ಆಲಮಟ್ಟಿ: ಇಲ್ಲಿನ 77 ಎಕರೆ ಉದ್ಯಾನಗಳ ಸಮುಚ್ಛಯದ ಹತ್ತಿರ (ಹೆಲಿಪ್ಯಾಡ್ ಹಿಂಬದಿ) ನಿರ್ಮಾಣಗೊಳ್ಳುತ್ತಿರುವ ಉತ್ತರ ಕರ್ನಾಟಕದ ದೊಡ್ಡ ಅಮ್ಯೂಸ್ ಮೆಂಟ್ ವಾಟರ್ ಪಾರ್ಕ್ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು, ಕಾಮಗಾರಿ ಇನ್ನೂ ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ.
ಆದರೆ, ಸಾಕಷ್ಟು ಬಾರಿ ಪರೀಕ್ಷೆ ಆರಂಭಕ್ಕೆ ಸಿದ್ಧತೆಯ ಅಗತ್ಯವಿದ್ದು, ಇದೇ ವರ್ಷದ ಜುಲೈ ಹೊತ್ತಿಗೆ ಸಾರ್ವಜನಿಕರಿಗೆ ಮುಕ್ತವಾಗುವ ನಿರೀಕ್ಷೆ ಹೆಚ್ಚಿದೆ. ಕಾಮಗಾರಿ ಆರಂಭಗೊಂಡು ಒಂದೂವರೆ ವರ್ಷ ಕಳೆದಿದೆ. ಇದೇ ಬೇಸಿಗೆಯಲ್ಲಿ ಉದ್ಘಾಟನೆಯಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಜನರ ನಿರೀಕ್ಷೆ ಹುಸಿಯಾಗಿದೆ.
ಕಾಮಗಾರಿ ನಡೆಯುವ ಸ್ಥಳದಲ್ಲಿ ಕಪ್ಪು ಎರೆ ಮಣ್ಣು ಇದ್ದು, ಮಳೆಗಾಲದಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಅಡೆತಡೆಯಾಗಿತ್ತು. ಇನ್ನೂ ವಾಟರ್ ಪಾರ್ಕ್ ನಿರ್ಮಾಣ ಕಾರ್ಯವೂ ಇಲ್ಲಿನ ಅಧಿಕಾರಿಗಳಿಗೆ ಹೊಸತು. ಹೀಗಾಗಿ ಒಂದೊಂದೇ ವಿಷಯಗಳನ್ನು ನಿರ್ಧರಿಸಿ ಕಾರ್ಯಗತಗೊಳಿಸಲಾಗುತ್ತಿದೆ. ಇದರಿಂದಾಗಿ ಕಾಮಗಾರಿ ತಡವಾಗಿದೆ ಎನ್ನಲಾಗಿದೆ. ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರವೂ ಇನ್ನೂ ಸಾಕಷ್ಟು ಸಿದ್ಧತೆ ಕೈಗೊಳ್ಳಬೇಕಿದೆ. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆ ನಡೆಸಬೇಕಿದೆ. ಹೀಗಾಗಿ ಜುಲೈ ಹೊತ್ತಿಗೆ ಸಾರ್ವಜನಿಕರಿಗೆ ಮುಕ್ತವಾಗುವ ನಿರೀಕ್ಷೆ ಹೆಚ್ಚಿದೆ.
₹ 10 ಕೋಟಿ ವೆಚ್ಚ:
₹ 10 ಕೋಟಿ ವೆಚ್ಚದಲ್ಲಿ 2.5 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಅಮ್ಯೂಸ್ ಮೆಂಟ್ ಪಾರ್ಕ್ ಹಲವಾರು ವಿಭಾಗಗಳನ್ನು ಹೊಂದಿದೆ.
ಸಿವಿಲ್ ಕಾಮಗಾರಿಗಳಿಗೆ ₹5 ಕೋಟಿ, ನಾನಾ ರೀತಿಯ ಸ್ಲೈಡಿಂಗ್ ಉಪಕರಣಗಳನ್ನು ಅಳವಡಿಸಲು ₹ 5 ಕೋಟಿ ಕಾಮಗಾರಿ ಅಂತಿಮ ಹಂತದಲ್ಲಿದೆ.
ವಿಶೇಷತೆ:
ಚಿಕ್ಕಮಕ್ಕಳಿಗೆ, ಕುಟುಂಬದವರಿಗೆ, ಪುರುಷರಿಗೆ, ಮಹಿಳೆಯರಿಗೆ, ಎಲ್ಲರಿಗೆ ಹೀಗೆ ಐದು ವಿಭಾಗಗಳಲ್ಲಿ ಸ್ಲೈಡಿಂಗ್ ಅಳವಡಿಸುವ ಕಾರ್ಯ ನಡೆದಿದೆ. ನಾನಾ ರೀತಿಯ ಜಲಕ್ರೀಡೆಗಳ ಮೈದಾನ ನಿರ್ಮಾಣ ಹಾಗೂ ಸ್ಲೈಡಿಂಗ್ ಅಳವಡಿಕೆಯೂ ನಡೆದಿದೆ. ಮಳೆ ರೀತಿಯ ವಾಟರ್ ರೇನ್ ಕೂಡಾ ಇದ್ದು, ವೇವ್ ಪಾಂಡ್, ಲೇಜಿ ರಿವರ್, ವಾಟರ್ ಸ್ಲೈಡ್ಸ್ ಗಳಿವೆ.
