ವಿಜಯನಗರ (ಹೊಸಪೇಟೆ): ನೂತನ ವಿಜಯನಗರ ಜಿಲ್ಲೆಯ ವಿಶೇಷ ಅಧಿಕಾರಿಯಾಗಿ ನೇಮಕಗೊಂಡಿರುವ ಪಿ. ಅನಿರುದ್ಧ ಶ್ರವಣ್ ಅವರ ತಾತ್ಕಾಲಿಕ ಕಚೇರಿ ನಗರದ ಅಮರಾವತಿ ಸರ್ಕಾರಿ ಅತಿಥಿ ಗೃಹದಲ್ಲಿ ಕಾರ್ಯಾರಂಭ ಮಾಡುವುದು ಬಹುತೇಕ ಖಚಿತವಾಗಿದೆ.
ಅತಿಥಿ ಗೃಹದ ಮೊದಲ ಮಹಡಿಯ ಮೂರು ಮತ್ತು ನಾಲ್ಕನೇ ಸಂಖ್ಯೆಯ ಕೊಠಡಿಗಳನ್ನು ತಾತ್ಕಾಲಿಕವಾಗಿ ಕಚೇರಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಗೊತ್ತಾಗಿದೆ. ನಗರದ ತುಂಗಭದ್ರಾ ಸ್ಟೀಲ್ಸ್ ಪ್ರಾಡಕ್ಟ್ಸ್‌ನಲ್ಲಿ (ಟಿಎಸ್‌ಪಿ) ಜಿಲ್ಲಾಧಿಕಾರಿ ಕಚೇರಿ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಅಲ್ಲಿ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದೆ. ಹಳೆಯ ಟಿಎಸ್‌ಪಿ ಕಟ್ಟಡಕ್ಕೆ ಬಣ್ಣ ಬಳಿದು ಹೊಸ ಸ್ವರೂಪ ಕೊಡಲಾಗಿದೆ. ಆದರೆ, ಒಳಭಾಗದಲ್ಲಿ ನವೀಕರಣ ಕೆಲಸ ಇನ್ನಷ್ಟೇ ನಡೆಯಬೇಕಿದೆ.
ಕಟ್ಟಡ ವಿಶಾಲವಾಗಿರುವುದರಿಂದ ನವೀಕರಣಕ್ಕೆ ಅನೇಕ ದಿನಗಳು ಹಿಡಿಯುವ ಸಾಧ್ಯತೆ ಇದೆ. ಕಚೇರಿ ಸಂಪೂರ್ಣವಾಗಿ ಸಿದ್ಧಗೊಳ್ಳುವವರೆಗೆ ಅಮರಾವತಿ ಅತಿಥಿ ಗೃಹದಿಂದಲೇ ಕಾರ್ಯನಿರ್ವಹಿಸಲು ವಿಶೇಷ ಅಧಿಕಾರಿ ತೀರ್ಮಾನಿಸಿದ್ದಾರೆ ಎಂದು ಗೊತ್ತಾಗಿದೆ.
ಅತಿಥಿ ಗೃಹವೇಕೇ ಆಯ್ಕೆ?
ಅಮರಾವತಿ ಅತಿಥಿ ಗೃಹ ನಗರದ ಮಧ್ಯ ಭಾಗದಲ್ಲಿದೆ. ಜನಸಾಮಾನ್ಯರು ದೂರು, ದುಮ್ಮಾನ ಸಲ್ಲಿಸಲು, ಅಧಿಕಾರಿಗಳು ಬಂದು ಹೋಗಲು ಅನುಕೂಲವಿದೆ. ಹೃದಯ ಭಾಗದಲ್ಲಿದ್ದರೂ ಪ್ರಶಾಂತ ವಾತಾವರಣ ಇದೆ. ಅಧಿಕಾರಿಗಳ ಸಭೆ ನಡೆಸಲು ವಿಶಾಲ ಸುಸಜ್ಜಿತವಾದ ಸಭಾಂಗಣ ಇದೆ. ಇಷ್ಟೆಲ್ಲ ಸೌಕರ್ಯ ಇರುವುದರಿಂದ ತಾತ್ಕಾಲಿಕ ಕಚೇರಿಗೆ ಈ ಸ್ಥಳ ಆಯ್ಕೆ ಮಾಡಿಕೊಳ್ಳಲು ಮುಖ್ಯ ಕಾರಣ ಎನ್ನಲಾಗಿದೆ.
