ADVERTISEMENT

ಅಂಗನವಾಡಿ, ಅಕ್ಷರ ದಾಸೋಹ ನೌಕರರ ಪ್ರತಿಭಟನೆ: ಸಂಸದ ಜಿಗಜಿಣಗಿ ಕಚೇರಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2024, 16:34 IST
Last Updated 23 ಜನವರಿ 2024, 16:34 IST
ವಿಜಯಪುರ ನಗರದಲ್ಲಿರುವ ಸಂಸದ ರಮೇಶ ಜಿಗಜಿಣಗಿ ಅವರ ಕಚೇರಿಗೆ ಮಂಗಳವಾರ ಅಂಗನವಾಡಿ ಮತ್ತು ಅಕ್ಷರ ದಾಸೋಹ ನೌಕರರು  ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು
ವಿಜಯಪುರ ನಗರದಲ್ಲಿರುವ ಸಂಸದ ರಮೇಶ ಜಿಗಜಿಣಗಿ ಅವರ ಕಚೇರಿಗೆ ಮಂಗಳವಾರ ಅಂಗನವಾಡಿ ಮತ್ತು ಅಕ್ಷರ ದಾಸೋಹ ನೌಕರರು  ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು   

ವಿಜಯಪುರ: ಮುಂಬರುವ ಬಜೆಟ್‌ನಲ್ಲಿ ಐ.ಸಿ.ಡಿ.ಎಸ್.ಗೆ ಅನುದಾನ ಹೆಚ್ಚಳ ಮತ್ತು ಕನಿಷ್ಠ ವೇತನವನ್ನು ಘೋಷಿಸುವಂತೆ ಒತ್ತಾಯಿಸಿ ಸಂಸದ ರಮೇಶ ಜಿಗಜಿಣಗಿ ಅವರ ಕಚೇರಿಗೆ ಮುತ್ತಿಗೆ ಹಾಕಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಮತ್ತು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಸರ್ಕಾರ ಅಂಗನವಾಡಿ ನೌಕರರ ಸಂಘ ಜಿಲ್ಲಾ ಘಟಕದ ಅಧ್ಯಕ್ಷೆ ಸುನಂದಾ ನಾಯಕ ಮಾತನಾಡಿ, ಆಹಾರ ಆರೋಗ್ಯ ಶಿಕ್ಷಣಕ್ಕಾಗಿರುವ ಯೋಜನೆಗಳಾದ ಐ.ಸಿ.ಡಿ.ಎಸ್., ಎಂ.ಡಿ.ಎಂ., ಎನ್.ಎಚ್.ಎಂ., ಐ.ಸಿ.ಪಿ.ಎಸ್ ಮತ್ತು ಎಸ್.ಎಸ್.ಎ ಎಂ., ಎನ್.ಆರ್.ಇ.ಜಿ. ಮುಂತಾದ ಯೋಜನೆಗಳನ್ನು ಕಾಯಂ ಮಾಡಬೇಕು ಎಂದು ಒತ್ತಾಯಿಸಿದರು.

ಭಾರತೀಯ ಕಾರ್ಮಿಕ ಸಮ್ಮೇಳನ ಐ.ಎಲ್.ಸಿ. ಶಿಫಾರಸಿನಂತೆ ಈ ಯೋಜನೆಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿ ಸೇರಿದಂತೆ 1 ಕೋಟಿ ನೌಕರರಿಗೆ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯಗಳನ್ನು ಕೊಟ್ಟು ನೌಕರರು ಎಂದು ಪರಿಗಣಿಸಬೇಕು ಎಂದು ಆಗ್ರಹಿಸಿದರು.