ಐದು ರೀತಿಯ ಪಾಂಡ್ ನಿರ್ಮಿಸಲಾಗಿದ್ದು, ಅದರೊಳಗೆ ಟ್ಯಾಂಕ್ ನಿರ್ಮಿಸಲಾಗಿದೆ. ಪಾಂಡ್‌ನೊಳಗೆ ಉಪಯೋಗಿಸಿದ ನೀರು ಮತ್ತೇ ಫಿಲ್ಟರ್ ಆಗಿ, ಅದೇ ನೀರು ಮತ್ತೇ ಪಾಂಡ್‌ಗೆ ಬರುವಂತೆ ವ್ಯವಸ್ಥೆ ಮಾಡಲಾಗಿದೆ. ನೀರಿನ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
9 ಮೀ. ಎತ್ತರದಿಂದ ಸ್ಲೈಡಿಂಗ್:
ಸುಮಾರು 9 ಮೀ. ಎತ್ತರದಿಂದ ನೀರಿನೊಂದಿಗೆ ಜಾರುವ 150 ಮೀಟರ್ ಉದ್ದದ ಸ್ಲೈಡಿಂಗ್ ನಿರ್ಮಿಸಲಾಗುತ್ತಿದ್ದು, ಇದು ಸಾಹಸಮಯ ಇಷ್ಟಪಡುವವರಿಗೆ ಮಾತ್ರ. ಇನ್ನೂ 6 ಮೀಟರ್ ಎತ್ತರದ 90 ಮೀಟರ್ ಉದ್ದದ ಸ್ಲೈಡಿಂಗ್ಸ್ ಗಳು ಎರಡು ಇವೆ. ಇನ್ನೊಂದು ಎಲ್ಲ ವರ್ಗದವರೂ ಆಡಲು ಯಾವುದೇ ಅಪಾಯವಿಲ್ಲದೇ ಆಡುವ ವಾಟರ್ ಪಾರ್ಕ್ ನ್ನು ನಿರ್ಮಿಸಲಾಗುತ್ತಿದೆ. ಒಟ್ಟಾರೇ, ಪ್ರವಾಸಿಗರ ವಯಸ್ಸು, ಅವರ ಅಭಿರುಚಿಗೆ ತಕ್ಕಂತೆ ಎಲ್ಲರೂ ಆಡಬಹುದಾದ ಜಲಕ್ರೀಡೆಗಳ ಸ್ಲೈಡಿಂಗ್ಸ್ ನಿರ್ಮಿಸಲಾಗುತ್ತಿದೆ.
ಸ್ನಾನಗೃಹಗಳು:
ಇನ್ನೂ ವಾಟರ್ ಪಾರ್ಕ್ ಗೆ ಪ್ರವೇಶದ್ವಾರ, ಪ್ರತೀಕ್ಷಣಾಲಯ, ಟಿಕೆಟ್ ಕೌಂಟರ್, ಲಾಕರ್ ಕೊಠಡಿ, ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಸ್ನಾನ ಗೃಹಗಳು (ಷವರ್), ಶೌಚಾಲಯಗಳು, ಕಾಫಿಟೇರಿಯಾ (ಕ್ಯಾಂಟಿನ್), ಪ್ರಾಥಮಿಕ ಚಿಕಿತ್ಸಾ ಕೇಂದ್ರದ ಕಟ್ಟಡ ನಿರ್ಮಾಣವೂ ಅಂತಿಮ ಹಂತದಲ್ಲಿವೆ.
ಸವಾಲು:
ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣದ ನಂತರ, ನಿರ್ವಹಣೆ ಕಷ್ಟಕರವಾಗಲಿದೆ. ಪ್ರವಾಸಿಗರ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಬೇಕಿದೆ. ಮೇಲ್ವಿಚಾರಣೆಗೆ ನುರಿತ ತಂತ್ರಜ್ಞರ ಅಗತ್ಯವಿದೆ. ಖಾಸಗಿಯವರೆಗೆ ವಹಿಸುವ ಸಾಧ್ಯತೆ ದಟ್ಟವಾಗಿದೆ.
ಕಾಮಗಾರಿ ಭರದಿಂದ ಸಾಗಿದ್ದು, ಬಹುತೇಕ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಸಾರ್ವಜನಿಕರಿಗೆ ಪ್ರವೇಶಕ್ಕೆ ಮುಕ್ತಗೊಳಿಸುವುದನ್ನು ನಂತರ ನಿರ್ಧರಿಸಲಾಗುವುದು
–ಎಚ್.ಸುರೇಶ, ಮುಖ್ಯ ಎಂಜಿನಿಯರ್, ಅಣೆಕಟ್ಟು ವಲಯ, ಆಲಮಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.