ಇಂಡಿ: ತಾಲ್ಲೂಕಿನಲ್ಲಿ ಬರದಿಂದಾಗಿ ಮೇವಿನ ವ್ಯವಸ್ಥೆ ಇಲ್ಲದೇ ರೈತರು ಸಾಲೋಟಗಿ ಗ್ರಾಮದ ಶ್ರೀ ಶಿವಯೋಗೀಶ್ವರ ಗೋಶಾಲೆಗೆ ದನಕರುಗಳನ್ನು ತಂದು ಬಿಡುತ್ತಿದ್ದು, ಈಗ ದನಗಳ ಸಂಖ್ಯೆ 500ರ ಗಡಿ ತಲುಪಿದೆ.
ಒಂದು ದಿನಕ್ಕೆ ಒಂದು ಗೋವಿನ ನಿರ್ವಹಣೆ ವೆಚ್ಚ ₹ 70 ಇದ್ದು, ಜಾನುವಾರುಗಳ ಸಂಖ್ಯೆ ಅಧಿಕವಾಗಿರುವುದರಿಂದ ಅವುಗಳ ಪಾಲನೆ ಕಷ್ಟಕರವಾಗಿದೆ.
ಕಳೆದ ವರ್ಷ ಚರ್ಮಗಂಟು ರೋಗದಿಂದ ತತ್ತರಿಸಿದ್ದ ಜಾನುವಾರುಗಳಿಗೆ ಚಿಕಿತ್ಸೆ ನೀಡಿ ಉಳಿಸಿಕೊಂಡು ಹೋಗುವುದೇ ಕಷ್ಟಕರವಾಯಿತು. ಆದರೆ, ಈ ವರ್ಷ ತೀವ್ರ ಬರ ಆವರಿಸಿದ್ದರಿಂದ ಹಸಿ ಮೇವು ಸಿಗದೇ ಮಳೆಗಾಲದಲ್ಲೂ ಒಣ ಮೇವನ್ನೇ ನೀಡಲಾಗುತ್ತಿದೆ. ಹೀಗಾಗಿ ಈಗ ಮೇವು ಖಾಲಿಯಾಗಿದ್ದು, ಮೇವು ಸಂಗ್ರಹವೂ ಸಾಧ್ಯವಾಗುತ್ತಿಲ್ಲ ಎಂದು ಗೋಶಾಲೆ ಆಡಳಿತ ಮಂಡಳಿಯವರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಸಾಮಾಜಿಕ ಸಂಘಟನೆಗಳು ಹಾಗೂ ಸ್ಥಳೀಯ ಸಂಸ್ಥೆಗಳು ಕೈಲಾದಷ್ಟು ನೆರವು ನೀಡುತ್ತಿದ್ದಾರೆ. ಕೆಲವು ರೈತರು ಒಣ ಮೇವು ತಂದು ಗೋಶಾಲೆಗೆ ನೀಡುವ ಮೂಲಕ ಜಾನವಾರುಗಳ ಪಾಲನೆಗೆ ನೆರವಾಗುತ್ತಿದ್ದಾರೆ. ಆದರೆ, ಈ ಮೇವು ಮೂರು ನಾಲ್ಕು ದಿನಗಳಲ್ಲಿ ಖಾಲಿಯಾಗುತ್ತಿದೆ. ಈಗಾಗಲೇ ಈ ಪರಿಸ್ಥಿತಿ ಕುರಿತು ಇಂಡಿಯ ತಹಶೀಲ್ದಾರ್, ಕಂದಾಯ ಉಪವಿಭಾಗಾಧಿಕಾರಿಗಳು ಮತ್ತು ವಿಜಯಪುರ ಜಿಲ್ಲಾಧಿಕಾರಿಗಳಿಗೆ ನೆರವು ನೀಡುವ ಕುರಿತು ಮನವಿ ಸಲ್ಲಿಸಲಾಗಿದೆ ಎಂದು ಆಡಳಿತ ಮಂಡಳಿಯವರು ತಿಳಿಸಿದರು.
ಈ ಹಿಂದಿನ ಸರ್ಕಾರ ‘ಪುಣ್ಯಕೋಟಿ’ ಯೋಜನೆಯಡಿ ಹಾಗೂ ಗೋವುಗಳ ಅಹಾರ ಹಾಗೂ ಆರೈಕೆಗಾಗಿ ವಿವಿಧ ಮಾನದಂಡಗಳನ್ನು ಆಧರಿಸಿ ಎರಡು ಪ್ರತ್ಯೇಕ ಅನುದಾನಗಳನ್ನು ನೀಡಲಾಗುತ್ತಿತ್ತು. ಸದ್ಯದ ಕಾಂಗ್ರೆಸ್ ಸರ್ಕಾರ ಯಾವುದೇ ಅನುದಾನ ನೀಡುತ್ತಿಲ್ಲ. ಹೀಗಾಗಿ ಗೋಶಾಲೆಗಳ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ ಎಂದು ದೂರಿದರು.
ಸದ್ಯ ದೇವಸ್ಥಾನ ಸಮಿತಿಯವರು ಮತ್ತು ಭಕ್ತರು ನಿರ್ವಹಣೆ ಮಾಡುತ್ತಿದ್ದಾರೆ. ಸಾರ್ವಜನಿಕರು ಗೋಶಾಲೆ ನಿರ್ವಹಣೆಗೆ ಸಹಕರಿಸುವವರು ಶ್ರೀ ಶಿವಯೋಗೀಶ್ವರ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಸೋಮಯ್ಯ ಚಿಕ್ಕಪಟ್ಟ 9900345244 ಸಂಪರ್ಕಿಸಲು ಮನವಿ ಮಾಡಿದ್ದಾರೆ.
ಬರದ ಕಾರಣ ರೈತರು ತಮ್ಮ ಜಾನುವಾರು ತಂದು ಗೋಶಾಲೆಗೆ ಬಿಡುತ್ತಿದ್ದಾರೆ. ಸರ್ಕಾರದ ಸಂಬಂಧಿತ ಅಧಿಕಾರಿಗಳು ಗೋಶಾಲೆಗೆ ಭೇಟಿ ನೀಡಿ ಸರ್ಕಾರದ ನೆರವು ನೀಡಿದರೆ ಗೋಶಾಲೆಗೆ ಅನುಕೂಲವಾಗುತ್ತದೆಸೋಮಯ್ಯ ಚಿಕ್ಕಪಟ್ಟ ಅಧ್ಯಕ್ಷ ಶ್ರೀ ಶಿವಯೋಗೀಶ್ವರ ಗೋಶಾಲೆ ಸಾಲೋಟಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.