ADVERTISEMENT

ಯಾರು ಬೇಕಾದವರೂ ಸಿಎಂ ಆಗಬಹುದು; ಶಿವಾನಂದ ಪಾಟೀಲ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2024, 14:35 IST
Last Updated 8 ಸೆಪ್ಟೆಂಬರ್ 2024, 14:35 IST
ಶಿವಾನಂದ ಪಾಟೀಲ
ಶಿವಾನಂದ ಪಾಟೀಲ   

ವಿಜಯಪುರ: ಕೆಲವೊಬ್ಬರು ರಾಜಕಾರಣ ಮಾಡುವುದರಲ್ಲೇ ನಿರತರಾಗಿದ್ದಾರೆ. ನಾನು ಅಭಿವೃದ್ಧಿ ಮಾಡುವುದರಲ್ಲಿ ನಿರತನಾಗಿದ್ದೇನೆ. ನನ್ನ ಮೂರು ಇಲಾಖೆಗಳ ಅಭಿವೃದ್ಧಿ ಬಿಟ್ಟು ಬೇರೆ ಏನು ಮಾಡಲ್ಲ. ಯಾರು ಬೇಕಾದವರೂ ಸಿಎಂ ಆಗಬಹುದು ಎಂದು ಜವಳಿ, ಸಕ್ಕರೆ ಅಭಿವೃದ್ದಿ ಹಾಗೂ ಎಪಿಎಂಸಿ ಸಚಿವ ಶಿವಾನಂದ ಪಾಟೀಲರು ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಅಭಿವೃದ್ಧಿ ವಿಚಾರವಾಗಿ ಸುದ್ದಿಗೋಷ್ಟಿ ನಡೆಸುತ್ತಿದ್ದೆ. ಆದರೆ ಅಲ್ಲಿ ಅಭಿವೃದ್ದಿ ಬಿಟ್ಟು ರಾಜಕೀಯ ಕುರಿತು ಪ್ರಶ್ನೆ ಕೇಳಲಾಯಿತು. ನನ್ನ ಹೇಳಿಕೆಯನ್ನು ಮಾಧ್ಯಮಗಳು ವಿವಾದಕ್ಕೀಡು ಮಾಡಿವೆ ಎಂದರು.

ಪರಮೇಶ್ವರ ನಿವಾಸಕ್ಕೆ ಎಂ.ಬಿ. ಪಾಟೀಲ ಭೇಟಿ ತಪ್ಪೇನು? ನಮ್ಮಲ್ಲಿ ಸೀನಿಯರ್ಸ್ ಬಹಳ ಜನರಿದ್ದಾರೆ. ಸೀನಿಯರ್ಸ್ ಬಳಿಕ ಜೂನಿಯರ್ಸ್ ಸರದಿ ಎಂದಿದ್ದೆ, ಎಂ.ಬಿ. ಪಾಟೀಲ ಸಿಎಂ ಆದರೆ ನನ್ನ ಅಂಭ್ಯಂತರ ಇಲ್ಲ. ಈ ನಿಟ್ಟಿನಲ್ಲಿ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಶಾಸಕರು ನಿರ್ಧರಿಸುತ್ತಾರೆ ಎಂದರು.

ADVERTISEMENT

ಸತೀಶ ಜಾರಕಿಹೋಳಿ, ಪರಮೇಶ್ವರ ಹಾಗೂ ಇತರರು ಸಿಎಂ ಗಾದಿಗೆ ಪೈಪೋಟಿ ನಡೆಸಿದ್ದಾರಲ್ಲ ಎಂಬ ಪ್ರಶ್ನೆಗೆ, ಯಾರು ಬೇಕಾದವರು ಆಗಲಿ. ಕಾಂಗ್ರೆಸ್‌ನಲ್ಲಿ ಒಗ್ಗಟ್ಟಾಗಿದ್ದೇವೆ. ಯಾರೇ ಸಿಎಂ ಆದರೂ ಬೆಂಬಲವಿದೆ ಎಂದರು.

ಸಿಎಂ ಸಿದ್ದರಾಮಯ್ಯ ಬದಲಾವಣೆ ಆಗಬಹುದಾ ಎಂಬ ಪ್ರಶ್ನೆಗೆ, ಸಿಎಂ ಸಿದ್ದರಾಮಯ್ಯ ಬದಲಾವಣೆ ಆಗಲ್ಲ ಎಂಬ ವಿಶ್ವಾಸವಿದೆ. ಸಿದ್ದರಾಮಯ್ಯ ತಪ್ಪೇ ಮಾಡಿಲ್ಲ ಎಂದರೆ ಯಾಕೆ ಬದಲಾವಣೆ ಆಗಬೇಕು ಎಂದು ಮರು ಪ್ರಶ್ನಿಸಿದರು.

ನಾನು ಕಾಂಗ್ರೆಸ್‌ನಲ್ಲಿ ಸೀನಿಯರ್. ಶಿವಾನಂದ ಪಾಟೀಲ್ ಅವರು ಜೆಡಿಎಸ್‌ನಿಂದ ಬಂದವರು ಎಂಬ ಎಂ.ಬಿ. ಪಾಟೀಲ ಹೇಳಿಕೆ ನೀಡಿದ್ದಾರೆ. ನಾನು ಜೆಡಿಎಸ್ ಇರಲಿ, ಬಿಜೆಪಿ ಇರಲಿ. ಆದರೆ ನನ್ನನ್ನು ಕಾಂಗ್ರೆಸ್‌ಗೆ ಕರೆ ತಂದವರು ಯಾರು ಎಂದು ಎಂ.ಬಿ. ಪಾಟೀಲಗೆ ಪರೋಕ್ಷವಾಗಿ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.