ಆಲಮಟ್ಟಿ: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಅಮೃತ ಭಾರತ ರೈಲು ನಿಲ್ದಾಣಗಳ ಯೋಜನೆಯಲ್ಲಿ ರಾಜ್ಯದ 52 ನಿಲ್ದಾಣಗಳಲ್ಲಿ ಆಲಮಟ್ಟಿ ರೈಲು ನಿಲ್ದಾಣವೂ ಆಯ್ಕೆಯಾಗಿದೆ.
ಪ್ರವಾಸಿ ತಾಣವಾಗಿರುವ ಆಲಮಟ್ಟಿಯ ರೈಲು ನಿಲ್ಧಾಣದ ಅಭಿವೃದ್ಧಿಗೆ ಇದು ಸಹಕಾರಿಯಾಗಲಿದೆ.
‘ರೈಲು ನಿಲ್ದಾಣಗಳನ್ನು ಪಾರಂಪರಿಕವಾಗಿ ಅಭಿವೃದ್ಧಿಗೊಳಿಸುವುದರ ಜತೆ ಪ್ರಯಾಣಿಕ ಸ್ನೇಹಿ ನಿಲ್ದಾಣವಾಗಲು ಎಲ್ಲ ರೀತಿಯ ಮೂಲಭೂತ ಸೌಕರ್ಯ ಒದಗಿಸುವ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೊಂಡು ನಿಲ್ದಾಣಗಳನ್ನು ಅಭಿವೃದ್ಧಿಗೊಳಿಸಲಾಗುವುದು’ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಅನಿಶ್ ಹೆಗಡೆ ತಿಳಿಸಿದ್ದಾರೆ.
’ಫ್ಲಾಟ್ ಫಾರ್ಮ್ ಉದ್ದವನ್ನು ವಿಸ್ತರಿಸುವುದು, ಹೆಚ್ಚುವರಿ ಫ್ಲಾಟ್ ಫಾರ್ಮ್ ನಿರ್ಮಿಸಿ, ವಿಸ್ತರಿಸುವುದು, ಸುಧಾರಿತ ಬೆಳಕು ವ್ಯವಸ್ಥೆ, ವಿಶಾಲ ಪಾದಚಾರಿ ಮಾರ್ಗ ನಿರ್ಮಾಣ ಸೇರಿ ನಾನಾ ಸೌಕರ್ಯ ಕಲ್ಪಿಸಲಾಗುತ್ತದೆ. ಒಟ್ಟಾರೇ ನಿಲ್ದಾಣವನ್ನು ಮೇಲ್ದರ್ಜೇಗೇರಿಸಲಾಗುವುದು’ ಎಂದು ಅವರು ತಿಳಿಸಿದರು.
2024 ಕ್ಕೆ ಪೂರ್ಣ:
ಗದಗ-ಹುಟಗಿ ಮಾರ್ಗದ ಮಧ್ಯ ಬರುವ ಆಲಮಟ್ಟಿ ಮತ್ತು ಬಾಗಲಕೋಟೆ ನಡುವಿನ 35 ಕಿ.ಮೀ ದ್ವಿಪಥಗೊಳಿಸುವ ಕಾರ್ಯ ಬಹುತೇಕ 2024ರ ಮಾರ್ಚ್‌ಗೆ ಪೂರ್ಣಗೊಳ್ಳಲಿದೆ ಎಂದು ಅನಿಶ್ ಹೆಗಡೆ ತಿಳಿಸಿದ್ದಾರೆ.
ಆಲಮಟ್ಟಿಯಿಂದ ಸೀತಿಮನಿ ಮಧ್ಯೆ ಆಲಮಟ್ಟಿ ಜಲಾಶಯದ ಎದುರು ಕೃಷ್ಣಾ ನದಿಗೆ ಅಡ್ಡಲಾಗಿ ಮತ್ತೊಂದು ರೈಲು ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ.
ಬಾಗಲಕೋಟೆ ಮತ್ತು ಮುಗಳೊಳ್ಳಿ ಮಧ್ಯೆ ಕೃಷ್ಣಾ ನದಿ ಹಿನ್ನೀರಿನ ಘಟಪ್ರಭಾ ನದಿಗೆ ರೈಲ್ವೆ ಸೇತುವೆ ನಿರ್ಮಾಣಕ್ಕಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಸೇತುವೆ ಪೂರ್ಣಗೊಂಡರೇ ಆಲಮಟ್ಟಿ-ಬಾಗಲಕೋಟೆ-ಗದಗವರೆಗೂ ದ್ವಿಪಥ ರೈಲು ಪಥ ನಿರ್ಮಾಣ ಪೂರ್ಣಗೊಂಡಂತಾಗುತ್ತದೆ. ಬಾಗಲಕೋಟೆಯಿಂದ ಗುಳೇದಗುಡ್ಡವರೆಗೆ ಜೋಡಿ ರೈಲು ಮಾರ್ಗ್ ಜೂನ್ 2023 ಕ್ಕೆ ಪೂರ್ಣಗೊಳ್ಳಲಿದೆ ಎಂದು ಹುಬ್ಬಳ್ಳಿ ವಿಭಾಗೀಯ ಸಂಪರ್ಕಾಧಿಕಾರಿ ಪ್ರಾಣೇಶ ಕವಲಗಿ.
***
ಅಮೃತ ಭಾರತ ಯೋಜನೆಯಡಿ ಆಲಮಟ್ಟಿ ಆಯ್ಕೆಯಾಗಿದ್ದು, ಖುಷಿ ತಂದಿದೆ. ಆಲಮಟ್ಟಿಯ ಫ್ಲಾಟ್ ಫಾರ್ಮ್ ಉದ್ದಗೊಳಿಸುವಿಕೆ, ಹೊಸ ಫ್ಲಾಟ್ ಫಾರ್ಮ್ ನಿರ್ಮಿಸುವಿಕೆ, ಎಲ್ಲಾ ಫ್ಲಾಟ್ ಫಾರ್ಮ್‌ಗಳ ಪೂರ್ತಿ ಮೇಲ್ಛಾವಣಿ ನಿರ್ಮಿಸಬೇಕು
–ದಾಮೋದರ ರಾಠಿ
ಸದಸ್ಯ, ರೈಲು ಬಳಕೆದಾರರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.