ADVERTISEMENT

ಪಿಸುಗುಡುವ ಗೋಪುರದಲ್ಲಿ ಮಾರ್ದನಿಸಿದ ‘ಯೋಗ’

ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಯೋಗಕ್ಕಿದೆ: ಭಗವಂತ ಖೂಬಾ

​ಪ್ರಜಾವಾಣಿ ವಾರ್ತೆ
Published 21 ಜೂನ್ 2022, 13:17 IST
Last Updated 21 ಜೂನ್ 2022, 13:17 IST
ವಿಜಯಪುರ ನಗರದ ಗೋಳಗುಮ್ಮಟದ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಎಂಟನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಕಾಲೇಜು ವಿದ್ಯಾರ್ಥಿನಿಯರು ಯೋಗ ಪ್ರದರ್ಶಿಸಿದರು–ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ಗೋಳಗುಮ್ಮಟದ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಎಂಟನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಕಾಲೇಜು ವಿದ್ಯಾರ್ಥಿನಿಯರು ಯೋಗ ಪ್ರದರ್ಶಿಸಿದರು–ಪ್ರಜಾವಾಣಿ ಚಿತ್ರ   

ವಿಜಯಪುರ: ‘ಪಿಸುಗುಡುವ ಗೋಪುರ’ ಎಂದೇ ವಿಶ್ವವಿಖ್ಯಾತವಾಗಿರುವ ಗೋಳಗುಮ್ಮಟ ಆವರಣವು ಮಂಗಳವಾರ ಎಂಟನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಸಾಕ್ಷಿಯಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಆಯುಷ್‌ ಇಲಾಖೆಯ ಸಹಯೋಗದೊಂದಿಗೆ ಏರ್ಪಡಿಸಿದ್ದ ವಿಶ್ವ ಯೋಗ ದಿನಾಚರಣೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಯುವಜನರು, ಜನಪ್ರತಿನಿಧಿಗಳು, ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ವಿವಿಧ ಆಸನ ಪ್ರದರ್ಶನ ಮಾಡಿದರು.

ಶ್ವೇತ ವಸ್ತ್ರಧಾರಿಗಳಾಗಿದ್ದ ಸಹಸ್ರಾರು ಜನರು ಒಂದೆಡೆ ಯೋಗ ಪ್ರದರ್ಶಿಸಿದರೆ, ಇನ್ನೊಂದೆಡೆ ಅಂಜುಮನ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ಯೋಗ ಪ್ರದರ್ಶನ ಮಾಡುವ ಮೂಲಕ ಎಲ್ಲರ ಆಕರ್ಷಣಿಯ ಕೇಂದ್ರ ಬಿಂದುವಾಗಿದ್ದರು.

ADVERTISEMENT

ಮೈಸೂರು ಅರಮನೆ ಆವರಣದಲ್ಲಿ ಪ್ರಧಾನಿ ಮೋದಿ ಅವರು ಪಾಲ್ಗೊಂಡಿದ್ದ ವಿಶ್ವ ಯೋಗ ದಿನಾಚರಣೆಯ ನೇರ ಪ್ರಸಾರ ವೀಕ್ಷಣೆಗೆ ಗುಮ್ಮಟದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಒಗ್ಗೂಡಿಸುವ ಶಕ್ತಿ:ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದಕೇಂದ್ರ ಸಚಿವ ಭಗವಂತ ಖೂಬಾ, ಜಾತಿ, ಧರ್ಮ, ಭಾಷೆ ಮೀರಿ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಯೋಗಕ್ಕಿದೆ ಎಂದು ಹೇಳಿದರು.

ಪ್ರಧಾನಿ ಮೋದಿಯವರು ಇಡೀ ವಿಶ್ವಕ್ಕೆ ಮನವರಿಕೆ ಮಾಡಿಕೊಟ್ಟಿದ್ದರಿಂದ ಯೋಗವನ್ನು ಜೂನ್ 21ರಂದು ವಿಶ್ವದ 190ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. ಇದು ಭಾರತಿಯರಿಗೆ ಹೆಮ್ಮೆಯ ಸಂಗತಿ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ವಿ.ಕತ್ತಿ ಮಾತನಾಡಿ, ಯೋಗವು ವಿಶ್ವಕ್ಕೆ ಭಾರತದ ಕೊಡುಗೆಯಾಗಿದೆ. ಪ್ರತಿದಿನ ಯೊಗ ಮಾಡಿದರೆ ಆರೋಗ್ಯಕ್ಕೆ ಸಹಕಾರಿ ಎಂಬುದನ್ಮು ತೋರಿಸಿ ಕೊಟ್ಟ ದೇಶ ನಮ್ಮದಾಗಿದೆ ಎಂದರು.