ಕಚೇರಿ ಹುಡುಕಾಟಕ್ಕೆ ಸರ್ಕಸ್
ವಿಜಯನಗರದಲ್ಲಿ ಜಿಲ್ಲಾಮಟ್ಟದ ಎಲ್ಲ ಕಚೇರಿಗಳನ್ನು ತ್ವರಿತವಾಗಿ ಆರಂಭಿಸಲು ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಸಂಬಂಧ ಈಗಾಗಲೇ ವಿಶೇಷ ಅಧಿಕಾರಿ ಅನಿರುದ್ಧ ಶ್ರವಣ್ ಅವರು ವಿಜಯನಗರದ ಪ್ರಭಾರ ಅಧಿಕಾರಿಗಳೊಂದಿಗೆ ಒಂದು ಸುತ್ತಿನ ಸಭೆ ನಡೆಸಿದ್ದಾರೆ.
ಯಾವ ತಾಲ್ಲೂಕು ಕಚೇರಿಗಳಲ್ಲಿ ಸ್ಥಳಾವಕಾಶ ಇದೆಯೋ ಅಂತಹ ಕಡೆಗಳಲ್ಲಿ ಕೆಲ ಇಲಾಖೆಯ ಅಧಿಕಾರಿಗಳಿಗೆ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಇನ್ನು, ಸಂಪೂರ್ಣವಾಗಿ ಹೊಸದಾಗಿ ಆರಂಭಿಸಬೇಕಾದ ಕಚೇರಿಗಳಿಗೆ ಹುಡುಕಾಟ ಆರಂಭಗೊಂಡಿದೆ.
ಕಂದಾಯ ಇಲಾಖೆ, ನಗರಸಭೆಯ ಅಧಿಕಾರಿಗಳು ಕಚೇರಿಯ ಹುಡುಕಾಟದಲ್ಲಿ ನಿರತರಾಗಿದ್ದಾರೆ. ವಿಶಾಲವಾದ ವಾಣಿಜ್ಯ ಸಂಕೀರ್ಣ, ಸಮುದಾಯ ಭವನ, ಅಗತ್ಯ ಬಿದ್ದರೆ ನಗರದ ಮಧ್ಯ ಭಾಗದಲ್ಲಿರುವ ಖಾಲಿ ನಿವೇಶನಗಳನ್ನು ಬಾಡಿಗೆಗೆ ಪಡೆದುಕೊಂಡು ತಾತ್ಕಾಲಿಕವಾಗಿ ಕಚೇರಿ ಆರಂಭಿಸಲು ತೀರ್ಮಾನಿಸಲಾಗಿದೆ.
ಅಧಿಕೃತವಾಗಿ ಜಿಲ್ಲೆ ಅಸ್ತಿತ್ವಕ್ಕೆ ಬಂದಿರುವುದರಿಂದ ಸಾರ್ವಜನಿಕರ ಎಲ್ಲ ರೀತಿಯ ಕೆಲಸಗಳು ಹೊಸ ಜಿಲ್ಲಾ ಕೇಂದ್ರವಾದ ಹೊಸಪೇಟೆಯಲ್ಲೇ ಆಗುವಂತೆ ನೋಡಿಕೊಳ್ಳುವ ಉದ್ದೇಶದಿಂದ ಶೀಘ್ರದಲ್ಲಿ ಕಚೇರಿ ಸ್ಥಾಪಿಸುವುದರ ಹಿಂದಿನ ಮುಖ್ಯ ಉದ್ದೇಶವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.