ADVERTISEMENT

3 ರಿಂದ 6 ವರ್ಷ ಒಳಗಿನ ಮಕ್ಕಳಿಗೆ ಉಚಿತ ಕಡ್ಡಾಯ ಮತ್ತು ಸಾರ್ವತ್ರಿಕವಾಗಿ ಪೂರ್ವಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿ ಕೇಂದ್ರದಲ್ಲಿ ಕೊಡಲು ಕಾನೂನು ರೂಪಿಸಬೇಕು. ಎನ್.ಇ.ಪಿ. ನಿಲ್ಲಿಸಬೇಕು. ಬಿಸಿಯೂಟ ನೌಕರರಿಗೆ ಆಶಾ ಮತ್ತು ಇತರೆ ಸಿಬ್ಬಂದಿಗೆ ₹ 31 ಸಾವಿರ ಕನಿಷ್ಠ ವೇತನ, ಕನಿಷ್ಠ ₹ 10 ಸಾವಿರ ಪಿಂಚಣಿ ಕೊಡಬೇಕು ಎಂದರು.

ಸಿಐಟಿಯು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ ಮಾತನಾಡಿ, ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭಿಸಿರುವ ಎಲ್‌ಕೆಜಿ, ಯುಕೆಜಿ ನಿಲ್ಲಿಸಿ ಅಂಗನವಾಡಿ ಕೇಂದ್ರಗಳಲ್ಲಿಯೇ ಈ ಶಿಕ್ಷಣ ಕೊಡಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಠಿಕ ಆಹಾರ, ಪೂರ್ವ ಪ್ರಾಥಮಿಕ ಶಿಕ್ಷಣ ಗರ್ಭಿಣಿ-ಬಾಣಂತಿಯರ ಆರೈಕೆ ಹೊರತುಪಡಿಸಿ ಉಳಿದ ಕೆಲಸಗಳನ್ನು ನಿರ್ಭಂಧಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯಗಳನ್ನು ನೀಡಬೇಕು. ಖಾಲಿ ಹುದ್ದೆಗಳಿಗೆ 3 ತಿಂಗಳೊಳಗೆ ನೇಮಕಾತಿಯಾಗಬೇಕು, ಇಲ್ಲದಿದ್ದರೆ ಹೆಚ್ಚುವರಿ ವೇತನ ಕೊಡಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಭಾರತಿ ವಾಲಿ, ಸುರೇಖಾ ರಜಪೂತ, ಅಶ್ವಿನಿ ತಳವಾರ, ಪ್ರತಿಭಾ ಕುರಡೆ, ಸುವರ್ಣಾ ಹಲಗಣಿ, ಸರಸ್ವತಿ ಮಠ, ಶೋಭಾ ಕಬಾಡೆ, ಗಿರಿಜಾ ಸಕ್ರಿ, ಅಣ್ಣಾರಾಯ ಈಳಗೇರ,  ಗೀತಾ ಭಜಂತ್ರಿ, ಶೈಲಾ ಕಟ್ಟಿ, ಮುತ್ತವ್ವ ಹೊಸಕೋಟಿ, ಜಯಶ್ರೀ ಪೂಜಾರಿ, ಸುರೇಖಾ ಬೀಳಗಿ, ಕಾಳಮ್ಮ ಬಡಿಗೇರ, ಸುಮಂಗಲಾ ಆನಂದಶೆಟ್ಟಿ, ಸುವರ್ಣಾ ರಾಠೋಡ, ಬಿಸ್ಮಿಲ್ಲಾ ಇನಾಮದಾರ, ಸುರೇಖಾ ವಾಗಮೊರೆ, ಭಾರತಿ ಮಠಪತಿ, ವಿಜಯಲಕ್ಷ್ಮೀ ಬಾಬರ, ಸುಜಾತಾ ಬೆಂಬೊಳೆ ಪಾಲ್ಗೊಂಡಿದ್ದರು.

₹ 31 ಸಾವಿರ ಕನಿಷ್ಠ ವೇತನ, ಕನಿಷ್ಠ ₹ 10 ಸಾವಿರ ಪಿಂಚಣಿ ನೀಡಿ ಎಲ್‌ಕೆಜಿ, ಯುಕೆಜಿ ನಿಲ್ಲಿಸಿ ಅಂಗನವಾಡಿ ಕೇಂದ್ರಗಳಲ್ಲಿಯೇ ಈ ಶಿಕ್ಷಣ ಕೊಡಿಸಿ ಖಾಲಿ ಹುದ್ದೆಗಳಿಗೆ 3 ತಿಂಗಳೊಳಗೆ ನೇಮಕಾತಿ ಮಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.