ಶಾಸಕ ದೇವಾನಂದ ಚವ್ಹಾಣ ಮಾತನಾಡಿ, ಶಾರೀರಿಕ, ಮಾನಸೀಕ ಆರೋಗ್ಯಕ್ಕೆ ಸಹಕಾರಿಯಾಗುವ ಯೋಗವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡಲ್ಲಿ ವಿಶ್ವ ಯೋಗ ದಿನ ಸಾರ್ಥಕವಾಗಲಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ದೇಶದ 75 ಐತಿಹಾಸಿಕ ತಾಣಗಳಲ್ಲಿ ಯೋಗ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅದರಲ್ಲಿ ಗೋಳಗುಮ್ಮಟವು ಒಂದಾಗಿರುವುದು ನಮ್ಮ ಸೌಭಾಗ್ಯ ಎಂದರು.

ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷರಾದ ವಿಜುಗೌಡ ಎಸ್.ಪಾಟೀಲ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಜಿಲ್ಲಾ ಪೊಲೀಸ್ ವತಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ, ಜಿಲ್ಲಾ ಪಂಚಾಯ್ತಿ ಸಿಇಓ ರಾಹುಲ್ ಶಿಂಧೆ, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಸಿದ್ದಿ, ಡಿವೈಎಸ್‌ಪಿ ಲಕ್ಷ್ಮಿ ನಾರಾಯಣ, ಮಹಾನಗರ ಪಾಲಿಕೆಯ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಜಿಲ್ಲಾ ಆಯುಷ್ ಅಧಿಕಾರಿ ಅನುರಾಧಾ ಎಲ್. ಚಂಚಲಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಪತಂಜಲಿಯ ಯೋಗಪಟು ನಾಗೂರು ಇದ್ದರು.

ಅಗ್ನಿಪಥದಲ್ಲಿ ಆರ್‌ಎಸ್‌ಎಸ್‌ ಅಜೆಂಡಾ ಇಲ್ಲ: ಖೂಬಾ

ವಿಜಯಪುರ: ಅಗ್ನಿಪಥ ಯೋಜನೆಯಲ್ಲಿ ಆರ್‌ಎಸ್‌ಎಸ್‌ ಅಜೆಂಡಾ ಇಲ್ಲ. ದೇಶದ ಹಿತಕ್ಕೆ, ಭದ್ರತೆಗೆ ಆರ್‌ಎಸ್‌ಎಸ್‌ ಶ್ರಮಿಸುತ್ತಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ದೇಶದ ಯುವಜನರನ್ನು ಉತ್ತಮ ಮಾರ್ಗದಲ್ಲಿ ಕೊಂಡೊಯ್ಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಅಗ್ನಿಪಥ ರೂಪಿಸಲಾಗಿದೆ. ಆದರೆ, ಯುವ ಜನರನ್ನು ದಾರಿ ತಪ್ಪಿಸುವ ಕೆಲಸ ವಿರೋಧ ಪಕ್ಷಗಳಿಂದ ನಡೆದಿದೆ ಎಂದರು.

ಪ್ರಧಾನಿ ಮೋದಿ ಅವರ ಮೇಲೆ ಯುವಜನರು ಸಂಪೂರ್ಣ ವಿಶ್ವಾಸ ಇಟ್ಟು ಮುನ್ನೆಡೆಯಬೇಕು. ರಾಜಕಾರಣ ಮಾಡಬಾರದು, ಯುವ ಜನರ ಏಳಿಗೆ, ಭವಿಷ್ಯ, ಭದ್ರ ಬುನಾದಿ ಅಗ್ನಿಪಥದಲ್ಲಿ ಅಡಗಿದೆ ಎಂದು ಸಮರ್ಥಿಸಿಕೊಂಡರು.

‘ಅಗ್ನಿವೀರರನ್ನು ಬಿಜೆಪಿ ಕಚೇರಿ ಕಾವಲಿಗೆ ನೇಮಿಸಿಕೊಳ್ಳಲಾಗುವುದು’ ಎಂಬ ಬಿಜೆಪಿ ಮುಖಂಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಇದು. ಇಂತಹ ಹೇಳಿಕೆಗಳಿಗೆ ಯುವ ಜನರು ಕಿವಿಗೊಡಬಾರದು ಎಂದರು.

ರಾಜ್ಯ ಸೇರಿದಂತೆ ದೇಶದಾದ್ಯಂತ ರಸಗೊಬ್ಬರ ಕೊರತೆಯಾಗದಂತೆ ಅಗತ್ಯ ಕ್ರಮ ವಹಿಸಲಾಗಿದೆ. ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಹಲವು ಧರ್ಮ, ಭಾಷಿಕರನ್ನು ಒಳಗೊಂಡ ಭಾರತದಲ್ಲಿ ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಯೋಗಕ್ಕೆ ಇದೆ

– ಭಗವಂತ ಖೂಬಾ,ಕೇಂದ್ರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.