಿಡಿಸ್ ತತ್ವಗಳ ಪ್ರಾಯೋಗಿಕ ನಿರೂಪಣೆ, ನೆರಳಿನಿಂದ ಸಮಯ ಗುರುತಿಸುವಿಕೆ, ಮಳೆ ಹಾಗೂ ತೇವಾಂಶದ ಮಾಪನ, ವಿವಿಧ ವಾಹನಗಳು ಹೇಗೆ ಚಲಿಸುತ್ತವೆ ಎಂಬುದರ ಸಂಪೂರ್ಣ ವಿವರಣೆ, ಬೆಳಕಿನ ನಾನಾ ಪ್ರಯೋಗಗಳು, ಪೆರಿಸ್ಕೋಪ್, ಮಸೂರಗಳ ಮಾದರಿಗಳು, ಕನ್ನಡಿಯೊಳಗಿನ ಆಟ, ಪ್ರಚ್ಛನ್ನ ಶಕ್ತಿಯಿಂದ ಚಲನಶಕ್ತಿ ಪ್ರಯೋಗ, ಪೈಥಾಗೋರಸ್ ಪ್ರಮೇಯ, ಸರಳ ಕ್ಯಾಮರಾ, ಗುರುತ್ವಾಕರ್ಷಣೆಯ ಚೆಂಡು, ಪ್ರತಿಧ್ವನಿ, ಕೇಂದ್ರ ತ್ಯಾಗಿ ಶಕ್ತಿ, ಜಲ ವಿದ್ಯುತ್ ಉತ್ಪಾದನೆ, ಸೋಲಾರ್ ವಾಟರ್ ಹೀಟರ್ ನ ಸ್ಕ್ವೇರ್ ವೀಲ್ ಸೈಕಲ್, ಗೇರ್‌ಗಳ ವಿವಿಧ ಮಾದರಿಗಳು, ತ್ರೀ ಡಿ ಪೆಂಡುಲಮ್, ಜಿನಿಟಿಕ್ ಮಾದರಿಗಳು ಸೇರಿ ಹಲವಾರು ಪ್ರಯೋಗಗಳು ಇಲ್ಲಿವೆ.

ಪ್ರತಿಯೊಂದು ಉಪಕರಣಗಳ ಗುಣಮಟ್ಟ ಪರೀಕ್ಷಿಸಲಾಗಿದ್ದು, ಮುಂದಿನ ಒಂದು ವರ್ಷಗಳ ಕಾಲ ಗುತ್ತಿಗೆ ಪಡೆದ ಕಂಪನಿಯ ಮಾರ್ಗದರ್ಶಕರೊಬ್ಬರಿದ್ದು, ಪ್ರತಿಯೊಂದು ಪ್ರಯೋಗದ ವಿವರಣೆಯನ್ನು ನೀಡಲಿದ್ದಾರೆ ಎಂದು ಆಲಮಟ್ಟಿ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಎಚ್. ಸುರೇಶ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.